ಆಸ್ಟ್ರೇಲಿಯನ್ ಓಪನ್: ಸಾನಿಯಾ-ಹಿಂಗಿಸ್ ಐತಿಹಾಸಿಕ ಸಾಧನೆ
‘ಹ್ಯಾಟ್ರಿಕ್’ ಗ್ರಾನ್‌ಸ್ಲಾಮ್ ಜಯಿಸಿದ ಇಂಡೋ-ಸ್ವಿಸ್ ಜೋಡಿ
ಮೆಲ್ಬೋರ್ನ್, ಜ.29: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹಾಗೂ ಸ್ವಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಶುಕ್ರವಾರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿಯನ್ನು ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಸಾನಿಯಾ-ಹಿಂಗಿಸ್‌ಗೆ ಇದು ಸತತ ಮೂರನೆ ಗ್ರಾನ್‌ಸ್ಲಾಮ್ ಪ್ರಶಸ್ತಿ. ಹಾಗೂ ಸತತ 36ನೆ ಪಂದ್ಯಗಳನ್ನು ಜಯಿಸುವ ಮೂಲಕ ಇತಿಹಾಸ ಬರೆದರು. 1990ರಲ್ಲಿ ಜಾನಾ ನೊವೊಟ್ನಾ ಹಾಗೂ ಹೆಲೆನಾ ಸುಕೋವಾ ಸತತ 44 ಪಂದ್ಯಗಳನ್ನು ಜಯಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದರು. ಈ ದಾಖಲೆ ಮುರಿಯಲು ಸಾನಿಯಾ-ಹಿಂಗಿಸ್‌ಗೆ ಇನ್ನು 8 ಪಂದ್ಯಗಳನ್ನು ಜಯಿಸಬೇಕಾಗಿದೆ.
ಶುಕ್ರವಾರ ನಡೆದ ಮಹಿಳೆಯರ ಡಬಲ್ಸ್‌ನ ಫೈನಲ್ ಪಂದ್ಯದಲ್ಲಿ ಇಂಡೋ-ಸ್ವಿಸ್ ಜೋಡಿ ಸಾನಿಯಾ ಹಾಗೂ ಹಿಂಗಿಸ್ ಅವರು ಝೆಕ್‌ನ 7ನೆ ಶ್ರೇಯಾಂಕಿತ ಆಂಡ್ರಿಯ ಹ್ಲಾವಾಕೊವಾ ಹಾಗೂ ಲುಸೀ ಹ್ರಾಡೆಕಾರನ್ನು 7-6, 6-3 ಸೆಟ್‌ಗಳ ಅಂತರದಿಂದ ಮಣಿಸಿ ವರ್ಷದ ಆರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
2015ರಲ್ಲಿ ವಿಂಬಲ್ಡನ್ ಹಾಗೂ ಅಮೆರಿಕನ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ ಸಾನಿಯಾ ಹಾಗೂ ಹಿಂಗಿಸ್ ಇದೀಗ ಸತತ ಮೂರನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಇಬ್ಬರೂ ಆಸ್ಟ್ರೇಲಿಯನ್ ಓಪನ್‌ನ ಡಬಲ್ಸ್‌ನಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿದ್ದಾರೆ.
