ಬಾಂಗ್ಲಾದೇಶದ ಅಂಡರ್-19 ಕ್ರಿಕೆಟಿಗ ಶಾವೊನ್ ಆಸ್ಪತ್ರೆಗೆ ದಾಖಲು
ಚಿತ್ತಗಾಂಗ್, ಜ.21: ನೆಟ್ ಪ್ರಾಕ್ಟೀಸ್‌ನ ವೇಳೆ ತಲೆಗೆ ಚೆಂಡು ತಗಲಿದ ಪರಿಣಾಮ ಗಾಯಗೊಂಡಿರುವ ಬಾಂಗ್ಲಾದೇಶದ ಯುವ ಕ್ರಿಕೆಟಿಗ ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಇಲ್ಲಿ ನಡೆದಿದೆ. ಮುಂಬರುವ ಅಂಡರ್-19 ವಿಶ್ವಕಪ್‌ಗೆ ಅಭ್ಯಾಸ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
‘‘ಸ್ಪಿನ್ ಬೌಲರ್ ಸಾಲಿಹ್ ಅಹ್ಮದ್ ಶಾವೊನ್ ಗಾಝಿ ರಿಟರ್ನ್ ಕ್ಯಾಚ್ ಪಡೆಯುವ ಯತ್ನದಲ್ಲಿದ್ದಾಗ ಚೆಂಡು ಅವರ ತಲೆಗೆ ಅಪ್ಪಳಿಸಿತ್ತು’’ಎಂದು ಅಂಡರ್-19 ತಂಡದ ಕೋಚ್ ಮೀಝಾನುರ್ರಹ್ಮಾನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ತಕ್ಷಣವೇ ಗಾಝಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಲಾಗಿದೆ. ಗಾಯ ಗಂಭೀರವಾಗಿಲ್ಲ ಎಂದು ಕೋಚ್ ದೃಢಪಡಿಸಿದ್ದಾರೆ.
ಗಾಝಿಗೆ ಸಿಟಿ ಸ್ಕಾನಿಂಗ್ ನಡೆಸಲಾಗಿದೆ. ಅವರು ಬೇಗನೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಟೀಮ್ ಮ್ಯಾನೇಜರ್ ತಿಳಿಸಿದ್ದಾರೆ.
ಯುವ ಸ್ಪಿನ್ನರ್ ಗಾಝಿ ಇತ್ತೀಚೆಗೆ ವೆಸ್ಟ್‌ಇಂಡೀಸ್ ವಿರುದ್ಧ ನಡೆದಿದ್ದ ಯೂತ್ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 24 ರನ್‌ಗೆ 4 ವಿಕೆಟ್‌ಗಳನ್ನು ಪಡೆದು ಗಮನ ಸೆಳೆದಿದ್ದರು. ಎರಡನೆ ಪಂದ್ಯದಲ್ಲೂ 19 ರನ್‌ಗೆ 3 ವಿಕೆಟ್ ಕಬಳಿಸಿದ್ದರು. ಮೂರನೆ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದರು.
ಆತಿಥೇಯ ಬಾಂಗ್ಲಾದೇಶ ತಂಡ ಜ.27 ರಂದು ನಡೆಯಲಿರುವ ಅಂಡರ್-19 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕ ತಂಡವನ್ನು ಎದುರಿಸಲಿದೆ