×
Ad

ಪ್ಲಾಸ್ಟಿಕ್ ಜರ್ಸಿ ಧರಿಸಿ ಆಡುವ ಅಭಿಮಾನಿಯ ಭೇಟಿಗೆ ಮೆಸ್ಸಿ ಶೀಘ್ರದಲ್ಲೇ ಅಫ್ಘಾನಿಸ್ತಾನಕ್ಕೆ !

Update: 2016-02-01 22:05 IST

 ಕಾಬೂಲ್, ಫೆ.1: ಆತ ಐದರ ಹರೆಯದ ಪೋರ. ಹೆಸರು ಮುರ್ತಝಾ ಅಹ್ಮದಿ. ಹೀಗಿದ್ದರೂ ಆತನಿಗೆ ಫುಟ್ಬಾಲ್ ಹುಚ್ಚು. ಅದರಲ್ಲೂ ಮುಖ್ಯವಾಗಿ ಆತ ಅರ್ಜೆಂಟಿನದ ಫುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿ ಅಭಿಮಾನಿ.
ಫುಟ್ಬಾಲ್ ಆಡುತ್ತಿರುವ ಈ ಬಾಲಕನಿಗೆ ಜರ್ಸಿ ಖರೀದಿಸಿ ಕೊಡಲು ಹೆತ್ತವರ ಕೈಯಲ್ಲಿ ಕಾಸಿಲ್ಲ. ಈ ಕಾರಣಕ್ಕಾಗಿ ಪ್ಲಾಸ್ಟಿಕ್ ಚೀಲದಿಂದ ತಯಾರಿಸಿದ ಜರ್ಸಿ ಧರಿಸಿ ಆಡುತ್ತಿದ್ದಾನೆ. ಜರ್ಸಿಯಲ್ಲಿ ತನ್ನ ನೆಚ್ಚಿನ ಆಟಗಾರ ‘ಮೆಸ್ಸಿ’ ಎಂದು ಬರೆಯಲಾಗಿದೆ.
  ಅಫ್ಘಾನಿಸ್ತಾನದಲ್ಲಿ ಫುಟ್ಬಾಲ್ ಮತ್ತು ಕ್ರಿಕೆಟ್ ಜನಪ್ರಿಯ ಕ್ರೀಡೆ. ಮುರ್ತಝಾ ತಂದೆ ಜಾಗೋರಿ ಜಿಲ್ಲೆಯ ಗಝ್ನಿಯ ಬಡ ರೈತ. ಅವರಿಗೆ ತನ್ನ ಮಗನಿಗೆ ಮೆಸ್ಸಿಯ ಜರ್ಸಿ ಮಾದರಿಯ ಜರ್ಸಿಯನ್ನು ಖರೀದಿಸಿ ಕೊಡುವ ಶಕ್ತಿ ಇಲ್ಲ.ಮುರ್ತಝಗೆ ಒಡೆದ ಚೆಂಡನ್ನು ಆಡಲು ನೀಡಿದ್ದಾರೆ.
 ನೆರೆಮನೆಯವರು ಬಳಸಿ ಬಿಸಾಡಿದ ಪ್ಲಾಸಿಕ್ ಚೀಲವನ್ನು ಜರ್ಸಿ ಮಾಡಿದ್ದಾನೆ.
 ಮುರ್ತಝಾ ಅಣ್ಣ 15ರ ಹರೆಯದ ಹುಮಾಯೂನ್ ನೀಲಿ ಹಾಗೂ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಿಂದ ಜರ್ಸಿ ತಯಾರಿಸಿ ಅದರ ಮೇಲೆ ಮಾರ್ಕರ್ ಪೆನ್‌ನಲ್ಲಿ ಮೆಸ್ಸಿ ಎಂದು ಇಂಗ್ಲೀಷ್‌ನಲ್ಲಿ ಬರೆದು ತಮ್ಮನಿಗೆ ನೀಡಿದ್ದನು.
     ಕಾಬೂಲ್ ಸಮೀಪದ ಗಝ್ನಿಯ ಬಡ ಕುಟಂಬದ ಈ ಬಾಲಕ ಮುರ್ತಝಾ ಪ್ರಪಂಚದ ಫುಟ್ಬಾಲ್ ಪ್ರೇಮಿಗಳ ಮನ ಗೆದ್ದಿದ್ದಾನೆ. ಪ್ಲಾಸ್ಟಿಕ್ ಜರ್ಸಿ ಧರಿಸಿ ಆಡುವ ಫೋಟೊಗಳು ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ಪ್ರಕಟಗೊಂಡಿತ್ತು. ಇದನ್ನು ನೋಡಿದ ಮೆಸ್ಸಿ ಇದೀಗ ತನ್ನ ಪುಟಾಣಿ ಫುಟ್ಬಾಲ್ ಅಭಿಯಾನಿಯ ಭೇಟಿಯಾಗುವ ಆಲೋಚನೆ ಮಾಡಿದ್ದಾರೆ ಎಂದು ಅಫ್ಘಾನಿಸ್ತಾನದ ಫುಟ್ಬಾಲ್ ಫೆಡರೇಶನ್(ಎಎಫ್‌ಎಫ್) ಸೋಮವಾರ ತಿಳಿಸಿದೆ.
