×
Ad

ಸೆರೆನಾ-ಕರ್ಬರ್ ಫೈನಲ್ ಸೆಣಸಾಟ

Update: 2016-01-28 23:28 IST

ಆಸ್ಟ್ರೇಲಿಯನ್ ಓಪನ್

ಮೆಲ್ಬೋರ್ನ್, ಜ.28: ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಹಾಗೂ ಜರ್ಮನಿಯ ಆ್ಯಂಜೆಲಿಕ್ ಕರ್ಬರ್ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಸೆರೆನಾ ಹಾಗೂ ಕರ್ಬರ್ ಪ್ರಶಸ್ತಿಗಾಗಿ ಸೆಣಸಾಡಲಿದ್ದು, 22ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸೆರೆನಾ ಈ ಪ್ರಶಸ್ತಿ ಜಯಿಸುವ ಮೂಲಕ ಟೆನಿಸ್ ಓಪನ್ ಯುಗ ಅರಂಭವಾದ ನಂತರ ಅತ್ಯಂತ ಹೆಚ್ಚು ಪ್ರಶಸ್ತಿ ಜಯಿಸಿರುವ ಸ್ಟೆಫಿಗ್ರಾಫ್ ದಾಖಲೆ ಮುರಿಯಲು ಎದುರು ನೋಡುತ್ತಿದ್ದಾರೆ.

ಗುರುವಾರ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಸೆರೆನಾ ಅವರು 4ನೆ ಶ್ರೇಯಾಂಕದ ಅಗ್ನೆಸ್ಕಾ ರಾಂಡ್ವಾಂಸ್ಕಾರನ್ನು 6-0, 6-4 ನೇರ ಸೆಟ್‌ಗಳಿಂದ ಸದೆ ಬಡಿದರು. ಸೆರೆನಾ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಫೈನಲ್ ತಲುಪಿದಾಗಲೆಲ್ಲಾ ಪ್ರಶಸ್ತಿಯನ್ನು ಜಯಿಸಿದ್ದಾರೆ.

ಸೆರೆನಾ ಮೊದಲ ಸೆಟ್‌ನ್ನು ಕೇವಲ 20 ನಿಮಿಷಗಳಲ್ಲಿ ವಶಪಡಿಸಿಕೊಂಡರು. ಎರಡನೆ ಸೆಟ್‌ನಲ್ಲಿ ರಾಂಡ್ವಾಂಸ್ಕಾ ತೀವ್ರ ಪೈಪೋಟಿ ನೀಡಿದರು. ಆದಾಗ್ಯೂ ಮೇಲುಗೈ ಸಾಧಿಸಿರುವ ಅಮೆರಿಕದ ಆಟಗಾರ್ತಿ 64 ನಿಮಿಷಗಳಲ್ಲಿ ಜಯ ಸಾಧಿಸಿದರು.

ಕಾಂಟಾ ಗೆಲುವಿನ ಓಟಕ್ಕೆ ಬ್ರೇಕ್: ಮಹಿಳೆಯರ ಸಿಂಗಲ್ಸ್‌ನ ಮತ್ತೊಂದು ಸೆಮಿಫೈನಲ್‌ನಲ್ಲಿ ಜರ್ಮನಿಯ ಆ್ಯಂಜೆಲಿಕ್ ಕರ್ಬರ್ ಅವರು ಬ್ರಿಟನ್‌ನ ಜೋಹನ್ನಾ ಕಾಂಟಾರನ್ನು ಮಣಿಸಿ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದರು.

ಕರ್ಬರ್ 20 ವರ್ಷಗಳ ನಂತರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ ಜರ್ಮನಿಯ ಮೊದಲ ಆಟಗಾರ್ತಿ ಎನಿಸಿಕೊಂಡರು. ಕಾಂಟಾ ಸೆಮಿ ಫೈನಲ್ ತಲುಪುವ ಮೊದಲು ವೀನಸ್ ವಿಲಿಯಮ್ಸ್ ಹಾಗೂ ಕಳೆದ ವರ್ಷದ ಸೆಮಿ ಫೈನಲಿಸ್ಟ್ ಎಕಟೆರಿನಾ ಮಕರೊವಾರನ್ನು ಮಣಿಸಿ ದೈತ್ಯ ಸಂಹಾರಿಯಾಗಿ ಮಿಂಚಿದ್ದರು.

