ಆಸ್ಟ್ರೇಲಿಯನ್ ಓಪನ್: ಸೆಮಿಫೈನಲ್‌ನಲ್ಲಿ ಜೊಕೊವಿಕ್-ಫೆಡರರ್ ಸೆಣಸು
ಮೆಲ್ಬೋರ್ನ್, ಜ.26: ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಮಂಗಳವಾರ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಜಪಾನ್‌ನ ಕೀ ನಿಶಿಕೊರಿ ಅವರನ್ನು ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೊವಿಕ್ ಅವರು ನಿಶಿಕೊರಿ ಅವರನ್ನು 6-3, 6-2, 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು. ಜೊಕೊವಿಕ್ ಸೆಮಿ ಫೈನಲ್‌ನಲ್ಲಿ ಸ್ವಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್‌ರನ್ನು ಎದುರಿಸಲಿದ್ದಾರೆ.
ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಝೆಕ್ ಆಟಗಾರ ಥಾಮಸ್ ಬೆರ್ಡಿಕ್‌ರನ್ನು ನೇರ ಸೆಟ್‌ಗಳಿಂದ ಸದೆ ಬಡಿದ ಫೆಡರರ್ ಕಳೆದ 13 ವರ್ಷಗಳಲ್ಲಿ 12ನೆ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತೇರ್ಗಡೆಯಾದರು.
ಮಂಗಳವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸ್ವಿಸ್‌ನ 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ 6ನೆ ಶ್ರೇಯಾಂಕದ ಬೆರ್ಡಿಕ್‌ರನ್ನು 2 ಗಂಟೆ, 16 ನಿಮಿಷಗಳ ಹೋರಾಟದಲ್ಲಿ 7-6(7/4), 6-2, 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು.
34ರ ಹರೆಯದ ಫೆಡರರ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 39ನೆ ಬಾರಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಐದನೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
ಸೆರೆನಾಗೆ ಶರಣಾದ ಶರಪೋವಾ
ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ರಶ್ಯದ ಮರಿಯಾ ಶರಪೋವಾರನ್ನು 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿದರು. ಶರಪೋವಾ ಸತತ 18ನೆ ಬಾರಿ ಸೆರೆನಾಗೆ ಸೋತಿದ್ದಾರೆ.
2004ರ ವಿಂಬಲ್ಡನ್ ಫೈನಲ್‌ನಲ್ಲಿ ಕೊನೆಯ ಬಾರಿ ಸೆರೆನಾರನ್ನು ಮಣಿಸಿ ಚಾಂಪಿಯನ್ ಆಗಿದ್ದರು. 2005ರ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಬಳಿಕ ಸೆರೆನಾ ವಿರುದ್ಧ ಶರಪೋವಾ ಒಂದೂ ಪಂದ್ಯವನ್ನು ಜಯಿಸಿಲ್ಲ.
ಮೆಲ್ಬೋರ್ನ್ ಪಾರ್ಕ್‌ನಲ್ಲಿ ಆರು ಬಾರಿ ಚಾಂಪಿಯನ್ ಆಗಿರುವ ಸೆರೆನಾ ಸೆಮಿ ಫೈನಲ್‌ನಲ್ಲಿ ಅಗ್ನೆಸ್ಕಾ ರಾಂಡ್ವಾಸ್ಕಾರನ್ನು ಎದುರಿಸಲಿದ್ದಾರೆ.