ಟ್ವೆಂಟಿ-20 ವಿಶ್ವಕಪ್: ಅಂಪೈರ್‌ಗಳಿಗೆ ವಿಶೇಷ ವಿನ್ಯಾಸದ ಹೆಲ್ಮೆಟ್
ದುಬೈ, ಜ.29: ಅಂಪೈರ್‌ಗಳ ಸುರಕ್ಷತೆಯ ಬಗ್ಗೆ ಹೆಚ್ಚು ಚಿಂತಿತವಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಭಾರತದಲ್ಲಿ ಮಾ.8 ರಂದು ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್‌ನ ವೇಳೆ ಎಲ್ಲ ಅಂಪೈರ್‌ಗಳಿಗೂ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಹೆಲ್ಮೆಟ್‌ಗಳನ್ನು ಒದಗಿಸಲು ನಿರ್ಧರಿಸಿದೆ.
ಕಳೆದ ಎರಡು ತಿಂಗಳಲ್ಲಿ ಇಬ್ಬರು ಅಂಪೈರ್‌ಗಳು ಚೆಂಡಿನ ಪೆಟ್ಟು ತಿಂದು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಬ್ಯಾಟ್ಸ್‌ಮನ್‌ಗಳ ದೊಡ್ಡ ಹೊಡೆತಗಳಿಂದ ಅಂಪೈರ್‌ಗಳನ್ನು ಬಚಾವ್ ಮಾಡಲು ಐಸಿಸಿ ಈ ಉಪ ಕ್ರಮಕ್ಕೆ ಮುಂದಾಗಿದೆ. 2015ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ನಡೆದಿದ್ದ ರಣಜಿ ಟ್ರೋಫಿಯ ವೇಳೆ ಆಸ್ಟ್ರೇಲಿಯದ ಅಂಪೈರ್ ಜಾನ್ ವಾರ್ಡ್ ತಲೆಗೆ ಚೆಂಡು ತಾಗಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದರು.
ಜ.20 ರಂದು ಭಾರತ ಹಾಗೂ ಆಸ್ಟ್ರೇಲಿಯ ನಡುವೆ ಕ್ಯಾನ್ಬೆರಾದಲ್ಲಿ ನಡೆದ ಏಕದಿನ ಪಂದ್ಯದ ವೇಳೆ ಇಂಗ್ಲೆಂಡ್ ಅಂಪೈರ್ ರಿಚರ್ಡ್ ಕೆಟೆಲ್‌ಬರಫ್‌ಗೆ ಚೆಂಡು ಬಲವಾಗಿ ತಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಆಸ್ಟ್ರೇಲಿಯದ ಅಂಪೈರ್ ಗೆರಾರ್ಡ್ ಅಬೂದ್ ಅವರು ಇತ್ತೀಚೆಗೆ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಹೆಲ್ಮೆಟ್ ಧರಿಸಿ ಮೈದಾನಕ್ಕೆ ಇಳಿದಿದ್ದರು. ಆಸ್ಟ್ರೇಲಿಯದ ವಾರ್ಡ್ ಕೂಡ ಇತ್ತೀಚೆಗೆ ಭಾರತ-ಆಸ್ಟ್ರೇಲಿಯ ನಡುವಿನ ಏಕದಿನ ಪಂದ್ಯದ ವೇಳೆ ಹೆಲ್ಮೆಟ್ ಧರಿಸಿ ಕಾರ್ಯನಿರ್ವಹಿಸಿದ್ದರು.
‘‘ಕಳೆದ 2-3 ವರ್ಷಗಳಿಂದ ದಾಂಡಿಗರ ಫಿಟ್‌ನೆಸ್ ಹಾಗೂ ಶಕ್ತಿ ಗಣನೀಯವಾಗಿ ಹೆಚ್ಚಾಗಿದೆ. ಈಗಿನ ದಾಂಡಿಗರು ಹಿಂದಿಗಿಂತ ಹೆಚ್ಚು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಟಗಾರರು ಹೆಚ್ಚು ತಾಕತ್ತಿನಿಂದ ಚೆಂಡನ್ನು ಬಾರಿಸುತ್ತಾರೆ. ಇತ್ತೀಚೆಗೆ ಟ್ವೆಂಟಿ-20 ಹಾಗೂ ಏಕದಿನ ಪಂದ್ಯಗಳಲ್ಲಿ ಅಂಪೈರ್‌ಗಳಿಗೆ ಚೆಂಡಿನ ಪೆಟ್ಟು ತಾಗಿತ್ತು. ಇದು ಅತ್ಯಂತ ಅಪಾಯಕಾರಿ’’ ಎಂದು ಇಂಗ್ಲೆಂಡ್ ಅಂಪೈರ್ ರಿಚರ್ಡ್ ಹೇಳಿದ್ದಾರೆ.