ಕಳೆದ ವರ್ಷದ ಶ್ರೇಷ್ಠ ಫಾರ್ಮ್‌ನ್ನು ಈ ವರ್ಷವೂ ಮುಂದುವರಿಸಿದ ಸಾನಿಯಾ -ಹಿಂಗಿಸ್ ಜೋಡಿ ಸತತ 36ನೆ ಪಂದ್ಯವನ್ನು ಗೆದ್ದುಕೊಂಡರು. ಆಸ್ಟ್ರೇಲಿಯನ್ ಓಪನ್‌ಗೂ ಮೊದಲು ಈ ಜೋಡಿ ಬ್ರಿಸ್ಬೇನ್ ಹಾಗೂ ಸಿಡ್ನಿ ಇಂಟರ್‌ನ್ಯಾಶನಲ್ ಇವೆಂಟ್‌ನಲ್ಲೂ ಸತತ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಕಳೆದ ವರ್ಷ ಮಾರ್ಚ್‌ನಲ್ಲಿ ಡಬಲ್ಸ್ ಪಂದ್ಯವನ್ನು ಆಡಲು ಆರಂಭಿಸಿರುವ ಸಾನಿಯಾ-ಹಿಂಗಿಸ್ ಇದೀಗ 12 ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಸಾನಿಯಾ ಪಾಲಿಗೆ ಇದು ಆರನೆ ಗ್ರಾನ್‌ಸ್ಲಾಮ್ ಪ್ರಶಸ್ತಿ. 2014ರಲ್ಲಿ ಯುಎಸ್ ಓಪನ್‌ನಲ್ಲಿ ಬ್ರುನೊ ಸೊರೆಸ್‌ರೊಂದಿಗೆ ಮಿಶ್ರ ಡಬಲ್ಸ್‌ನ್ನು ಜಯಿಸಿದ್ದರು. ಸಾನಿಯಾ 2009ರಲ್ಲಿ ಮಹೇಶ್ ಭೂಪತಿ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಕಿರೀಟ ಧರಿಸಿದ್ದರು. 2012ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಮಾರ್ಟಿನಾ ಹಿಂಗಿಸ್ ಅವರು ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಐದು ಬಾರಿ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ್ದಲ್ಲದೆ, 12 ಬಾರಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿಯನ್ನು ಜಯಿಸಿದ್ದ ಹಿಂಗಿಸ್ ಈ ವರ್ಷ ಸೆಮಿ ಫೈನಲ್‌ನಲ್ಲಿ ಪೇಸ್‌ರೊಂದಿಗೆ ಆಡಿ ಸಾನಿಯಾ ಹಾಗೂ ಕ್ರೊವೇಷಿಯದ ಇವಾನ್ ಡೊಡಿಗ್ ವಿರುದ್ಧ ಸೋತಿದ್ದರು.
‘‘ನನಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವೆನು. ನನ್ನ ಪಾಲಿಗೆ ಆಸ್ಟ್ರೇಲಿಯನ್ ಓಪನ್ ವಿಶೇಷವಾದುದು.ಮೆಲ್ಬೋರ್ನ್ ನನಗೆ ತವರು ಮನೆಯಿದ್ದಂತೆ. ಇಲ್ಲಿ ಸಾಕಷ್ಟು ಸ್ಮರಣೀಯ ಕ್ಷಣ ಅನುಭವಿಸಿದ್ದೇನೆ. ಮಾರ್ಟಿನಾ ಅದ್ಭುತ ಚಾಂಪಿಯನ್, ಅವರೊಂದಿಗೆ ಆಡುತ್ತಿರುವುದು ನನ್ನ ಭಾಗ್ಯ’’ ಎಂದು ಸಾನಿಯಾ ಮಿರ್ಝಾ ಪ್ರತಿಕ್ರಿಯಿಸಿದ್ದಾರೆ.
ಸಾನಿಯಾ-ಡೊಡಿಗ್‌ಗೆ ಸೋಲು: ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್‌ನ ಸೆಮಿ ಫೈನಲ್‌ನಲ್ಲಿ ಭಾರತದ ಸಾನಿಯಾ ಮಿರ್ಝಾ ಹಾಗೂ ಕ್ರೋವೆಷಿಯದ ಇವಾನ್ ಡೊಡಿಗ್ ಅವರು ಎಲೆನಾ ಹಾಗೂ ಬ್ರುನೊ ವಿರುದ್ಧ 5-7, 6-7(4) ಸೆಟ್‌ಗಳಿಂದ ಸೋತರು. ಮಾರ್ಟಿನಾ ಹಿಂಗಿಸ್‌ರೊಂದಿಗೆ ಶುಕ್ರವಾರ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿರುವ ಸಾನಿಯಾ ಟೂರ್ನಿಯಲ್ಲಿ ಅವಳಿ ಪ್ರಶಸ್ತಿ ಗೆಲ್ಲುವುದರಿಂದ ವಂಚಿತರಾದರು.
ಹೈಲೈಟ್ಸ್:
*2015ರಲ್ಲಿ ವಿಂಬಲ್ಡನ್ ಹಾಗೂ ಅಮೆರಿಕನ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ ಸಾನಿಯಾ ಹಾಗೂ ಹಿಂಗಿಸ್ ಇದೀಗ ಹ್ಯಾಟ್ರಿಕ್ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
*ಸತತ 36 ಪಂದ್ಯಗಳನ್ನು ಜಯಿಸಿ ಸಾರ್ವಕಾಲಿಕ ದಾಖಲೆ ಮುರಿಯುವತ್ತ ಹೆಜ್ಜೆ ಇಟ್ಟಿದ್ದಾರೆ.
*ಸಾನಿಯಾ-ಹಿಂಗಿಸ್ ಜೋಡಿಗೆ ಇದು 12ನೆ ಡಬಲ್ಸ್ ಪ್ರಶಸ್ತಿ.