×
Ad

ಬೆಟ್ಟಿಂಗ್ ಆರೋಪ: ಆಸ್ಟ್ರೇಲಿಯ ಕ್ರಿಕೆಟ್ ಆಟಗಾರ್ತಿಗೆ ನಿಷೇಧ

Update: 2016-02-04 17:58 IST

  ಮೆಲ್ಬೋರ್ನ್, ಫೆ.4: ಟೆಸ್ಟ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸಿದ ಆರೋಪದಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಯು ಮಹಿಳಾ ಕ್ರಿಕೆಟ್ ಆಟಗಾರ್ತಿ ಪೈಪಾ ಕ್ಲಿಯರಿ ಅವರನ್ನು ಆರು ತಿಂಗಳು ನಿಷೇಧ, 18 ತಿಂಗಳ ಕಾಲ ಅಮಾನತುಗೊಳಿಸಿದೆ.

ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ಪುರುಷರ ತಂಡಗಳ ನಡುವೆ ನವೆಂಬರ್‌ನಲ್ಲಿ ಅಡಿಲೇಡ್ ಓವಲ್‌ನಲ್ಲಿ ನಡೆದಿದ್ದ ಪಂದ್ಯದ ಮೇಲೆ ಪಶ್ಚಿಮ ಆಸ್ಟ್ರೇಲಿಯ ರಾಜ್ಯ ತಂಡದ ಪರ ಆಡುತ್ತಿರುವ 19ರ ಹರೆಯದ ಕ್ಲಿಯರಿ 15.50 ಆಸ್ಟ್ರೇಲಿಯನ್ ಡಾಲರ್ ಬೆಟ್ಟಿಂಗ್ ಕಟ್ಟಿದ್ದರು.

  ‘‘ ಆಸ್ಟ್ರೇಲಿಯ ಆಟಗಾರ್ತಿ ಕ್ಲಿಯರ್‌ಗೆ ಒಟ್ಟು 24 ತಿಂಗಳ ಕಾಲ ಎಲ್ಲ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿ ಹಾಗೂ ಕ್ರಿಕೆಟ್ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನರ್ಹರಾಗಿದ್ದಾರೆ. ಭ್ರಷ್ಟಾಚಾರ ವಿರೋಧಿ ಸಂಹಿತೆಯ ಪ್ರಕಾರ 18 ತಿಂಗಳ ಅಮಾನತು ಅವಧಿಯಲ್ಲಿ ಯಾವುದೇ ತಪ್ಪು ಮಾಡದಂತೆ ಷರತ್ತು ವಿಧಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ(ಸಿಎ) ಗುರುವಾರ ತಿಳಿಸಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಿಡ್ನಿ ಮೂಲದ ಮಹಿಳಾ ಕ್ರಿಕೆಟ್ ಆಟಗಾರ್ತಿ ಆ್ಯಂಜೆಲಾ ರೀಕ್ಸ್‌ರನ್ನು ಕಳೆದ ಮಾರ್ಚ್‌ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯ ಮೇಲೆ 9 ಆಸ್ಟ್ರೇಲಿಯನ್ ಡಾಲರ್ ಬೆಟ್ಟಿಂಗ್ ನಡೆಸಿದ್ದ ಆರೋಪದಲ್ಲಿ 24 ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. 15.50 ಆಸ್ಟ್ರೇಲಿಯನ್ ಡಾಲರ್ ಬೆಟ್ಟಿಂಗ್ ಕಡಿಮೆ ಮೊತ್ತದ್ದಾಗಿದೆ. ಆದರೆ, ವಿಷಯ ಗಂಭೀರವಾಗಿದೆ. ಕ್ರಿಕೆಟ್‌ನಲ್ಲಿ ನಡೆಸುವ ಯಾವುದೇ ರೀತಿಯ ಜೂಜಾಟದ ಮೇಲೆ ನಾವು ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News