×
Ad

ಮೊದಲ ಟ್ವೆಂಟಿ-20: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಜಯ

Update: 2016-01-26 17:49 IST

ಕೊಹ್ಲಿ ಜೀವನಶ್ರೇಷ್ಠ ಬ್ಯಾಟಿಂಗ್, ಬೌಲರ್‌ಗಳ ಸಂಘಟಿತ ಪ್ರದರ್ಶನ

ಅಡಿಲೇಡ್, ಜ.26: ವಿರಾಟ್ ಕೊಹ್ಲಿ ಅವರ ಜೀವನಶ್ರೇಷ್ಠ ಪ್ರದರ್ಶನ, ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು 37 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ ಧೋನಿ ಪಡೆ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಗಣರಾಜ್ಯೋತ್ಸವ ದಿನವನ್ನು ಗೆಲುವಿನೊಂದಿಗೆ ಆಚರಿಸಿಕೊಂಡ ಭಾರತ ಕಾಂಗರೂ ನಾಡಿನಲ್ಲಿ ಕೊನೆಗೂ ಗೆಲುವು ದಾಖಲಿಸಿತು. ಎರಡನೆ ಪಂದ್ಯ ಶುಕ್ರವಾರ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಆಸ್ಟ್ರೇಲಿಯಕ್ಕೆ 189 ರನ್ ಗುರಿ ನೀಡಿತು. ಚೊಚ್ಚಲ ಪಂದ್ಯ ಆಡಿದ ಜಸ್ಪ್ರೀತ್ ಬುಮ್ರಾ(3-23) ಹಾಗೂ ಹಾರ್ದಿಕ್ ಪಾಂಡ್ಯ(2-37), ಹಿರಿಯ ಸ್ಪಿನ್ನರ್‌ಗಳಾದ ಆರ್.ಅಶ್ವಿನ್(2-28), ರವೀಂದ್ರ ಜಡೇಜ(2-21) ಸಂಘಟಿತ ದಾಳಿ ನಡೆಸಿ ಆಸ್ಟ್ರೇಲಿಯವನ್ನು 19.3 ಓವರ್‌ಗಳಲ್ಲಿ 151 ರನ್‌ಗೆ ಆಲೌಟ್ ಮಾಡಿದರು. 2011ರ ವಿಶ್ವಕಪ್‌ನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಮರಳಿದ ಆಶೀಶ್ ನೆಹ್ರಾ 4 ಓವರ್‌ಗಳಲ್ಲಿ 30 ರನ್‌ಗೆ 1 ವಿಕೆಟ್ ಪಡೆದರು.

 ಆಸ್ಟ್ರೇಲಿಯದ ಪರ ನಾಯಕ ಆ್ಯರೊನ್ ಫಿಂಚ್(44 ರನ್, 33 ಎಸೆತ, 4 ಬೌಂಡರಿ, 2 ಸಿಕ್ಸರ್) ಅಗ್ರ ಸ್ಕೋರರ್ ಎನಿಸಿಕೊಂಡರು. ಸ್ಟೀವನ್ ಸ್ಮಿತ್(21), ಡೇವಿಡ್ ವಾರ್ನರ್(17) ಹಾಗೂ ಲಿನ್(17) ಎರಡಂಕೆಯ ಸ್ಕೋರ್ ದಾಖಲಿಸಿದರು. ಮೊದಲ ವಿಕೆಟ್‌ಗೆ 47 ರನ್ ಕಲೆ ಹಾಕಿದ ಆಸೀಸ್‌ನ ಆರಂಭಿಕ ದಾಂಡಿಗರಾದ ಆ್ಯರೊನ್ ಫಿಂಚ್ ಹಾಗೂ ವಾರ್ನರ್ ತಂಡಕ್ಕೆ ಉತ್ತಮ ಆರಂಭ ನೀಡಿದರು.

ಹೊಸ ಚೆಂಡಿನೊಂದಿಗೆ ಬೌಲಿಂಗ್ ಆರಂಭಿಸಿದ ಅಶ್ವಿನ್ ಇನಿಂಗ್ಸ್‌ನ 2ನೆ ಓವರ್‌ನಲ್ಲಿ 17 ರನ್ ನೀಡಿ ದುಬಾರಿಯಾದರು. ಆದಾಗ್ಯೂ, ಅವರು ಮುಂದಿನ 3 ಓವರ್‌ಗಳಲ್ಲಿ ಕೇವಲ 11 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದರು.

