×
Ad

ಆಸ್ಟ್ರೇಲಿಯದಲ್ಲಿ ಸರಣಿ ಗೆಲುವಿನ ಇತಿಹಾಸ ಬರೆದ ಭಾರತ; 2ನೆ ಟ್ವೆಂಟಿ-20 ಪಂದ್ಯ: ಭಾರತಕ್ಕೆ 27 ರನ್‌ಗಳ ಜಯ

Update: 2016-01-29 15:55 IST

ಮೆಲ್ಬೋರ್ನ್, ಜ.29: ಇಲ್ಲಿ ಆಸ್ಟ್ರೇಲಿಯ ವಿರುದ್ಧದ ಎರಡನೆ ಟ್ವೆೆಂಟಿ-20 ಪಂದ್ಯದಲ್ಲಿ ಭಾರತ 27 ರನ್‌ಗಳ ಜಯ ಗಳಿಸಿದ್ದು, ಮೂರು ಪಂದ್ಯಗಳ ಸರಣಿಯನ್ನು ಭಾರತ ಇನ್ನೂ ಒಂದು ಪಂದ್ಯ ಆಡಲು ಬಾಕಿ ಇರುವಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.
 ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 185 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದರೊಂದಿಗೆ ಭಾರತ ತಂಡ ಆಸ್ಟ್ರೇಲಿಯದ ನೆಲದಲ್ಲಿ ಮೊದಲ ಟ್ವೆಂಟಿ-20 ಸರಣಿಯನ್ನು ತನ್ನದಾಗಿಸಿಕೊಂಡಿತು. ಈ ಮೊದಲು ಭಾರತ 2007-08ರಲ್ಲಿ ತ್ರಿಕೋನ ಸರಣಿ ಮತ್ತು 1985ರಲ್ಲಿ ಬೆನ್ಸನ್ ಆ್ಯಂಡ್ ಹೆಡ್ಜೆಸ್ ಚಾಂಪಿಯನ್‌ಶಿಪ್‌ನ್ನು ಜಯಿಸಿತ್ತು.
 ಆಸ್ಟ್ರೇಲಿಯಕ್ಕೆ ಇಂದಿನ ಪಂದ್ಯದಲ್ಲಿ ಸವಾಲು ಅಷ್ಟೇನೂ ಕಠಿಣವಾಗಿರಲಿಲ್ಲ. ಆದರೆ ಭಾರತದ ಬೌಲರ್‌ಗಳು ಆಸ್ಟ್ರೇಲಿಯದ ದಾಂಡಿಗರನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು.ಏಕ ದಿನ ಸರಣಿಯನ್ನು 1-4 ಅಂತರದಲ್ಲಿ ಕಳೆದುಕೊಂಡ ಧೋನಿ ಪಡೆ ಟ್ವೆಂಟಿ- 20 ಸರಣಿಯಲ್ಲಿ ಸೇಡು ತೀರಿಸಿಕೊಂಡಿತು.

