ಪುರುಷರ ಸಿಂಗಲ್ಸ್ ಸೆಮಿ ಫೈನಲ್: ಮರ್ರೆ-ರಾವೊನಿಕ್ ಮುಖಾಮುಖಿ
ಆಸ್ಟ್ರೇಲಿಯನ್ ಓಪನ್
ಮೆಲ್ಬೋರ್ನ್, ಜ.27: ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್‌ನ ಎರಡನೆ ಸೆಮಿ ಫೈನಲ್‌ನಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಹಾಗೂ ಕೆನಡಾದ ಮಿಲೊಸ್ ರಾವೊನಿಕ್ ಮುಖಾಮುಖಿಯಾಗಲಿದ್ದಾರೆ.
ಸ್ಪೇನ್‌ನ ಡೇವಿಡ್ ಫೆರರ್‌ರನ್ನು ಮಣಿಸಿರುವ ಬ್ರಿಟನ್‌ನ ಆ್ಯಂಡಿ ಮರ್ರೆ ಆರನೆ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಮರ್ರೆ ಅವರು ಫೆರರ್‌ರನ್ನು 6-3, 6-7(5), 6-2, 6-3 ಸೆಟ್‌ಗಳಿಂದ ಮಣಿಸಿದ್ದಾರೆ. ಈ ಗೆಲುವಿನೊಂದಿಗೆ ಮರ್ರೆ ಅವರು ಟೂರ್ನಿಯ ಉಪಾಂತ್ಯಕ್ಕೆ ತಲುಪಿದ ಬ್ರಿಟನ್‌ನ ಎರಡನೆ ಟೆನಿಸ್ ತಾರೆ ಎನಿಸಿಕೊಂಡರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಜೊಹಾನ್ನಾ ಕಾಂಟಾ ಮೊತ್ತ ಮೊದಲ ಬಾರಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. 1977ರ ನಂತರ ಬ್ರಿಟನ್‌ನ ಇಬ್ಬರು ಟೆನಿಸ್‌ತಾರೆಯರು ಸೆಮಿ ಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ. 8ನೆ ಶ್ರೇಯಾಂಕದ ಫೆರರ್‌ರನ್ನು ಮೂರು ಗಂಟೆ, 20 ನಿಮಿಷಗಳ ಹೋರಾಟದಲ್ಲಿ ಸದೆ ಬಡಿದಿರುವ ಮರ್ರೆ ಐದನೆ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್ ತಲುಪಲು ಎದುರು ನೋಡುತ್ತಿದ್ದಾರೆ. ಮರ್ರೆ ಮುಂದಿನ ಸುತ್ತಿನಲ್ಲಿ ಕೆನಡಾದ ಮಿಲೊಸ್ ರಾವೊನಿಕ್‌ರನ್ನು ಎದುರಿಸಲಿದ್ದಾರೆ.
ಮೊನ್‌ಫಿಲ್ಸ್‌ಗೆ ರಾವೊನಿಕ್ ಶಾಕ್: ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಕೆನಡಾದ ಮಿಲೊಸ್ ರಾವೊನಿಕ್ ಫ್ರೆಂಚ್‌ನ ಗಯೆಲ್ ಮೊನ್‌ಫಿಲ್ಸ್‌ರನ್ನು 6-3, 3-6, 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿ ಆಘಾತ ನೀಡಿದರು.
13ನೆ ಶ್ರೇಯಾಂಕದ ರಾವೊನಿಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿರುವ ಕೆನಡಾದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಎರಡನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿದ್ದಾರೆ. 2014ರಲ್ಲಿ ವಿಂಬಲ್ಡನ್ ಓಪನ್‌ನಲ್ಲಿ ಈ ಸಾಧನೆ ಮಾಡಿದ್ದರು. ಆ ಪಂದ್ಯದಲ್ಲಿ ರೋಜರ್ ಫೆಡರರ್ ವಿರುದ್ಧ ಸೋತಿದ್ದರು.
ಮೊನ್‌ಫಿಲ್ಸ್‌ರನ್ನು ಮಣಿಸಿರುವ ರಾವೊನಿಕ್ ಸತತ 9ನೆ ಪಂದ್ಯ ಗೆದ್ದ ಸಾಧನೆ ಮಾಡಿದರು. ಅಕ್ಟೋಬರ್‌ನಲ್ಲಿ ಶಾಂೈ ಓಪನ್‌ನಲ್ಲಿ ರಫೆಲ್ ನಡಾಲ್ ವಿರುದ್ಧ ಸೋತ ಬಳಿಕ ಯಾವುದೇ ಪಂದ್ಯವನ್ನು ಸೋತಿಲ್ಲ. ಸೆಮಿಫೈನಲ್‌ಗೆ ಪ್ರವೇಶಿಸಿರುವ ರಾವೊನಿಕ್ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಆ್ಯಂಡಿ ಮರ್ರೆ ಅವರನ್ನು ಎದುರಿಸಲಿದ್ದಾರೆ.
ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್: ಕರ್ಬರ್‌ಗೆ ಕಾಂಟಾ ಎದುರಾಳಿ
ಮೆಲ್ಬೋರ್ನ್, ಜ.27: ಜರ್ಮನಿಯ ಆ್ಯಂಜೆಲಿಕ್ ಕರ್ಬರ್ ಹಾಗೂ ಬ್ರಿಟನ್‌ನ ಜೊಹನ್ನಾ ಕಾಂಟಾ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
ಬುಧವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಬೆಲಾರಸ್‌ನ ವಿಕ್ಟೋರಿಯಾ ಅಝರೆಂಕಾರನ್ನು 6-3, 7-5 ಸೆಟ್‌ಗಳ ಅಂತರದಿಂದ ಮಣಿಸಿರುವ ಕರ್ಬರ್ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ.
ಎರಡು ಬಾರಿಯ ಚಾಂಪಿಯನ್ ಅಝರೆಂಕಾ ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ 11 ಗೇಮ್ಸ್‌ನಲ್ಲಿ ಸೋತಿದ್ದರು. ಆದರೆ, ಕರ್ಬರ್ ವಿರುದ್ಧದ ಪಂದ್ಯದಲ್ಲಿ ಮೊದಲ ಸೆಟ್‌ನಲ್ಲೇ ಮುಗ್ಗರಿಸಿದರು. ಕರ್ಬರ್ 48 ನಿಮಿಷದಲ್ಲಿ ಮೊದಲ ಸೆಟನ್ನು ವಶಪಡಿಸಿಕೊಂಡರು.
ಅಝರೆಂಕಾ ಎರಡನೆ ಸೆಟ್‌ನಲ್ಲಿ ತಿರುಗೇಟು ನೀಡಲು ಯತ್ನಿಸಿದರೂ ಯಾವುದೇ ಫಲ ಸಿಗಲಿಲ್ಲ. 1 ಗಂಟೆ, 45 ನಿಮಿಷಗಳ ಪಂದ್ಯದಲ್ಲಿ ಕೆರ್ಬರ್ ಜಯಶಾಲಿಯಾದರು. ಕರ್ಬರ್ ಮುಂದಿನ ಸುತ್ತಿನಲ್ಲಿ ಬ್ರಿಟನ್‌ನ ಜೊಹಾನ್ನಾ ಕಾಂಟಾರನ್ನು ಎದುರಿಸಲಿದ್ದಾರೆ.
ದಿನದ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಕಾಂಟಾ ಅವರು ಚೀನಾದ ಝಾಂಗ್ ಶುಐ ಅವರನ್ನು 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ 30 ವರ್ಷಗಳ ನಂತರ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಬ್ರಿಟನ್‌ನ ಮೊದಲ ಆಟಗಾರ್ತಿ ಎಂಬ ಕೀರ್ತಿಗೂ ಭಾಜನರಾದರು.
47ನೆ ರ್ಯಾಂಕಿನ ಕಾಂಟಾ 113ನೆ ರ್ಯಾಂಕಿನ ಝಾಂಗ್ ವಿರುದ್ಧದ ಪಂದ್ಯವನ್ನು ಒಂದು ಗಂಟೆ, 23 ನಿಮಿಷಗಳಲ್ಲಿ ಗೆದ್ದುಕೊಂಡಿದ್ದಾರೆ.
ಮಿಶ್ರ ಡಬಲ್ಸ್: ಬೋಪಣ್ಣ ಔಟ್
ಮೆಲ್ಬೋರ್ನ್, ಜ.27: ಮೂರನೆ ಶ್ರೇಯಾಂಕದ ಜೋಡಿ ರೋಹನ್ ಬೋಪಣ್ಣ ಹಾಗೂ ಯಂಗ್-ಜಾನ್ ಚಾನ್ ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ.
ಬುಧವಾರ ಇಲ್ಲಿ 54 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಇಂಡೋ-ಚೈನೀಸ್ ತೈಪೆಯ ಬೋಪಣ್ಣ-ಚಾನ್ ಅವರು ಫಿಲಿಪ್ಪೈನ್ಸ್-ಸ್ಲೋವಾನಿಯ ಜೋಡಿ ಟ್ರೀಟ್ ಹುಯೆ ಹಾಗೂ ಆ್ಯಂಡ್ರೆಜಾ ಕ್ಲೆಪಕ್ ವಿರುದ್ಧ 2-6, 5-7 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.