ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಸೆಹ್ವಾಗ್ ಸಲಹೆಗಾರ
ಹೊಸದಿಲ್ಲಿ, ಫೆ.1: ಭಾರತದ ಮಾಜಿ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.
ಹೊಸ ಜವಾಬ್ದಾರಿಯನ್ನು ಪಡೆದಿರುವ ಸೆಹ್ವಾಗ್ ಮುಖ್ಯ ಕೋಚ್ ಸಂಜಯ್ ಬಾಂಗರ್ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ‘‘ವೀರೇಂದ್ರ ಸೆಹ್ವಾಗ್ ಕಳೆದ ಎರಡು ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಅವಿಭಾಜ್ಯ ಅಂಗವಾಗಿದ್ದರು. ಅವರಿಗೆ ತಂಡದ ಬಗ್ಗೆ ಚೆನ್ನಾಗಿ ತಿಳಿದಿದೆ. ಇದೀಗ ತಂಡದ ಮೆಂಟರ್ ಆಗಿ ನೇಮಕಗೊಂಡಿರುವ ಸೆಹ್ವಾಗ್‌ರಿಂದ ತಂಡಕ್ಕೆ ಹೆಚ್ಚು ಲಾಭವಾಗಲಿದೆ’’ ಎಂದು ಪಂಜಾಬ್ ತಂಡದ ಕೋಚ್ ಸಂಜಯ್ ಹೇಳಿದ್ದಾರೆ.
‘‘ಕ್ರಿಕೆಟ್ ಬಗ್ಗೆ ಅವರಿಗಿರುವ ಜ್ಞಾನ ಬಲಿಷ್ಠ ತಂಡವನ್ನು ಕಟ್ಟಲು ಹಾಗೂ ಆಟಗಾರರಿಂದ ಉತ್ತಮ ಪ್ರದರ್ಶನ ಹೊರತರಲು ನೆರವಾಗಲಿದೆ. ಸೆಹ್ವಾಗ್ ತಾನೋರ್ವ ಶ್ರೇಷ್ಠ ಸಲಹೆಗಾರನೆಂದು ಸಾಬೀತುಪಡಿಸಲಿದ್ದಾರೆ. ಅವರ ಉಪಸ್ಥಿತಿಯು ತಂಡಕ್ಕೆ ಶಕ್ತಿ ತುಂಬಲಿದೆ’’ ಎಂದು ಸಂಜಯ್ ತಿಳಿಸಿದ್ದಾರೆ.