 ಆಸ್ಟ್ರೇಲಿಯದ ಬ್ಯಾಟಿಂಗ್ ಆರಂಭದಲ್ಲಿ ಚೆನ್ನಾಗಿತ್ತು. ಆರಂಭಿಕ ದಾಂಡಿಗರಾದ ಆ್ಯರೊನ್ ಫಿಂಚ್ ಮತ್ತು ಶಾನ್ ಮಾರ್ಷ್ ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 94 ರನ್ ಕಲೆ ಹಾಕಿದರು. 10ನೆ ಓವರ್‌ನಲ್ಲಿ ಅಶ್ವಿನ್ ಅವರ 3 ಮತ್ತು 4ನೆ ಎಸೆತದಲ್ಲಿ ನಾಯಕ ಫಿಂಚ್‌ಗೆ ರಿಶಿ ಧವನ್ ಮತ್ತು ಶಿಖರ ಧವನ್ ಜೀವದಾನ ನೀಡಿದರು. ಆದರೆ ಐದನೆ ಎಸೆತದಲ್ಲಿ ಆಸ್ಟ್ರೇಲಿಯ ಮೊದಲ ವಿಕೆಟ್ ಪತನಗೊಂಡಿತು. ಫಿಂಚ್‌ಗೆ ಸಮರ್ಥ ಸಾಥ್ ನೀಡುತ್ತಿದ್ದ ಶಾನ್ ಮಾರ್ಷ್ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಯತ್ನ ನಡೆಸಿದರು. ಆದರೆ ಅವರ ಪ್ರಯತ್ನ ಫಲ ನೀಡಲಿಲ್ಲ.ಹಾರ್ದಿಕ್ ಪಾಂಡ್ಯ ಲಾಂಗ್ ಆನ್‌ನಲ್ಲಿ ಕ್ಯಾಚ್ ತೆಗೆದುಕೊಳ್ಳುವುದರೊಂದಿಗೆ ಅಶ್ವಿನ್ ಖಾತೆಗೆ ವಿಕೆಟ್ ಜಮೆ ಆಗಿತ್ತು.
ಮಾರ್ಷ್ ವಿಕೆಟ್ ಪತನಗೊಂಡ ಬಳಿಕ ಆಸ್ಟ್ರೇಲಿಯದ ಆರ್ಭಟ ಕಡಿಮೆಯಾಯಿತು. ಕ್ರಿಸ್ ಲಿನ್(2) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್(1) ಅವರನ್ನು ನಾಯಕ ಧೋನಿ ಅವರು ಪಾಂಡ್ಯ ಮತ್ತು ಯುವರಾಜ್ ಸಿಂಗ್ ಮೂಲಕ ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು.
 ಶೇನ್ ವ್ಯಾಟ್ಸನ್ (15) ಅವರು ರವೀಂದ್ರ ಜಡೇಜ ಎಸೆತದಲ್ಲಿ ರಿಟರ್ನ್ ಕ್ಯಾಚ್ ನೀಡಿ ವಾಪಸಾದಾಗ ತಂಡದ ಸ್ಕೋರ್ 14.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 121 ಆಗಿತ್ತು. ನಾಯಕ ಫಿಂಚ್ 15.2ನೆ ಓವರ್‌ನಲ್ಲಿ ರನೌಟಾದರು. 69 ನಿಮಿಷಗಳ ಬ್ಯಾಟಿಂಗ್‌ನಲ್ಲಿ 48 ಎಸೆತಗಳನ್ನು ಎದುರಿಸಿದ ಫಿಂಚ್ 8 ಬೌಂಡರಿ ಮತ್ತು2 ಸಿಕ್ಸರ್ ನೆರವಿನಲ್ಲಿ 74 ರನ್ ಗಳಿಸಿ ಪೆವಿಲಿಯನ್ ಸೇರಿದ ಬಳಿಕ ಆಸ್ಟ್ರೇಲಿಯದ ಹಿಡಿತ ಬಹುತೇಕ ಸಡಿಲಗೊಂಡಿತು.
ಮ್ಯಾಥ್ಯೂ ವೇಡ್ ಔಟಾಗದೆ 16 ರನ್,ಜೇಮ್ಸ್ ಫಾಕ್ನರ್ 10 ರನ್, ಹೇಸ್ಟಿಂಗ್ಸ್ 4ರನ್ ಮತ್ತು ಆ್ಯಂಡ್ರೋ ಟಾಯ್ 4 ರನ್‌ಗಳ ಕಾಣಿಕೆ ನೀಡಿದರು.
 ಜಸ್ಪ್ರೀತ್ ಬುಮ್ರಾ 37ಕ್ಕೆ 2, ರವೀಂದ್ರ ಜಡೇಜ 32ಕ್ಕೆ 2, ಆರ್ ಅಶ್ವಿನ್, ಹಾರ್ದಿಕ್ ಪಾಂಡ್ಯ ಮತ್ತು ಯುವರಾಜ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು. ಆಶೀಶ್ ನೆಹ್ರಾ 4 ಓವರ್‌ಗಳಲ್ಲಿ 34 ರನ್ ನೀಡಿದರೂ ವಿಕೆಟ್ ದೊರೆಯಲಿಲ್ಲ.

ರೋಹಿತ್-ಕೊಹ್ಲಿ ಅರ್ಧಶತಕಗಳ ಕೊಡುಗೆ: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಕಳೆದ ಪಂದ್ಯದಂತೆ ಆಸ್ಟ್ರೇಲಿಯಕ್ಕೆ ಕಠಿಣ ಸವಾಲನ್ನು ವಿಧಿಸಿತು. ಭಾರತ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 184 ರನ್ ಗಳಿಸಿತು.
ಆರಂಭಿಕ ದಾಂಡಿಗರಾದ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಮೊದಲ ವಿಕೆಟ್‌ಗೆ 11 ಓವರ್‌ಗಳಲ್ಲಿ 97 ರನ್‌ಗಳ ಜೊತೆಯಾಟ ನೀಡಿದರು.
11ನೆ ಓವರ್‌ನ ಕೊನೆಯ ಎಸೆತದಲ್ಲಿ ಧವನ್ ಅವರು ಮ್ಯಾಕ್ಸ್‌ವೆಲ್ ಎಸೆತದಲ್ಲಿ ಲಿನ್‌ಗೆ ಕ್ಯಾಚ್ ನೀಡಿದರು. ಧವನ್ ಔಟಾಗುವ ಮೊದಲು 46 ನಿಮಿಷಗಳ ಬ್ಯಾಟಿಂಗ್‌ನಲ್ಲಿ 42 ರನ್ (32ಎ, 3ಬೌ,2ಸಿ) ಗಳಿಸಿದರು.
 ಧವನ್ ನಿರ್ಗಮದ ಬಳಿಕ ಉಪನಾಯಕ ವಿರಾಟ್ ಕೊಹ್ಲಿ ಕ್ರೀಸ್‌ಗೆ ಆಗಮಿಸಿದರು. ರೋಹಿತ್ ಶರ್ಮ ಮತ್ತು ಕೊಹ್ಲಿ 46 ರನ್‌ಗಳ ಕಾಣಿಕೆ ನೀಡಿದರು. 16ನೆ ಓವರ್‌ನ ಅಂತ್ಯಕ್ಕೆ ರೋಹಿತ್ ಶರ್ಮ ರನೌಟಾದರು. 69 ನಿಮಿಷಗಳ ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮ 47 ಎಸೆತಗಳನ್ನು ಎದುರಿಸಿದರು. 5 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 60 ರನ್ ಗಳಿಸಿ ರೋಹಿತ್ ಶರ್ಮ ಪೆವಿಲಿಯನ್ ಸೇರಿದರು.
ಧೋನಿ ಮತ್ತು ಕೊಹ್ಲಿ ಜೊತೆಯಾಟದಲ್ಲಿ 38 ರನ್ ಸೇರಿಸಿದರು. ಧೋನಿ 14 ರನ್ ಗಳಿಸಿದರು. ವಿರಾಟ್ ಕೊಹ್ಲಿ 59 ರನ್ (44ನಿ, 33ಎ, 7ಬೌ,1ಸಿ) ಗಳಿಸಿದರು.
 ಆಸ್ಟ್ರೇಲಿಯದ ಆ್ಯಂಡ್ರೋ ಟಾಯ್ ಮತ್ತು ಮ್ಯಾಕ್ಸ್‌ವೆಲ್ ತಲಾ ಒಂದು ವಿಕೆಟ್ ಪಡೆದರು.

