×
Ad

ಆಸ್ಟ್ರೇಲಿಯನ್ ಓಪನ್: ಜೊಕೊವಿಕ್ ಚಾಂಪಿಯನ್

Update: 2016-01-31 22:40 IST

ಮೆಲ್ಬೋರ್ನ್, ಜ.31: ಆರನೆ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಎತ್ತಿ ಹಿಡಿದ ಸರ್ಬಿಯದ ನೊವಾಕ್ ಜೊಕೊವಿಕ್ ರಾಯ್ ಎಮರ್ಸನ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ರವಿವಾರ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೊಕೊವಿಕ್ ಅವರು ಬ್ರಿಟನ್‌ನ ಆ್ಯಂಡಿ ಮರ್ರೆ ಅವರನ್ನು 6-1, 7-5, 7-6(3) ಸೆಟ್‌ಗಳ ಅಂತರದಿಂದ ಸೋಲಿಸಿದರು. ಈ ಮೂಲಕ ಪ್ರಶಸ್ತಿ ಗೆಲ್ಲುವ ಮರ್ರೆಯ ಕನಸು ಮತ್ತೊಮ್ಮೆ ಭಗ್ನವಾಯಿತು.

 ಮರ್ರೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಐದನೆ ಬಾರಿ ಫೈನಲ್‌ಗೆ ತಲುಪಿದರೂ ಪ್ರಶಸ್ತಿ ಜಯಿಸಲು ಸಾಧ್ಯವಾಗಲಿಲ್ಲ. ನಾಲ್ಕು ಬಾರಿ ವಿಶ್ವದ ನಂ.1 ಆಟಗಾರ ಜೊಕೊವಿಕ್ ವಿರುದ್ಧವೇ ಮರ್ರೆ ಸೋತಿದ್ದಾರೆ.

ಎರಡು ಗಂಟೆ, 53 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜಯಶಾಲಿಯಾಗಿರುವ ಜೊಕೊವಿಕ್ 11ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಇದರೊಂದಿಗೆ ಆಸ್ಟ್ರೇಲಿಯದ ರಾಡ್ ಲ್ಯಾವರ್ ಹಾಗೂ ಸ್ವೀಡನ್‌ನ ಬ್ಯಾರ್ನ್ ಬಾರ್ಗ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಜೊಕೊವಿಕ್ ಕಳೆದ ಆರು ವರ್ಷಗಳಲ್ಲಿ ಐದನೆ ಬಾರಿ ವರ್ಷದ ಮೊದಲ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿ ಶುಭಾರಂಭ ಮಾಡಿದರು. 2008ರಲ್ಲಿ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದರು.

ಸೆಮಿಫೈನಲ್‌ನಲ್ಲಿ ರೋಜರ್ ಫೆಡರರ್‌ರನ್ನು ಮಣಿಸಿ ಫೈನಲ್‌ಗೆ ತಲುಪಿದ್ದ ಜೊಕೊವಿಕ್ ಆರಂಭದಲ್ಲೇ ಮರ್ರೆ ವಿರುದ್ಧ ಮೇಲುಗೈ ಸಾಧಿಸಿದರು. ಮೊದಲ ಸೆಟ್‌ನ್ನು 6-1 ರಿಂದ ಗೆದ್ದುಕೊಂಡರು. ಎರಡನೆ ಸೆಟ್‌ನಲ್ಲೂ ಪ್ರಾಬಲ್ಯ ಸಾಧಿಸಿದ ಜೊಕೊವಿಕ್ 7-5 ರಿಂದ ಜಯಿಸಿದರು. ಮೂರನೆ ಸೆಟ್‌ನ್ನು ಟೈ ಬ್ರೇಕರ್‌ನಲ್ಲಿ 7-6(3) ಸೆಟ್‌ಗಳಿಂದ ಗೆದ್ದುಕೊಂಡು ಆರನೆ ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆದರು. ಮರ್ರೆ ಒಂದೇ ಗ್ರಾನ್‌ಸ್ಲಾಮ್ ಟೂರ್ನಿಯ ಫೈನಲ್‌ನಲ್ಲಿ ಐದು ಬಾರಿ ಸೋತಿರುವ ವಿಶ್ವದ ಎರಡನೆ ಟೆನಿಸ್ ಆಟಗಾರ ಎನಿಸಿಕೊಂಡರು. ಯುಎಸ್ ಓಪನ್‌ನಲ್ಲಿ ಈ ಹಿಂದೆ ಇವಾನ್ ಲೆಂಡ್ಲ್ ಅವರು ಐದು ಬಾರಿ ಫೈನಲ್ ಸೋತಿದ್ದರು.

ಬ್ರೆಝಿಲ್‌ನ ಸೊರೆಸ್‌ಗೆ ಅವಳಿ ಟ್ರೋಫಿ!

