ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಅಲಿ ನಿಧನ

Update: 2016-02-03 13:40 GMT

ಕರಾಚಿ, ಫೆ.3: ಪಾಕಿಸ್ತಾನದ ಹಿರಿಯ ಟೆಸ್ಟ್ ಕ್ರಿಕೆಟಿಗ ಇಸ್ರಾರ್ ಅಲಿ(88 ವರ್ಷ) ಸೋಮವಾರ ತಮ್ಮ ತವರು ಪಟ್ಟಣ ಒಕಾರಾ ಪಂಜಾಬ್‌ನಲ್ಲಿ ನಿಧನರಾಗಿದ್ದಾರೆ.
ಆಲ್‌ರೌಂಡರ್ ಆಗಿದ್ದ ಅಲಿ 1952ರಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನದ ಮೊತ್ತ ಮೊದಲ ಟೆಸ್ಟ್ ತಂಡದ ಸದಸ್ಯರಾಗಿದ್ದರು.
ಮೇ 1, 1927ರಲ್ಲಿ ಭಾರತದ ಜಲಂಧರ್‌ನಲ್ಲಿ ಜನಿಸಿದ್ದ ಇಸ್ರಾರ್ ಅಲಿ 1952 ಹಾಗೂ 1959ರ ನಡುವೆ ಪಾಕ್ ಪರ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 1959ರಲ್ಲಿ ಆಸ್ಟ್ರೇಲಿಯದ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಆಸೀಸ್ ವಿರುದ್ಧದ ಸರಣಿಯ ಎಲ್ಲ ನಾಲ್ಕೂ ಇನಿಂಗ್ಸ್‌ಗಳಲ್ಲಿ ಆರಂಭಿಕ ದಾಂಡಿಗ ಲೆಸ್ ಫಾವೆಲ್‌ರನ್ನು ಔಟ್ ಮಾಡುವ ಮೂಲಕ ಅಲಿ ಪ್ರಸಿದ್ದಿ ಪಡೆದಿದ್ದರು.


ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 6 ವಿಕೆಟ್‌ಗಳನ್ನು ಕಬಳಿಸಿದ್ದ ಅಲಿ 40 ಪ್ರಥಮ ದರ್ಜೆ ಪಂದ್ಯಗಳಲ್ಲಿ 22.63ರ ಸರಾಸರಿಯಲ್ಲಿ 114 ವಿಕೆಟ್‌ಗಳು ಹಾಗೂ 20.54ರ ಸರಾಸರಿಯಲ್ಲಿ 1,130 ರನ್ ಕಲೆ ಹಾಕಿದ್ದರು.


 ಅಲಿ 1983-84ರಲ್ಲಿ ಪಾಕಿಸ್ತಾನದ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಸಹ ಆಟಗಾರ ಇಸ್ರಾರ್ ಅಲಿ ಅವರೊಂದಿಗೆ ಕಳೆದ ಸಮಯವನ್ನು ಸ್ಮರಿಸಿಕೊಂಡ ಪಾಕಿಸ್ತಾನದ ಮಾಜಿ ಬ್ಯಾಟಿಂಗ್ ದಂತಕತೆ ಹನೀಫ್ ಮುಹಮ್ಮದ್, ‘‘ಅವರು ಕ್ರಿಕೆಟಿಗನಾಗಿ ವೃತ್ತಿಪರ ನಿಲುವು ಹೊಂದಿದ್ದರು. ಪರಿಪೂರ್ಣ ಆಲ್‌ರೌಂಡರ್ ಆಗಿದ್ದ ಅವರು ಚೆಂಡನ್ನು ಚೆನ್ನಾಗಿ ಸ್ವಿಂಗ್ ಮಾಡುತ್ತಿದ್ದರು. ದುರದೃಷ್ಟವಶಾತ್ ಅವರಿಗೆ ಪಾಕಿಸ್ತಾನ ತಂಡದಲ್ಲಿ ಹೆಚ್ಚು ಪಂದ್ಯಗಳನ್ನು ಆಡಲು ಅವಕಾಶ ಲಭಿಸಿರಲಿಲ್ಲ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News