ಅಂಡರ್-19 ವಿಶ್ವಕಪ್: ವೇಗದ ಅರ್ಧಶತಕ ಬಾರಿಸಿದ ಪಂತ್

Update: 2016-02-01 17:39 GMT

ಢಾಕಾ, ಫೆ.1: ಭಾರತದ ಯುವ ವಿಕೆಟ್‌ಕೀಪರ್-ದಾಂಡಿಗ ರಿಷಬ್ ಪಂತ್ ಸೋಮವಾರ ಅಂಡರ್-19 ವಿಶ್ವಕಪ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಆ್ಯಡಂ ಗಿಲ್‌ಕ್ರಿಸ್ಟ್ ಹಾಗೂ ಎಂಎಸ್ ಧೋನಿಯ ಆಟವನ್ನು ನೆನಪಿಸಿದರು.

 ಕೇವಲ 18 ಎಸೆತಗಳಲ್ಲಿ 50 ರನ್ ಪೂರೈಸಿದ ಪಂತ್ ಐಸಿಸಿ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕವನ್ನು ಸಿಡಿಸಿದ ಸಾಧನೆ ಮಾಡಿದರು. 2009-10ರ ಆವೃತ್ತಿಯ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್‌ಇಂಡೀಸ್ ದಾಂಡಿಗ ಟ್ರೆವನ್ ಗ್ರಿಫಿತ್ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದರು.

ನಾಯಕ ಇಶಾನ್ ಕಿಶನ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ದಿಲ್ಲಿಯ 18ರ ಹರೆಯದ ಪಂತ್ ನೇಪಾಳದ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದರು.

24 ಎಸೆತಗಳಲ್ಲಿ 78 ರನ್ ಸಿಡಿಸಿದ ಪಂತ್ ಒಂದು ಹಂತದಲ್ಲಿ ದಕ್ಷಿಣ ಆಫ್ರಿಕದ ಎಬಿ ಡಿವಿಲಿಯರ್ಸ್ ಹೆಸರಲ್ಲಿರುವ ಅತ್ಯಂತ ವೇಗದ ಶತಕದ ದಾಖಲೆ ಮುರಿಯುವ ವಿಶ್ವಾಸ ಮೂಡಿಸಿದ್ದರು. ಪಂತ್ ಅಬ್ಬರದ ನೆರವಿನಿಂದ ಭಾರತ 3.5 ಓವರ್‌ಗಳಲ್ಲಿ 50 ರನ್ ಹಾಗೂ 7.3 ಓವರ್‌ಗಳಲ್ಲಿ 100 ರನ್ ತಲುಪಿತು.

ನೇಪಾಳದ ಸ್ಪಿನ್ನರ್ ಪ್ರೇಮ್ ತಮಂಗ್ 9.1ನೆ ಓವರ್‌ನಲ್ಲಿ ಪಂತ್‌ರ ಬಿರುಗಾಳಿ ವೇಗದ ಬ್ಯಾಟಿಂಗ್‌ಗೆ ಕೊನೆಗೂ ತೆರೆ ಎಳೆದರು.

ಫೆ.6 ರಂದು ನಡೆಯಲಿರುವ 2016ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಎಡಗೈ ದಾಂಡಿಗ ಪಂತ್ 10 ಲಕ್ಷ ರೂ.ಮೂಲ ಬೆಲೆ ಹೊಂದಿದ್ದಾರೆ. ಪಂತ್‌ರನ್ನು ತಮ್ಮತ್ತ ಸೆಳೆಯಲು ಡೆಲ್ಲಿ ಡೇರ್ ಡೆವಿಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸಹಿತ ಎಲ್ಲ ತಂಡಗಳು ತುದಿಗಾಲಲ್ಲಿ ನಿಂತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News