  ಇನಿಂಗ್ಸ್‌ನ 6ನೆ ಓವರ್‌ನಲ್ಲಿ ದಾಳಿಗಿಳಿದ ಬುಮ್ರಾ ಅಪಾಯಕಾರಿ ದಾಂಡಿಗ ವಾರ್ನರ್ ವಿಕೆಟ್ ಉರುಳಿಸಿ ಭಾರತಕ್ಕೆ ಮೊದಲ ಮೇಲುಗೈ ಒದಗಿಸಿದರು. ಸ್ಪಿನ್ನರ್‌ಗಳಾದ ಅಶ್ವಿನ್ ಹಾಗೂ ರವೀಂದ್ರ ಜಡೇಜ ಸತತ ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ತಿರುಗೇಟು ನೀಡಲು ನೆರವಾದರು.

 ಸ್ಮಿತ್ ಎಡಗೈ ಸ್ಪಿನ್ನರ್ ಜಡೇಜಗೆ ವಿಕೆಟ್ ಒಪ್ಪಿಸಿದರು. ಅಶ್ವಿನ್ ಅವರು ನಾಯಕ ಫಿಂಚ್ ವಿಕೆಟ್ ಉರುಳಿಸಿದರು. ಸ್ಮಿತ್ ಔಟಾದ ನಂತರ ಒತ್ತಡಕ್ಕೆ ಸಿಲುಕಿದ ಆಸ್ಟ್ರೇಲಿಯ 62 ರನ್‌ಗೆ ಕೊನೆಯ 9 ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾರತ 188/3: ಇದಕ್ಕೆ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಟೀಮ್‌ಇಂಡಿಯಾ ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ 3ನೆ ವಿಕೆಟ್‌ಗೆ ಸೇರಿಸಿದ 134 ರನ್ ಜೊತೆಯಾಟದ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 188 ರನ್ ಗಳಿಸಿತು.

ವಿರಾಟ್ ಕೊಹ್ಲಿ (ಔಟಾಗದೆ 90 ರನ್, 55 ಎಸೆತ, 9 ಬೌಂಡರಿ, 2 ಸಿಕ್ಸರ್) ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದರು. ಪೋಷಕನ ಪಾತ್ರ ನಿರ್ವಹಿಸಿದ ಸುರೇಶ್ ರೈನಾ 34 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ಗಳ ಸಹಿತ 41 ರನ್ ಗಳಿಸಿದರು.

ಏಕದಿನ ಸರಣಿಯ ಪ್ರದರ್ಶನವನ್ನು ಚುಟುಕು ಪಂದ್ಯದಲ್ಲೂ ಮುಂದುವರಿಸಿದ ರೋಹಿತ್ ಶರ್ಮ ಆಸ್ಟ್ರೇಲಿಯದ ವೇಗದ ಬೌಲರ್ ಶಾನ್ ಟೇಟ್ ಎಸೆದ ಮೊದಲ ಓವರ್‌ನಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರು. ಟೇಟ್ ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ರೋಹಿತ್(31 ರನ್) ಶಿಖರ್ ಧವನ್(5)ರೊಂದಿಗೆ ಮೊದಲ ವಿಕೆಟ್‌ಗೆ 41 ರನ್ ಜೊತೆಯಾಟ ನಡೆಸಿದರು.

 ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಇನಿಂಗ್ಸ್‌ನ 5ನೆ ಓವರ್‌ನ ಮೊದಲ ಎಸೆತದಲ್ಲಿ ಉತ್ತಮ ಮೊತ್ತದತ್ತ ಸಾಗುತ್ತಿದ್ದ ರೋಹಿತ್‌ಗೆ ಪೆವಿಲಿಯನ್ ದಾರಿ ತೋರಿಸಿದರು. ವ್ಯಾಟ್ಸನ್ 5ನೆ ಓವರ್‌ನ 5ನೆ ಎಸೆತದಲ್ಲಿ ಶಿಖರ್ ಧವನ್‌ಗೆ ವಿಕೆಟ್ ಕಿತ್ತರು.

ಆಗ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಮೂರನೆ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಪ್ರಸ್ತುತ ಆಸ್ಟ್ರೇಲಿಯ ಪ್ರವಾಸದಲ್ಲಿ ಶ್ರೇಷ್ಠ ಫಾರ್ಮ್‌ನಲ್ಲಿರುವ ಕೊಹ್ಲಿ 32 ಎಸೆತಗಳಲ್ಲಿ 10ನೆ ಟ್ವೆಂಟಿ-20 ಅರ್ಧಶತಕ ಸಿಡಿಸಿದರು.

ರೈನಾ ವಿಕೆಟ್ ಕಬಳಿಸಿದ ಫಾಕ್ನರ್ 3ನೆ ವಿಕೆಟ್ ಜೊತೆಯಾಟಕ್ಕೆ ಅಂತ್ಯ ಹಾಡಿದರು. ನಾಯಕ ಎಂಎಸ್ ಧೋನಿ 3 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ಗಳ ಸಹಿತ ಔಟಾಗದೆ 11 ರನ್ ಗಳಿಸಿದರು.

