×
Ad

ಲೋಧಾ ಸಮಿತಿಯ ಶಿಫಾರಸು ಜಾರಿಗೊಳಿಸಬೇಕು: ಬಿಸಿಸಿಐಗೆ ಸುಪ್ರೀಂ ತಾಕೀತು

Update: 2016-02-04 18:36 IST

ಹೊಸದಿಲ್ಲಿ, ಫೆ.4: ಭಾರತೀಯ ಕ್ರಿಕೆಟ್ ಮಂಡಳಿಯಲ್ಲಿ ಸಮಗ್ರ ಬದಲಾವಣೆಗೆ ಜಸ್ಟಿಸ್ ಆರ್.ಎಂ. ಲೋಧಾ ಸಮಿತಿಯು ಮಾಡಿರುವ ಶಿಫಾರಸನ್ನು ಬಿಸಿಸಿಐ ಸ್ವೀಕರಿಸಬೇಕು ಹಾಗೂ ಅದನ್ನು ಜಾರಿಗೆ ತರಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ತಾಕೀತು ಮಾಡಿದೆ.

ಲೋಧಾ ಸಮಿತಿಯ ಶಿಫಾರಸು ನಮಗೆ ತೃಪ್ತಿ ನೀಡಿದ್ದು, ಅದು ನೇರ, ವಿವೇಚನಾಯುಕ್ತ, ಮನದಟ್ಟಾಗುವ ಹಾಗೂ ಗೌರವಕ್ಕೆ ಅರ್ಹವಾಗಿದೆ. ಕಾನೂನು ತಜ್ಞರ ಸಮಿತಿಯ ಶಿಫಾರಸನ್ನು ನಿರಾಕರಿಸಲು ಯಾವುದೇ ಕಾರಣಗಳು ಇಲ್ಲ. ಬಿಸಿಸಿಐ ಈ ವರದಿಯನ್ನು ಸ್ವೀಕರಿಸುವ ಜೊತೆಗೆ ಅದನ್ನು ಜಾರಿಗೊಳಿಸಬೇಕು. ನಿಮಗೆ ಇದನ್ನು ಜಾರಿಗೆ ತರಲು ಕಷ್ಟವಾದರೆ, ನಾವು ಲೋಧಾ ಸಮಿತಿಯ ಮೂಲಕವೇ ಇದನ್ನು ನಿಮಗಾಗಿ ಜಾರಿಗೆ ತರುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಜಸ್ಟಿಸ್ ಟಿಎಸ್ ಠಾಕೂರ್ ಹಾಗೂ ಜಸ್ಟಿಸ್ ಇಬ್ರಾಹೀಂ ಕಲೀಫುಲ್ಲಾ ಅವರಿದ್ದ ದ್ವಿಸದಸ್ಯ ಪೀಠ ಬಿಸಿಸಿಐಗೆ ಖಡಕ್ ಎಚ್ಚರಿಕೆ ನೀಡಿದೆ. ಲೋಧಾ ಸಮಿತಿಯ ಶಿಫಾರಸನ್ನು ಜಾರಿ ತರುವ ಸಂಬಂಧ ಪ್ರತಿಕ್ರಿಯೆ ನೀಡಲು ಬಿಸಿಸಿಐಗೆ ನ್ಯಾಯ ಪೀಠವು ಮಾ.3ರ ತನಕ ಕಾಲಾವಕಾಶ ನೀಡಿದೆ.

ಲೋಧಾ ಸಮಿತಿ ಅಂತಿಮ ವರದಿ ಸಲ್ಲಿಸುವ ಮೊದಲು ಎಲ್ಲರ ಅಭಿಪ್ರಾಯವನ್ನು ಪಡೆದುಕೊಂಡಿದೆ. ಆದ್ದರಿಂದ ಈ ಶಿಫಾರಸನ್ನು ಸ್ವೀಕರಿಸಲು ಯಾವುದೇ ಸಮಸ್ಯೆ ಕಾಣುತ್ತಿಲ್ಲ ಎಂದು ಟಿಎಸ್ ಠಾಕೂರ್ ನೇತೃತ್ವದ ನ್ಯಾಯಪೀಠ ಹೇಳಿದೆ.

