×
Ad

ಅಂಡರ್-19 ವಿಶ್ವಕಪ್: ಭಾರತದ ಆರ್ಭಟಕ್ಕೆ ನಲುಗಿದ ನೇಪಾಳ

Update: 2016-02-01 23:07 IST

ಆವೇಶ್ ಖಾನ್(3-24) 

ಮೀರ್ಪುರ, ಫೆ.1: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಬಾರಿಸಿದ ಮಿಂಚಿನ ಅರ್ಧಶತಕದ(24 ಎಸೆತ, 78 ರನ್) ಸಹಾಯದಿಂದ ಭಾರತ ತಂಡ ನೇಪಾಳ ವಿರುದ್ಧದ ಅಂಡರ್-19 ವಿಶ್ವಕಪ್ ಪಂದ್ಯದಲ್ಲಿ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.

 ವಿಶ್ವಕಪ್‌ನ ‘ಡಿ’ ಗುಂಪಿನಲ್ಲಿ ಆಡಿರುವ ಎಲ್ಲ ಪಂದ್ಯಗಳನ್ನು ಜಯಿಸಿರುವ ಭಾರತ ಅಜೇಯವಾಗುಳಿದಿದೆ. ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಬಾಂಗ್ಲಾದೇಶ ಇಲ್ಲವೇ ನಮೀಬಿಯಾ ತಂಡವನ್ನು ಎದುರಿಸಲಿದೆ.

ರಿಷಬ್ ಪಂತ್ 18 ಎಸೆತಗಳಲ್ಲಿ 9 ಬೌಂಡರಿ ಹಾಗೂ ಐದು ಸಿಕ್ಸರ್‌ಗಳ ಸಹಾಯದಿಂದ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ಸಿಡಿಸಿದರು. ಪಂತ್ ಸಾಹಸದಿಂದ ಭಾರತ 18.1 ಓವರ್‌ಗಳಲ್ಲಿ 170 ರನ್ ಗುರಿಯನ್ನು ಸುಲಭವಾಗಿ ತಲುಪಿತು.

ರಣಜಿ ಟ್ರೋಫಿ ಆಟಗಾರರಾದ ರಿಷಬ್ ಹಾಗೂ ನಾಯಕ ಐಶಾನ್ ಕಿಶನ್(52 ರನ್, 40 ಎಸೆತ, 7 ಬೌಂಡರಿ, 3 ಸಿಕ್ಸರ್) ಮೊದಲ ವಿಕೆಟ್‌ನಲ್ಲಿ ಕೇವಲ 9 ಓವರ್‌ಗಳಲ್ಲಿ 124 ರನ್ ಜೊತೆಯಾಟ ನಡೆಸಿ ನೇಪಾಳದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು.

ಸರ್ಫ್‌ರಾಝ್ ಖಾನ್(ಔಟಾಗದೆ 21, 23 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ಅರ್ಮಾನ್ ಝಾಫರ್(ಔಟಾಗದೆ 12) 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 33 ರನ್ ಸೇರಿಸಿ ಇನ್ನೂ 179 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ನೇಪಾಳ 169/8: ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ನೇಪಾಳ ತಂಡವನ್ನು ಆವೇಶ್ ಖಾನ್(3-24) ನೇತೃತ್ವದ ಭಾರತದ ಬೌಲಿಂಗ್ ಪಡೆ 8 ವಿಕೆಟ್ ನಷ್ಟಕ್ಕೆ 169 ರನ್‌ಗೆ ನಿಯಂತ್ರಿಸಿತ್ತು. 48 ಓವರ್‌ಗೆ ಕಡಿತಗೊಳಿಸಲಾದ ಪಂದ್ಯದಲ್ಲಿ ವಿ. ಸುಂದರ್(2-20) ಹಾಗೂ ಮಯಾಂಕ್ ದಾಗಾರ್(2-32) ತಲಾ ಎರಡು ವಿಕೆಟ್ ಕಬಳಿಸಿದರು. ನೇಪಾಳದ ಪರ ಆರಂಭಿಕ ದಾಂಡಿಗ ಸುನರ್(37) ಅಗ್ರ ಸ್ಕೋರರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

ನೇಪಾಳ: 48 ಓವರ್‌ಗಳಲ್ಲಿ 169/8

(ಎಸ್. ಸುನರ್ 37, ರಾಜ್ಬೀರ್ ಸಿಂಗ್ 35, ಪ್ರೇಮ್ ತಮಂಗ್ ಔಟಾಗದೆ 29, ಆವೇಶ್ ಖಾನ್ 3-34, ವಿ.ಸುಂದರ್ 2-20)

ಭಾರತ: 18.1 ಓವರ್‌ಗಳಲ್ಲಿ 175/3

(ರಿಷಬ್ ಪಂತ್ 78, ಇಶಾನ್ ಕಿಶನ್ 52, ಸರ್ಫ್‌ರಾಝ್ ಖಾನ್ ಔಟಾಗದೆ 21, ಪ್ರೇಮ್ ತಮಾಂಗ್ 2-41)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News