ಸ್ಕೋರ್ ಪಟ್ಟಿ
ಭಾರತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ  184
 ರೋಹಿತ್ ಶರ್ಮ ರನೌಟ್ (ಮ್ಯಾಕ್ಸ್‌ವೆಲ್/ವೇಡ್) 60
 ಶಿಖರ್ ಧವನ್ ಸಿ ಲಿನ್ ಬಿ ಮ್ಯಾಕ್ಸ್‌ವೆಲ್ 42
ವಿರಾಟ್ ಕೊಹ್ಲಿ ಔಟಾಗದೆ59
 ಎಂಎಸ್ ಧೋನಿ ಸಿ ವ್ಯಾಟ್ಸನ್ ಬಿ ಟಾಯ್14
ಸುರೇಶ್ ರೈನಾ ಔಟಾಗದೆ00
ಇತರೆ09
ವಿಕೆಟ್ ಪತನ: 1-97, 2-243, 3-181.
 

ಬೌಲಿಂಗ್ ವಿವರ
 ವ್ಯಾಟ್ಸನ್3-0-17-0
ಹೇಸ್ಟಿಂಗ್ಸ್3-0-35-0
ಬೊಲಾಂಡ್4-0-30-0
ಫಾಕ್ನರ್3-0-35-0
ಟಾಯ್4-0-28-1
ಲಿನ್1-0-15-0
ಮ್ಯಾಕ್ಸ್‌ವೆಲ್2-0-17-1
 

ಆಸ್ಟ್ರೇಲಿಯ 20 ಓವರ್‌ಗಳಲ್ಲಿ 157/8
ಆ್ಯರೊನ್ ಫಿಂಚ್ ರನೌಟ್(ಜಡೇಜ/ಧೋನಿ)74
ಶಾನ್ ಮಾರ್ಷ್ ಸಿ ಪಾಂಡ್ಯ ಬಿ ಅಶ್ವಿನ್23
 ಕ್ರಿಸ್ ಲಿನ್ ಸಿ ಧೋನಿ ಬಿ ಪಾಂಡ್ಯ02
 ಮ್ಯಾಕ್ಸ್‌ವೆಲ್ ಸ್ಟಂಪ್ಡ್ ಧೋನಿ ಬಿ ಯುವರಾಜ್ ಸಿಂಗ್01
 ವ್ಯಾಟ್ಸನ್ ಸಿ ಆ್ಯಂಡ್ ಬಿ ಜಡೇಜ 15
 ಮ್ಯಾಥ್ಯೂ ವೇಡ್ ಔಟಾಗದೆ16
 ಹೇಸ್ಟಿಂಗ್ಸ್ ಬಿ ಬುಮ್ರಾ04
 ಟಾಯ್ ಬಿ ಬುಮ್ರಾ04
ಇತರೆ08
ವಿಕೆಟ್ ಪತನ: 1-94, 2-99, 3-101, 4-121, 5-124, 6-137, 7-152, 8-157.
ಬೌಲಿಂಗ್ ವಿವರ
ಆಶಿಶ್ ನೆಹ್ರಾ4-0-34-0
ಬುಮ್ರಾ4-0-37-2

ಜಡೇಜ4-0-32-2
ಅಶ್ವಿನ್4-0-27-1
 ಪಾಂಡ್ಯ2-0-17-1
ಯುವರಾಜ್ ಸಿಂಗ್2-0-07-1
    
ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News