ಸಾಯ್ ಕೋಚ್ ಆಗಿ ಸಂಜಯ್ ರಾಜ್‌ಪೂತ್ ಆಯ್ಕೆ

Update: 2016-02-03 18:04 GMT

ಹೊಸದಿಲ್ಲಿ, ಫೆ.3: ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಸಂಭ್ರಮದಲ್ಲಿರುವ ಭಾರತದ ಹಿರಿಯ ಶೂಟರ್ ಸಂಜೀವ್ ರಾಜ್‌ಪೂತ್ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ(ಸಾಯ್)ಶೂಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

2014ರಲ್ಲಿ ನೌಕಾ ಪಡೆಯ ಉದ್ಯೋಗವನ್ನು ತ್ಯಜಿಸಿದ್ದ ಹರ್ಯಾಣ ಮೂಲದ ಶೂಟರ್ ರಾಜ್‌ಪೂತ್‌ಗೆ ಕೊನೆಗೂ ಮತ್ತೊಂದು ಉದ್ಯೋಗ ಪ್ರಾಪ್ತಿಯಾಗಿದೆ.

 ಏರ್‌ರೈಫಲ್ ಶೂಟರ್ ರಾಜ್‌ಪೂತ್ ಸಾಯ್ ನೀಡಿದ್ದ ಕೊಡುಗೆಯನ್ನು ಸ್ವೀಕರಿಸಿದ್ದಾರೆ. ರಾಜ್‌ಪೂತ್ ಈಗಾಗಲೇ ಸಾಯ್‌ಗೆ ಸೇರ್ಪಡೆಯಾಗಬೇಕಾಗಿತ್ತು. ಮಂಗಳವಾರ ಕೊನೆಗೊಂಡ ಏಷ್ಯಾ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸಾಯ್‌ಗೆ ಸೇರ್ಪಡೆ ಯೋಜನೆಯನ್ನು ಮುಂದೂಡಿದ್ದರು.

ನೌಕಾಪಡೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ರಾಜ್‌ಪೂತ್ 2014ರಲ್ಲಿ ಹುದ್ದೆಯನ್ನು ತ್ಯಜಿಸಿದ್ದರು. ಹರ್ಯಾಣ ಸರಕಾರ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಹುದ್ದೆ ನೀಡುವ ಭರವಸೆ ನೀಡಿತ್ತು. ಆದರೆ, ಹರ್ಯಾಣದಲ್ಲಿ ಆಡಳಿತ ಸರಕಾರ ಬದಲಾದ ಕಾರಣ ಅವರಿಗೆ ಉದ್ಯೋಗ ದೊರೆತಿರಲಿಲ್ಲ.

18ರ ಹರೆಯದಲ್ಲಿ ನೌಕಾಪಡೆಗೆ ಸೇರ್ಪಡೆಯಾಗಿದ್ದ ರಾಜ್‌ಪೂತ್ 2014ರ ತನಕ ನೌಕಾ ಪಡೆಯ ಶೂಟಿಂಗ್ ತಂಡವನ್ನು ಪ್ರತಿನಿಧಿಸಿದ್ದರು. 2011ರಲ್ಲಿ ಚೀನಾದಲ್ಲಿ ನಡೆದಿದ್ದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು. ಎರಡು ಬಾರಿ ಒಲಿಂಪಿಯನ್ ಆಗಿರುವ ಅವರು ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News