 ಲೋಧಾ ಸಮಿತಿಯ ಶಿಫಾರಸಿಗೆ ಸಂಬಂಧಿಸಿ ಕ್ರಿಕೆಟ್ ಮಂಡಳಿಯ 30 ಸದಸ್ಯರನ್ನು ಸಂಪರ್ಕಿಸುವ ಅಗತ್ಯವಿದೆ. ಫೆ.7 ರಂದು ಕಾನೂನು ಸಮಿತಿಯ ಸಭೆ ನಡೆಸಲಿದ್ದೇವೆ. ಆದ್ದರಿಂದ ನಮಗೆ ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು ಎಂದು ಬಿಸಿಸಿಐನ್ನು ಪ್ರತಿನಿಧಿಸಿದ ಹಿರಿಯ ವಕೀಲ ಶೇಖರ್ ನಫಾಡೆ ನ್ಯಾಯಾಲಯವನ್ನು ಕೋರಿಕೊಂಡರು. ಬಿಸಿಸಿಐ ಲೋಧಾ ಸಮಿತಿಯ ಶಿಫಾರಸನ್ನು ಜಾರಿಗೊಳಿಸುವ ಮೂಲಕ ಸಮಸ್ಯೆಯಿಂದ ಹೊರಬರಬೇಕಾಗಿದೆ ಎಂದು ಹೇಳಿದ ನ್ಯಾಯಾಲಯ ಬಿಸಿಸಿಐಗೆ ಮಾ.3ರ ತನಕ ಉತ್ತರ ನೀಡಲು ಕಾಲಾವಕಾಶ ನೀಡಿತು.

ಐಪಿಎಲ್‌ನಲ್ಲಿ ಭುಗಿಲೆದ್ದ ಸ್ಪಾಟ್ ಫಿಕ್ಸಿಂಗ್ ಹಗರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್ 2015ರಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಲೋಧಾ ನೇತೃತ್ವದ ಸಮಿತಿಯನ್ನು ನೇಮಕ ಮಾಡಿತ್ತು. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐನ ಆಡಳಿತ ಮಂಡಳಿಯಲ್ಲಿ ಬದಲಾವಣೆ ಮಾಡಬೇಕು. ಬಿಸಿಸಿಐ ಅನ್ನು ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಅಡಿ ತರಬೇಕು, ರಾಜಕಾರಣಿಗಳು ಹಾಗೂ ಸರಕಾರಿ ಅಧಿಕಾರಿಗಳನ್ನು ಕ್ರಿಕೆಟ್ ಮಂಡಳಿಯಿಂದ ದೂರ ಇಡಬೇಕು. ಹಗರಣದಿಂದ ಸುತ್ತುವರಿದಿರುವ ಕ್ರಿಕೆಟ್ ಮಂಡಳಿಯನ್ನು ಕಳಂಕಮುಕ್ತವಾಗಿಸಲು ಬೆಟ್ಟಿಂಗ್‌ನ್ನು ಕಾನೂನುಬದ್ಧಗೊಳಿಸಬೇಕು ಎಂದು ಜನವರಿಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಲೋಧಾ ಸಮಿತಿ ಶಿಫಾರಸು ಮಾಡಿತ್ತು.

ಜ.4 ರಂದು ಲೋಧಾ ಸಮಿತಿಯ ವರದಿ ಬಿಡುಗಡೆಯಾದ ಬಳಿಕ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಆಂತರಿಕ ಸಭೆ ಕರೆದು ಸಮಿತಿಯ ಶಿಫಾರಸಿನ ಬಗ್ಗೆ ಚರ್ಚಿಸುವಂತೆ ಸೂಚಿಸಿದ್ದರು. ಆದರೆ, ಹೆಚ್ಚಿನ ರಾಜ್ಯ ಕ್ರಿಕೆಟ್ ಸಂಸ್ಥೆಯು ಸಲಹೆಯೊಂದಿಗೆ ಪ್ರತಿಕ್ರಿಯೆ ನೀಡಲು ಸಮಯಾವಕಾಶ ಬೇಕೆಂದು ಕೇಳಿಕೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News