×
Ad

ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿ: ಸಿಂಧು ಚಾಂಪಿಯನ್

Update: 2016-01-24 21:45 IST

ಮಲೇಷ್ಯಾ, ಜ.24: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸ್ಕಾಟ್ಲೆಂಡ್‌ನ ಕರ್ಸ್ಟಿ ಗಿಲ್ಮೋರ್‌ರನ್ನು 21-15, 21-9 ಗೇಮ್‌ಗಳ ಅಂತರದಿಂದ ಸೋಲಿಸಿ ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

 ರವಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಸಿಂಧು ಅವರು ಸ್ಕಾಟ್ಲೆಂಡ್‌ನ ಕಿರ್ಸ್ಟಿ ಗಿಲ್ಮೌರ್‌ರನ್ನು 21-15, 21-9 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ. ಈ ಮೂಲಕ ಮಲೇಷ್ಯಾದಲ್ಲಿ ಎರಡನೆ ಮಾಸ್ಟರ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

2013ರಲ್ಲಿ ಮೊದಲ ಬಾರಿ ಮಲೇಷ್ಯಾ ಜಿಪಿ ಗೋಲ್ಡ್ ಟೂರ್ನಿಯನ್ನು ಜಯಿಸಿದ್ದರು. ಸಿಂಧುಗೆ ಇದು ಐದನೆ ಗ್ರಾನ್‌ಪ್ರಿ ಗೋಲ್ಡ್ ಪ್ರಶಸ್ತಿಯಾಗಿದೆ. ಕಳೆದ ಮೂರು ಟೂರ್ನಿಗಳಲ್ಲಿ ಎರಡನೆ ಪ್ರಶಸ್ತಿ ಇದಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಸಿಂಧು ಮಕಾವು ಓಪನ್ ಕಿರೀಟವನ್ನು ಧರಿಸಿದ್ದರು.

ಚೊಚ್ಚಲ ಟೈಮ್ಸ್ ಆಫ್ ಇಂಡಿಯಾದ ಸ್ಪೋರ್ಟ್ಸ್ ಪ್ರಶಸ್ತಿಗೆ ಭಾಜನರಾಗಿದ್ದ ಹೈದರಾಬಾದ್‌ನ ಸಿಂಧು ಕೇವಲ 32 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡರು. ವಿಶ್ವದ ನಂ.12ನೆ ಆಟಗಾರ್ತಿ ಸಿಂಧು ಅವರು ಕಿರ್ಸ್ಟಿ ವಿರುದ್ಧ 2013ರಲ್ಲಿ ಆಡಿದ್ದ ಫ್ರೆಂಚ್ ಓಪನ್‌ನಲ್ಲಿ ಸೋತಿದ್ದರು.

ವಿಶ್ವದ ನಂ.20ನೆ ಆಟಗಾರ್ತಿ ಕಿರ್ಸ್ಟಿ 20ರ ಹರೆಯದ ಸಿಂಧುಗೆ ಪೈಪೋಟಿ ನೀಡಿದರು. ಆದಾಗ್ಯೂ ಮೊದಲ ಗೇಮ್‌ನಲ್ಲೇ ಮೇಲುಗೈ ಸಾಧಿಸಿದ ಸಿಂಧು ಪಂದ್ಯದುದ್ದಕ್ಕೂ ಸ್ಥಿರತೆ ಕಾಪಾಡಿಕೊಂಡು ಕೇವಲ 32 ನಿಮಿಷಗಳಲ್ಲಿ ಪಂದ್ಯವನ್ನು ಜಯಿಸಿದರು.

ಹೊಸ ವರ್ಷದ ಮೊದಲ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸಿಂಧು ಮುಂಬರುವ ಒಲಿಂಪಿಕ್ಸ್‌ನಲ್ಲೂ ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಸಿಂಧುಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಬಿಎಐ

 ಹೊಸದಿಲ್ಲಿ, ಜ.24: ಮಲೇಷ್ಯಾ ಮಾಸ್ಟರ್ಸ್‌ ಗ್ರಾನ್ ಪ್ರಿ ಟೂರ್ನಿಯನ್ನು ಜಯಿಸಿರುವ ಸ್ಟಾರ್ ಶಟ್ಲರ್ ಪಿ.ವಿ.ಸಿಂಧುಗೆ ಅಭಿನಂದನೆ ಸಲ್ಲಿಸಿರುವ ಭಾರತದ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ) ಆಕೆಯ ಸಾಧನೆಗೆ 5 ಲಕ್ಷ ರೂ. ಬಹುಮಾನವನ್ನು ಘೋಷಿಸಿದೆ.

ರವಿವಾರ ನಡೆದ ಫೈನಲ್‌ನಲ್ಲಿ 3ನೆ ಶ್ರೇಯಾಂಕಿತೆ ಸಿಂಧು ಸ್ಕಾಟ್ಲೆಂಡ್‌ನ ಕಿರ್ಸ್ಟಿ ಗಿಲ್ಮೌರ್‌ರನ್ನು ಕೇವಲ 32 ನಿಮಿಷಗಳಲ್ಲಿ ನೇರ ಗೇಮ್‌ಗಳಿಂದ ಮಣಿಸಿ ಪ್ರಶಸ್ತಿಯನ್ನು ಜಯಿಸಿದ್ದರು.

‘‘ಈ ಅದ್ಭುತ ಗೆಲುವಿಗೆ ಸಿಂಧುಗೆ ತಾನು ಅಭಿನಂದನೆ ಸಲ್ಲಿಸುವೆ. 2013ರಲ್ಲಿ ಆಕೆ ಮಲೇಷ್ಯಾ ಮಾಸ್ಟರ್ಸ್‌ ಪ್ರಶಸ್ತಿ ಜಯಿಸಿದ್ದರು. ಈ ಬಾರಿ ಮತ್ತೊಮ್ಮೆ ಈ ಸಾಧನೆ ಮಾಡಿದ್ದಾರೆ. ಆಕೆಯ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರಶಸ್ತಿಗಳನ್ನು ಜಯಿಸುವಂತಾಗಲಿ. ಈ ಗೆಲುವು ರಿಯೋ ಒಲಿಂಪಿಕ್ಸ್‌ಗೆ ವೇದಿಕೆಯಾಗಲಿ’’ ಎಂದು ಬಿಎಐ ಅಧ್ಯಕ್ಷ ಅಖಿಲೇಶ್ ದಾಸ್ ಗುಪ್ತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News