ಆಸ್ಟ್ರೇಲಿಯದ ಬೌಲಿಂಗ್‌ನಲ್ಲಿ ವೇಗದ ಬೌಲರ್ ಶಾನ್ ಟೇಟ್ ದುಬಾರಿ ಬೌಲರ್ (4 ಓವರ್, 45 ರನ್) ಎನಿಸಿಕೊಂಡರು. ವ್ಯಾಟ್ಸನ್(2-24) 2 ವಿಕೆಟ್ ಪಡೆದರು.

ಆಸ್ಟ್ರೇಲಿಯದಿಂದ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿದ್ದ ಭಾರತ ತಂಡ ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬುಮ್ರಾಗೆ ಚೊಚ್ಚಲ ಟ್ವೆಂಟಿ-20 ಪಂದ್ಯ ಆಡುವ ಅವಕಾಶ ನೀಡಿತ್ತು. ಹಿರಿಯ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಆಶೀಶ್ ನೆಹ್ರಾ ಕೂಡ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರು.

ಸ್ಕೋರ್ ವಿವರ

ಭಾರತ: 20 ಓವರ್‌ಗಳಲ್ಲಿ 188/3

ರೋಹಿತ್ ಶರ್ಮ ಸಿ ಫಾಕ್ನರ್ ಬಿ ವ್ಯಾಟ್ಸನ್     31

ಶಿಖರ್ ಧವನ್ ಸಿ ವೇಡ್ ಬಿ ವ್ಯಾಟ್ಸನ್          05

ವಿರಾಟ್ ಕೊಹ್ಲಿ ಔಟಾಗದೆ                       90

ಸುರೇಶ್ ರೈನಾ ಬಿ ಫಾಕ್ನರ್                   41

ಎಂ.ಎಸ್. ಧೋನಿ ಔಟಾಗದೆ                  11

ಇತರ 10

ವಿಕೆಟ್ ಪತನ: 1-40, 2-41, 3-175

ಬೌಲಿಂಗ್ ವಿವರ:

 ಶಾನ್ ಟೈಟ್         4-0-45-0

ಕೇನ್ ರಿಚರ್ಡ್‌ಸನ್    4-0-41-0

ಫಾಕ್ನರ್               4-0-43-1

ವ್ಯಾಟ್ಸನ್                 4-0-24-2

ಬಾಯ್ಸ                  3-0-23-0

ಹೆಡ್                       1-0-9-0

ಆಸ್ಟ್ರೇಲಿಯ: 19.3 ಓವರ್‌ಗಳಲ್ಲಿ 151 ರನ್‌ಗೆ ಆಲೌಟ್

ಆ್ಯರೊನ್ ಫಿಂಚ್ ಎಲ್‌ಬಿಡಬ್ಲೂ ಅಶ್ವಿನ್         44

ಡೇವಿಡ್ ವಾರ್ನರ್ ಸಿ ಕೊಹ್ಲಿ ಬಿ ಬುಮ್ರಾ         17

ಸ್ಟೀವನ್ ಸ್ಮಿತ್ ಸಿ ಕೊಹ್ಲಿ ಬಿ ಜಡೇಜ              21

ಹೆಡ್ ಎಲ್‌ಬಿಡಬ್ಲೂ ಜಡೇಜ                       02

ಲಿನ್ ಸಿ ಯುವರಾಜ್ ಬಿ ಪಾಂಡ್ಯ                17

ಶೇನ್ ವ್ಯಾಟ್ಸನ್ ಸಿ ನೆಹ್ರಾ ಬಿ ಅಶ್ವಿನ್          12

ಮ್ಯಾಥ್ಯೂ ವೇಡ್ ಸಿ ಜಡೇಜ ಬಿ ಪಾಂಡ್ಯ       05

ಫಾಕ್ನರ್ ಬಿ ಬುಮ್ರಾ                              10

ರಿಚರ್ಡ್ಸ್‌ಸನ್ ಬಿ ನೆಹ್ರಾ                         09

ಬಾಯ್ಸ ಸಿ ಪಾಂಡ್ಯ ಬಿ ಬುಮ್ರಾ                03

ಶಾನ್ ಟೇಟ್ ಔಟಾಗದೆ                         01

ಇತರ 10

ವಿಕೆಟ್ ಪತನ: 1-47, 2-89, 3-89, 4-93, 5-110, 6-124, 7-129, 8-143, 9-149, 10-151.

