×
Ad

ಅಂಡರ್-19 ವಿಶ್ವಕಪ್: ಭಾರತಕ್ಕೆ ಇಂದು ಐರ್ಲೆಂಡ್ ಎದುರಾಳಿ

Update: 2016-01-27 23:35 IST

ಮೀರ್ಪುರ, ಜ.27: ಕ್ರಿಕೆಟ್ ದಂತಕತೆ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿರುವ ಭಾರತದ ಅಂಡರ್-19 ತಂಡ ಗುರುವಾರ ನಡೆಯಲಿರುವ ವಿಶ್ವಕಪ್‌ನ ‘ಡಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಶಿಶು ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ಕಿರಿಯರ ವಿಶ್ವಕಪ್‌ನಲ್ಲಿ ಹಲವಾರು ಕ್ರಿಕೆಟ್ ಪ್ರತಿಭೆಗಳನ್ನು ಪಡೆದಿರುವ ಭಾರತ ಮೂರು ಬಾರಿ ಚಾಂಪಿಯನ್ ಆಗಿದೆ. ಈ ಟೂರ್ನಿಯ ಮೂಲಕವೇ ಯುವರಾಜ್ ಸಿಂಗ್, ಹಾಲಿ ನಂ.1 ಆಟಗಾರ ವಿರಾಟ್ ಕೊಹ್ಲಿ ಅವರಂತಹ ಪ್ರತಿಭೆಗಳು ಬೆಳಕಿಗೆ ಬಂದಿವೆ.

ವಿಶ್ವದಾದ್ಯಂತ ನೇರ ಪ್ರಸಾರವಾಗಲಿರುವ ಈ ಬಾರಿಯ ವಿಶ್ವಕಪ್‌ನಲ್ಲಿ ದ್ರಾವಿಡ್ ಮಾರ್ಗದರ್ಶನದಲ್ಲಿ ಐಶಾನ್ ಕಿಶಾನ್, ರಿಷಬ್ ಪಂತ್, ಆವೇಶ್ ಖಾನ್ ತಮ್ಮ ಪ್ರತಿಭೆ ತೋರಿಸಲು ಸಜ್ಜಾಗಿದ್ದಾರೆ.

ಬಾಂಗ್ಲಾದೇಶದಲ್ಲಿ ಭದ್ರತೆಯ ಭೀತಿಯ ಕಾರಣ ನೀಡಿ ಆಸ್ಟ್ರೇಲಿಯ ತಂಡ ಟೂರ್ನಿಯಿಂದ ಹೊರ ನಡೆದಿದೆ. ಈ ಹಿನ್ನೆಲೆಯಲ್ಲಿ ಭಾರತವೇ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ.

ಭಾರತ ತಂಡದಲ್ಲಿರುವ ಐವರು ಆಟಗಾರರು ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರೆ, ಓರ್ವ ಆಟಗಾರ ಸೀನಿಯರ್ ರಾಜ್ಯ ತಂಡದ ಪರ ಟ್ವೆಂಟಿ-20 ಕ್ರಿಕೆಟ್ ಆಡಿದ್ದಾನೆ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಂಡದ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿರುವ ಸರ್ಫ್‌ರಾಝ್ ಖಾನ್ ಈಗಾಗಲೇ ಮನೆ ಮಾತಾಗಿದ್ದಾರೆ. ಖಾನ್‌ಗೆ ಇದು ಎರಡನೆ ವಿಶ್ವಕಪ್ ಟೂರ್ನಿಯಾಗಿದ್ದು, ಆತ ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

 ಎಡಗೈ ಆರಂಭಿಕ ದಾಂಡಿಗ ರಿಷಬ್ ಪಂತ್ ಈಗಾಗಲೇ ದಿಲ್ಲಿ ಪರ ಆಡಿದ್ದು, ಭಾರತದ ಪರ ಅಂಡರ್-19 ತಂಡದಲ್ಲಿ ಆಡಿದ್ದಾರೆ. ನಾಯಕ ಐಶಾನ್ ಕಿಶನ್ ಜಾರ್ಖಂಡ್‌ನ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಇತ್ತೀಚೆಗೆ ವಿಜಯ ಹಝಾರೆ ಟ್ರೋಫಿಯ ವೇಳೆ ಭಾರತದ ನಾಯಕ ಎಂಎಸ್ ಧೋನಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದಾರೆ.

 ವೇಗದ ಬೌಲರ್ ಆವೇಶ್ ಖಾನ್ ಹಾಗೂ ರಿಕಿ ಭುಯ್ ಕಳೆದ ಆವೃತ್ತಿಯ ಟೂರ್ನಿಯಲ್ಲಿ ಆಡಿದ್ದಾರೆ. ಆಸ್ಟ್ರೇಲಿಯಕ್ಕೆ ಬದಲಿ ತಂಡವಾಗಿ ಆಡುತ್ತಿರುವ ಐರ್ಲೆಂಡ್‌ನಲ್ಲಿ ಅನುಭವಿ ಆಟಗಾರರಿಲ್ಲ. ಭಾರತ ಮೂಲದ ಸ್ಪಿನ್ನರ್ 15ರ ಹರೆಯದ ವರುಣ್ ಚೋಪ್ರಾ ಆ ತಂಡದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News