×
Ad

ಸೆಹ್ವಾಗ್ ಸಾರಥ್ಯದ ಜೆಮಿನಿ ಅರೇಬಿಯನ್ಸ್‌ಗೆ ಜಯ

Update: 2016-01-29 23:38 IST

ಮಾಸ್ಟರ್ಸ್‌ ಚಾಂಪಿಯನ್ಸ್ ಲೀಗ್

 ದುಬೈ, ಜ.29: ವೀರೇಂದ್ರ ಸೆಹ್ವಾಗ್ ನಾಯಕತ್ವದ ಜೆಮಿನಿ ಅರೇಬಿಯನ್ಸ್ ತಂಡ ಇಲ್ಲಿ ಆರಂಭವಾಗಿರುವ ಮಾಸ್ಟರ್ಸ್‌ ಚಾಂಪಿಯನ್ಸ್ ಲೀಗ್(ಎಂಸಿಎಲ್) ಟ್ವೆಂಟಿ-20 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಜೆಮಿನಿ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಲಿಬ್ರಾ ಲೆಜೆಂಡ್ಸ್ ತಂಡ 8 ವಿಕೆಟ್‌ಗಳ ನಷ್ಟಕ್ಕೆ 156 ರನ್ ಗಳಿಸಲಷ್ಟೇ ಶಕ್ತವಾಯಿತು.

ಕುಮಾರ ಸಂಗಕ್ಕರ(86 ರನ್, 43 ಎಸೆತ, 6 ಬೌಂಡರಿ, 7 ಸಿಕ್ಸರ್) ಹಾಗೂ ರಿಚರ್ಡ್ ಲೆವಿ(62ರನ್, 4 ಬೌಂಡರಿ, 3 ಸಿಕ್ಸರ್) ಗೆಲುವಿನ ರೂವಾರಿಗಳೆನಿಸಿದರು.

ನಾಯಕ ಸೆಹ್ವಾಗ್(21) ತಂಡಕ್ಕೆ ಮಿಂಚಿನ ಆರಂಭ ನೀಡಿದ್ದರೆ, ಸಂಗಕ್ಕರ ಹಾಗೂ ಲೆವಿ 2ನೆ ವಿಕೆಟ್‌ಗೆ 84 ರನ್ ಜೊತೆಯಾಟ ನಡೆಸಿದ್ದರು.

ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಲಿಬ್ರಾ ತಂಡ ಕಿವೀಸ್ ವೇಗಿ ಕೈನ್ ಮಿಲ್ಸ್ ಹಾಗೂ ಲಂಕಾದ ಸ್ಪಿನ್ ದಂತಕತೆ ಮುತ್ತಯ್ಯ ಮುರಳೀಧರನ್ ದಾಳಿಗೆ ತತ್ತರಿಸಿ 43 ರನ್‌ಗೆ 4 ವಿಕೆಟ್ ಕಳೆದುಕೊಂಡಿತು. ಡಚ್ ಆಲ್‌ರೌಂಡರ್ ರಿಯಾನ್ ಡೆನ್ ಡೊಶಾಟ್ (53 ರನ್) ಅಗ್ರ ಸ್ಕೋರರ್ ಎನಿಸಿಕೊಂಡರು.

ಇದಕ್ಕೆ ಮೊದಲು ಟೂರ್ನಿಗೆ ಅದ್ದೂರಿ ಚಾಲನೆ ನೀಡಲಾಯಿತು. ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಲ್ಲ ಆರು ತಂಡಗಳ ನಾಯಕರಾದ ಆ್ಯಡಮ್ ಗಿಲ್‌ಕ್ರಿಸ್ಟ್, ಪಾಲ್ ಕಾಲಿಂಗ್‌ವುಡ್, ಬ್ರಿಯಾನ್ ಲಾರಾ, ಗ್ರೇಮ್ ಸ್ಮಿತ್, ಜಾಕ್ ಕಾಲಿಸ್ ಹಾಗೂ ಸೆಹ್ವಾಗ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News