ಬೌಲಿಂಗ್ ವಿವರ:

ಆಶೀಷ್ ನೆಹ್ರಾ          4-0-30-1

ಆರ್.ಅಶ್ವಿನ್             4-0-28-2

ಜಸ್ಪ್ರೀತ್ ಬುಮ್ರಾ      3.3-0-23-3

ರವೀಂದ್ರ ಜಡೇಜ      4-0-21-2

ಹಾರ್ದಿಕ್ ಪಾಂಡ್ಯ     3-0-37-2

ಯುವರಾಜ್ ಸಿಂಗ್    1-0-10-0.

ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ

ನಂಬರ್ಸ್‌ ಗೇಮ್

 1: ವಿರಾಟ್ ಕೊಹ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 10 ಬಾರಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ದಾಂಡಿಗ. ರೋಹಿತ್ ಶರ್ಮ ಹಾಗೂ ಯುವರಾಜ್ ಸಿಂಗ್ ತಲಾ 8 ಅರ್ಧಶತಕಗಳನ್ನು ಬಾರಿಸಿದ್ದಾರೆ.

60: ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಆಡಿರುವ 10 ಟ್ವೆಂಟಿ-20 ಪಂದ್ಯಗಳಲ್ಲಿ ಆರರಲ್ಲಿ ಜಯ ಹಾಗೂ ನಾಲ್ಕರಲ್ಲಿ ಸೋಲು ಅನುಭವಿಸಿದ್ದು, ಗೆಲುವಿನ ಸರಾಸರಿ ಶೇ.60.

 134: ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಟ್ವೆಂಟಿ-20ಯಲ್ಲಿ 3ನೆ ವಿಕೆಟ್‌ಗೆ ಗರಿಷ್ಠ ಜೊತೆಯಾಟ(134) ನಡೆಸಿದ್ದಾರೆ. 2010ರಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ರೈನಾ ಹಾಗೂ ಯುವರಾಜ್ ದಾಖಲಿಸಿದ್ದ 88 ರನ್ ಜೊತೆಯಾಟವನ್ನು ಮುರಿದು ಬಿದ್ದಿದೆ.

19: ಹಾರ್ದಿಕ್ ಪಾಂಡ್ಯ ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲಿ 19 ರನ್ ನೀಡಿದರು. ಚೊಚ್ಚಲ ಪಂದ್ಯದಲ್ಲಿ ಅತ್ಯಂತ ಹೆಚ್ಚು ರನ್ ನೀಡಿದ ಬೌಲರ್ ಎಂಬ ಅಪಕೀರ್ತಿಗೆ ಒಳಗಾದರು.

2: ಸುರೇಶ್ ರೈನಾ(1,024) ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಸಾವಿರ ರನ್ ಪೂರೈಸಿದ ಭಾರತದ ಎರಡನೆ ದಾಂಡಿಗ ಎನಿಸಿಕೊಂಡರು. ವಿರಾಟ್ ಕೊಹ್ಲಿ (1,106)ಈ ಸಾಧನೆ ಮಾಡಿದ ಮೊದಲಿಗ.

78: ಕೊಹ್ಲಿ 2012ರಲ್ಲಿ ಪಾಕಿಸ್ತಾನ ವಿರುದ್ಧ ಗಳಿಸಿದ್ದ 78 ರನ್ ಈ ವರೆಗಿನ ಗರಿಷ್ಠ ವೈಯಕ್ತಿಕ ಸ್ಕೋರಾಗಿತ್ತು. ಔಟಾಗದೆ 90 ರನ್ ಗಳಿಸಿರುವ ಕೊಹ್ಲಿ ಟ್ವೆಂಟಿ-20 ಪಂದ್ಯದಲ್ಲಿ ಎರಡನೆ ಗರಿಷ್ಠ ಸ್ಕೋರ್ ದಾಖಲಿಸಿದರು. 519: ಕೊಹ್ಲಿ ಕಳೆದ 10 ಟ್ವೆಂಟಿ-20 ಇನಿಂಗ್ಸ್‌ಗಳಲ್ಲಿ ಆರು ಅರ್ಧಶತಕಗಳ ಸಹಿತ ಒಟ್ಟು 519 ರನ್ ಗಳಿಸಿದ್ದಾರೆ.

2010: ಆಸ್ಟ್ರೇಲಿಯ 2010ರಲ್ಲಿ ಪಾಕಿಸ್ತಾನದ ವಿರುದ್ಧದ ಟ್ವೆಂಟಿ-20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಕೊನೆಯ ಬಾರಿ 160 ಹಾಗೂ ಅದಕ್ಕಿಂತ ಹೆಚ್ಚು ಸ್ಕೋರ್‌ನ್ನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿತ್ತು.

3/23: ಜಸ್ಪ್ರೀತ್ ಬುಮ್ರಾ ಚೊಚ್ಚಲ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ನಾಲ್ಕನೆ ಬೌಲರ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News