39 ವರ್ಷಗಳ ನಂತರ ಸೆಮಿ ಫೈನಲ್ ತಲುಪಿದ್ದ ಬ್ರಿಟನ್‌ನ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದ ಕಾಂಟಾರನ್ನು 82 ನಿಮಿಷಗಳ ಹೋರಾಟದಲ್ಲಿ ಮಣಿಸಿರುವ ಕರ್ಬರ್ ಪ್ರಶಸ್ತಿ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಸೆರೆನಾರನ್ನು ಎದುರಿಸಲಿದ್ದಾರೆ.

ಮಿಶ್ರ ಡಬಲ್ಸ್: ಸಾನಿಯಾ-ಇವಾನ್ ಸೆಮಿ ಫೈನಲ್‌ಗೆ

ಪೇಸ್-ಹಿಂಗಿಸ್ ಜೋಡಿಗೆ ಸೋಲು

ಮೆಲ್ಬೋರ್ನ್, ಜ.28: ಭಾರತದ ಟೆನಿಸ್ ಸ್ಟಾರ್ ಸಾನಿಯಾ ಮಿರ್ಝಾ ಅವರು ಕ್ರೊವೇಷಿಯದ ಇವಾನ್ ಡೊಡಿಗ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದರು.

ಈಗಾಗಲೇ ಮಹಿಳೆಯರ ಡಬಲ್ಸ್‌ನಲ್ಲಿ ಮಾರ್ಟಿನಾ ಹಿಂಗಿಸ್‌ರೊಂದಿಗೆ ಫೈನಲ್‌ಗೆ ತಲುಪಿರುವ ಸಾನಿಯಾ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಅವಳಿ ಪ್ರಶಸ್ತಿಯನ್ನು ಜಯಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಐತಿಹಾಸಿಕ ಸಾಧನೆ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಸಾನಿಯಾ-ಇವಾನ್ ಜೋಡಿ ಗುರುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಲಿಯಾಂಡರ್ ಪೇಸ್ ಹಾಗೂ ಮಾರ್ಟಿನಾ ಹಿಂಗಿಸ್‌ರನ್ನು 7-6(1), 6-3 ನೇರ ಸೆಟ್‌ಗಳಿಂದ ಮಣಿಸಿ ಸೆಮಿ ಫೈನಲ್‌ಗೆ ತಲುಪಿತು. ಒಂದು ಗಂಟೆ, 10 ನಿಮಿಷಗಳಲ್ಲಿ ಪೇಸ್-ಹಿಂಗಿಸ್‌ರನ್ನು ಮಣಿಸಿರುವ ಅಗ್ರ ಶ್ರೇಯಾಂಕದ ಸಾನಿಯಾ-ಇವಾನ್ ಮುಂದಿನ ಸುತ್ತಿನಲ್ಲಿ ಐದನೆ ಶ್ರೇಯಾಂಕದ ಎಲೆನಾ ವೆಸ್ನಿನಾ ಹಾಗೂ ಬ್ರುನೊ ಸೊರೆಸ್‌ರನ್ನು ಎದುರಿಸಲಿದ್ದಾರೆ.

ಸಾನಿಯಾ-ಇವಾನ್ ಕಳಪೆ ಆರಂಭ ಪಡೆದಿದ್ದರು. ಆದಾಗ್ಯೂ ಪ್ರತಿ ಹೋರಾಟವನ್ನು ನೀಡಿದ ಈ ಜೋಡಿ ಮೊದಲ ಸೆಟನ್ನು ಟೈ-ಬ್ರೇಕರ್‌ನಲ್ಲಿ 44 ನಿಮಿಷಗಳಲ್ಲಿ ಗೆದ್ದುಕೊಂಡಿತು. ಸಾನಿಯಾ-ಇವಾನ್ ಎರಡನೆ ಸೆಟ್‌ನ್ನು ಸುಲಭವಾಗಿ ಗೆದ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News