×
Ad

ಪಾಕಿಸ್ತಾನದಲ್ಲಿ ಕೊಹ್ಲಿಯ ಕಟ್ಟಾ ಅಭಿಮಾನಿಯ ಬಂಧನ!

Update: 2016-01-27 19:02 IST

ಮನೆಯ ಛಾವಣಿಯಲ್ಲಿ ಭಾರತದ ಧ್ವಜ ಹಾರಿಸಿದ ಆರೋಪ

ಲಾಹೋರ್, ಜ.27: ಭಾರತದ ದಾಂಡಿಗ ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯೋರ್ವ ತನ್ನ ಅಭಿಮಾನವನ್ನು ತೋರ್ಪಡಿಸಲು ಹೋಗಿ ಬಂಧನಕ್ಕೆ ಒಳಗಾಗಿರುವ ಘಟನೆ ಲಾಹೋರ್‌ನ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

ಲಾಹೋರ್‌ನಿಂದ 200 ಕಿ.ಮೀ. ದೂರದಲ್ಲಿರುವ ಪಂಜಾಬ್ ಪ್ರಾಂತ್ಯದ ಒಕಾರಾ ಜಿಲ್ಲೆಯ ಉಮರ್ ಡ್ರಾಝ್ ಎಂಬಾತ ಕ್ರಿಕೆಟಿಗ ಕೊಹ್ಲಿ ಮೇಲಿನ ಅಭಿಮಾನಕ್ಕೆ ತನ್ನ ಮನೆಯ ಮೇಲ್ಛಾವಣಿಯ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. ದೂರಿನ ಮೇರೆಗೆ ಜ.26 ರಂದು ಉಮರ್ ಮನೆಗೆ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

‘‘ನಾವು ಉಮರ್ ಮನೆಯ ಮೇಲೆ ದಾಳಿ ನಡೆಸಿದ್ದೇವೆ. ಅವರ ಮನೆಯ ಮೇಲೆ ಹಾರಿಸಲಾಗಿದ್ದ ಭಾರತದ ರಾಷ್ಟ್ರ ಧ್ವಜವನ್ನು ವಶಪಡಿಸಿಕೊಳ್ಳಲಾಗಿದೆ. ಉಮರ್‌ರನ್ನು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿದ್ದೇವೆ. ಇದೀಗ ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಆತನ ವಿರುದ್ಧ ಕೇಸನ್ನು ದಾಖಲಿಸಿಕೊಳ್ಳಲಾಗಿದೆ’’ ಎಂದು ಪೊಲೀಸ್ ಅಧಿಕಾರಿ ಮುಹಮ್ಮದ್ ಜಮೀಲ್ ಹೇಳಿದ್ದಾರೆ.

  ಉಮರ್ ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿದ್ದಾನೆ. ಅವರು ತನ್ನ ಮನೆಯ ಗೋಡೆಯಲ್ಲಿ ಕೊಹ್ಲಿಯ ದೊಡ್ಡ ಗಾತ್ರದ ಚಿತ್ರವನ್ನು ಅಂಟಿಸಿದ್ದಾರೆ.

 ‘‘ನಾನು ಕೊಹ್ಲಿಯ ದೊಡ್ಡ ಅಭಿಮಾನಿ. ಕೊಹ್ಲಿಗೋಸ್ಕರ ತಾನು ಭಾರತ ತಂಡವನ್ನು ಬೆಂಬಲಿಸುತ್ತೇನೆ. ಭಾರತೀಯ ಕ್ರಿಕೆಟಿಗನ ಮೇಲೆ ತನ್ನ ಅಭಿಮಾನವನ್ನು ತೋರಿಸಲು ತನ್ನ ಮನೆಯ ಛಾವಣಿಯಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದೇನೆ. ಭಾರತದ ರಾಷ್ಟ್ರ ಧ್ವಜ ಹಾರಿಸುವುದು ಅಪರಾಧ ಎಂದು ನನಗೆ ಅನಿಸಲಿಲ್ಲ. ತನ್ನನ್ನು ಭಾರತೀಯ ಕ್ರಿಕೆಟಿಗನ ಅಭಿಮಾನಿಯೆಂದು ಪರಿಗಣಿಸಿ, ಅಪರಾಧಿಯಾಗಿ ನೋಡಬೇಡಿ ಎಂದು ಪೊಲೀಸರಲ್ಲಿ ವಿನಂತಿಸಿದ್ದೇನೆ’’ಎಂದು ಉಮರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News