ಭಾರತ-ಶ್ರೀಲಂಕಾ ಟ್ವೆಂಟಿ-20: ದಿಲ್ಲಿಯಿಂದ ರಾಂಚಿಗೆ ವರ್ಗಾವಣೆ
Update: 2016-01-29 23:41 IST
ಹೊಸದಿಲ್ಲಿ, ಜ.29: ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ನಡೆಯಲಿರುವ ಎರಡನೆ ಟ್ವೆಂಟಿ-20 ಪಂದ್ಯವನ್ನು ದಿಲ್ಲಿಯಿಂದ ರಾಂಚಿಗೆ ವರ್ಗಾವಣೆ ಮಾಡಲಾಗಿದೆ.
ದಿಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ಪಂದ್ಯವನ್ನು ಆಯೋಜಿಸಲು ದಿಲ್ಲಿಯ ಮಹಾನಗರ ಪಾಲಿಕೆಯಿಂದ ಅನುಮತಿ ಪತ್ರ ಪಡೆಯದೇ ಇರುವ ಕಾರಣ ಪಂದ್ಯವನ್ನು ದಿಲ್ಲಿಯ ಫಿರೋಜ್ ಷಾ ಕೋಟ್ಲಾದಿಂದ ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂಗೆ ವರ್ಗಾಯಿಸಲಾಗಿದೆ ಎಂದು ಬಿಸಿಸಿಐ ಖಚಿತಪಡಿಸಿದೆ.
ಡಿಡಿಸಿಎಗೆ ಎರಡನೆ ಪಂದ್ಯ ಆಯೋಜನೆ ಕುರಿತಂತೆ ಶುಕ್ರವಾರ ಗಡುವು ನೀಡಲಾಗಿತ್ತು ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.
‘‘ತಮಗೆ ಪ್ರಮಾಣಪತ್ರ ನೀಡುವಂತೆ ದಿಲ್ಲಿ ಮುನ್ಸಿಪಲ್ ಕಾರ್ಪೋರೇಶನ್‌ಗೆ ದಿಲ್ಲಿ ಹೈಕೋರ್ಟ್ ನಿರ್ದೇಶನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಡಿಡಿಸಿಎ ಎರಡನೆ ಟ್ವೆಂಟಿ-20 ಪಂದ್ಯ ಆಯೋಜಿಸಲು ಅಸಮರ್ಥವಾಗಿದೆ’’ಎಂದು ಡಿಡಿಸಿಎ ಹಂಗಾಮಿ ಅಧ್ಯಕ್ಷ ಚೇತನ್ ಚೌಹಾಣ್ ಹೇಳಿದ್ದಾರೆ.