 ತಾಲಿಬಾನ್ ಕೈಯಲ್ಲಿ ನಲುಗಿರುವ ಅಫ್ಘಾನಿಸ್ತಾನದಲ್ಲಿ ಸರಿಯಾದ ಫುಟ್ಬಾಲ್ ಕ್ರೀಡಾಂಗಣಗಳಿಲ್ಲ. ಕಾಬೂಲ್‌ನ ಫುಟ್ಬಾಲ್ ಕ್ರೀಡಾಂಗಣ ಮರಣದಂಡನೆ , ಕಲ್ಲೆಸೆದು ಕೊಲ್ಲುವ, ಕೈಕಾಲು ಕತ್ತರಿಸುವ ಮತ್ತಿತರ ಘೋರ ಶಿಕ್ಷೆ ವಿಧಿಸುವುದಕ್ಕೆ ಬಳಕೆಯಾಗುತ್ತಿದೆ.
 ಮೆಸ್ಸಿ ಅಫ್ಘಾನಿಸ್ತಾನಕ್ಕೆ ಬರುವ ದಿನ ನಿಗದಿಯಾಗಿಲ್ಲ. ಆದರೆ ಅವರು ತನ್ನನ್ನು ಸಂಪರ್ಕಿಸಿ ಬಾಕನನ್ನು ಭೇಟಿಯಾಗುವ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮನವಿ ಮಾಡಿರುವುದಾಗಿ ಎಎಫ್‌ಎಫ್‌ನ ವಕ್ತಾರ ಸೈಯದ್ ಅಲಿ ಕಝೆಮಿ ಮಾಹಿತಿ ನೀಡಿದ್ದಾರೆ.
ಮೆಸ್ಸಿ ಅಫ್ಘಾನಿಸ್ತಾನಕ್ಕೆ ಬರುತ್ತಾರೋ ಅಥವಾ ಮೆಸ್ಸಿ ತನ್ನ ಅಭಿಯಾನಿಯನ್ನು ಸ್ಪೇನ್‌ನಲ್ಲಿ ಅಥವಾ ತಮಗೆ ಅನುಕೂಲವಾದ ಬೇರೆ ದೇಶವೊಂದರಲ್ಲಿ ಭೇಟಿಯಾಗುತ್ತಾರೋ ಗೊತ್ತಿಲ್ಲ.
  ತನ್ನ ಹೆಸರು ಇರುವ ಪ್ಲಾಸ್ಟಿಕ್ ಜರ್ಸಿ ಧರಿಸಿ ಆಡುತ್ತಿರುವ ಪುಟಾಣಿ ಮುರ್ತಝಾನನ್ನು ಆದಷ್ಟು ಬೇಗ ಭೇಟಿಯಾಗಿ ಆತನಿಗೆ ಏನಾದರೂ ನೀಡಲು ಮೆಸ್ಸಿ ಬಯಸಿದ್ದಾರೆ ಎಂದು ಮೆಸ್ಸಿಯ ತಂದೆ ಜಾರ್ಜ್ ಮೆಸ್ಸಿ ತಿಳಿಸಿದ್ದಾರೆ.
ಮೆಸ್ಸಿಯ ಕ್ಲಬ್ ಬಾರ್ಸಿಲೋನಾ ಬಾಲಕನನ್ನು ಮೆಸ್ಸಿ ಭೇಟಿಯಾಗುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
  ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಅಭಿಮಾನಿ ಬಾಲಕನನ್ನು ಭೇಟಿಯಾಗಲು ಮೆಸ್ಸಿ ಗೆ ಭದ್ರತಾ ಸಮಸ್ಯೆ ಎದುರಾಗಬಹುದು. ಈ ಕಾರಣದಿಂದಾಗಿ ಮೆಸ್ಸಿಗೆ ಯುರೋಪ್ ನ ಯಾವುದಾದರೊಂದು ದೇಶದಲ್ಲಿ ಅಭಿಮಾನಿಯನ್ನು ಭೇಟಿಯಾಗಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಯೋಚಿಸಲಾಗುವುದು ಎಂದು ಕಾಬೂಲ್‌ನಲ್ಲಿರುವ ಸ್ಪೇನ್‌ನ ರಾಯಭಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News