ಮೆಲ್ಬೋರ್ನ್, ಜ.31: ಬ್ರೆಝಿಲ್‌ನ ಬ್ರುನೊ ಸೊರೆಸ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಒಂದೇ ದಿನ ಅವಳಿ ಟ್ರೋಫಿ ಜಯಿಸಿ ಅಪರೂಪದ ಸಾಧನೆ ಮಾಡಿದ್ದಾರೆ. ರವಿವಾರ ಬೆಳಗ್ಗೆ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿಯನ್ನು ಜಯಿಸಿದ ಸೊರೆಸ್ ಅದೇ ದಿನ ನಡೆದ ಪುರುಷರ ಡಬಲ್ಸ್‌ನಲ್ಲೂ ಚಾಂಪಿಯನ್ ಎನಿಸಿಕೊಂಡರು.

ಸೊರೆಸ್ ಅವರು ರಶ್ಯದ ಎಲೆನಾ ವೆಸ್ನಿನಾ ಜೊತೆಗೂಡಿ ಮಿಶ್ರ ಡಬಲ್ಸ್‌ನ ಫೈನಲ್‌ನಲ್ಲಿ ಅಮೆರಿಕದ ಕೊಕೊ ವ್ಯಾಡೆವೆಗ್ ಹಾಗೂ ರೊಮಾನಿಯದ ಹೊರಿಯಾ ಟೆಕಾವು ಅವರನ್ನು 6-4, 4-6, 10-5 ಸೆಟ್‌ಗಳ ಅಂತರದಿಂದ ಸೋಲಿಸಿದರು.

ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಚಾಂಪಿಯನ್ ಆದ ನಂತರ ಬ್ರಿಟನ್‌ನ ಆ್ಯಂಡಿ ಮರ್ರೆ ಸಹೋದರ ಜಮ್ಮಿ ಮರ್ರೆ ಅವರೊಂದಿಗೆ ಡಬಲ್ಸ್ ಪಂದ್ಯವನ್ನು ಆಡಿದ ಸೊರೆಸ್ ಝೆಕ್‌ನ ಹಿರಿಯ ಆಟಗಾರ ರಾಡೆಕ್ ಸ್ಟೆಪನೆಕ್ ಹಾಗೂ ಕೆನಡಾದ ಡೇನಿಯಲ್ ನೆಸ್ಟರ್‌ರನ್ನು ಮೂರು ಸೆಟ್‌ಗಳ ಅಂತರದಿಂದ ಸೋಲಿಸಿ ಮತ್ತೊಂದು ಪ್ರಶಸ್ತಿ ಎತ್ತಿ ಹಿಡಿದರು.

ಕಳೆದ 24 ಗಂಟೆಗಳಿಂದ ಇದೇ ಟೆನಿಸ್ ಅಂಗಳದಲ್ಲಿ ಇದ್ದೇನೆಂಬ ಭಾಸವಾಗುತ್ತಿದೆ. ಅದರೆ, ಇದೊಂದು ಉತ್ತಮ ಅನುಭವ. ಎಲೆನಾ ಒಂದು ವಾರ ನನ್ನೊಂದಿಗಿದ್ದರು. ಆಕೆಯ ಪ್ರದರ್ಶನವೂ ಅದ್ಭುತವಾಗಿತ್ತು ಎಂದು 22ನೆ ಬಾರಿ ಡಬಲ್ಸ್ ಪ್ರಶಸ್ತಿ ಜಯಿಸಿದ ಸೊರೆಸ್ ಪ್ರತಿಕ್ರಿಯಿಸಿದರು.

ಸೊರೆಸ್ 2012 ಹಾಗೂ 2014ರಲ್ಲಿ ಅಮೆರಿಕನ್ ಓಪನ್‌ನ ಮಿಶ್ರ ಡಬಲ್ಸ್‌ನಲ್ಲಿ ಟ್ರೋಫಿ ಗೆದ್ದುಕೊಂಡಿದ್ದರು.

ಹೈಲೈಟ್ಸ್:

11ನೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಜೊಕೊವಿಕ್ ರಾಡ್ ಲ್ಯಾವರ್ ಹಾಗೂ ಬ್ಯಾರ್ನ್ ಬಾರ್ಗ್ ದಾಖಲೆಯನ್ನು ಸರಿಗಟ್ಟಿದರು.

* ಮರ್ರೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಿದ ಐದನೆ ಫೈನಲ್ ಪಂದ್ಯದಲ್ಲೂ ಸೋತಿದ್ದಾರೆ.

*ಆಸ್ಟ್ರೇಲಿಯನ್ ಓಪನ್‌ನಲ್ಲಿ ಆರನೆ ಪ್ರಶಸ್ತಿ ಜಯಿಸಿದ ಜೊಕೊವಿಕ್ ರಾಯ್ ಎಮರ್‌ಸನ್ ದಾಖಲೆ ಸರಿಗಟ್ಟಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News