ರಣಜಿ ಟ್ರೋಫಿ:ಜಾರ್ಖಂಡ್ ವಿರುದ್ಧ ಮುಂಬೈಗೆ ಮೇಲುಗೈ
ಹೆರ್ವಾಡ್ಕರ್, ಅಬ್ದುಲ್ಲಾ ಆಲ್‌ರೌಂಡ್ ಆಟ
ಮೈಸೂರು, ಫೆ.4: ರಣಜಿ ಟ್ರೋಫಿಯ ನಾಲ್ಕನೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿರುವ ಅಖಿಲ್ ಹೆರ್ವಾಡ್ಕರ್ ಹಾಗೂ ಇಕ್ಬಾಲ್ ಅಬ್ದುಲ್ಲಾ ನೆರವಿನಿಂದ ಮುಂಬೈ ತಂಡ ಜಾರ್ಖಂಡ್ ವಿರುದ್ಧ ಮೇಲುಗೈ ಸಾಧಿಸಿದೆ. ಎರಡನೆ ದಿನವಾದ ಗುರುವಾರ 6 ವಿಕೆಟ್‌ಗಳ ನಷ್ಟಕ್ಕೆ 303 ರನ್‌ನಿಂದ ಮೊದಲ ಇನಿಂಗ್ಸ್‌ನ್ನು ಮುಂದುವರಿಸಿದ ಮುಂಬೈ ತಂಡ 113 ರನ್ ಸೇರಿಸಿ 114.4 ಓವರ್‌ಗಳಲ್ಲಿ 416 ರನ್‌ಗೆ ಆಲೌಟಾಯಿತು. ಜಾರ್ಖಂಡ್ ಪರ ಶಹಬಾಝ್ ನದೀಮ್(5-140) ಯಶಸ್ವಿ ಬೌಲರ್ ಎನಿಸಿಕೊಂಡರು.
ಮುಂಬೈನ ಮೊದಲ ಇನಿಂಗ್ಸ್‌ಗೆ ಉತ್ತರಿಸಹೊರಟಿರುವ ಜಾರ್ಖಂಡ್ ತಂಡ ದಿನದಾಟದಂತ್ಯಕ್ಕೆ 63 ಓವರ್‌ಗಳಲ್ಲಿ 150 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಅಖಿಲ್ ಹೆರ್ವಾಡ್ಕರ್(3-26) ಹಾಗೂ ಇಕ್ಬಾಲ್ ಅಬ್ದುಲ್ಲಾ(3-39) ತಲಾ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಜಾರ್ಖಂಡ್‌ಗೆ ಸವಾಲಾಗಿದ್ದಾರೆ.
ಇನ್ನೂ 266 ರನ್ ಹಿನ್ನಡೆಯಲ್ಲಿರುವ ಜಾರ್ಖಂಡ್‌ನ ಪರ ಆರಂಭಿಕ ದಾಂಡಿಗ ಆನಂದ್ ಸಿಂಗ್(39ರನ್) ಅಗ್ರ ಸ್ಕೋರರ್ ಹಾಗೂ ಕೌಶಲ್ ಸಿಂಗ್(ಔಟಾಗದೆ 22) ಜಸ್‌ಕರಣ್ ಸಿಂಗ್(2) ಅವರೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಶಿವ ಗೌತಮ್ ಹಾಗೂ ಆನಂದ್ ಸಿಂಗ್ ಮೊದಲ ವಿಕೆಟ್‌ಗೆ 46 ರನ್ ಸೇರಿಸಿ ಜಾರ್ಖಂಡ್‌ಗೆ ಸಾಧಾರಣ ಆರಂಭ ಒದಗಿಸಿದ್ದರು. ವೇಗಿ ಶಾರ್ದೂಲ್ ಠಾಕೂರ್ ಈ ಜೋಡಿಯನ್ನು ಬೇರ್ಪಡಿಸಿದರು.
ಬುಧವಾರ 4ನೆ ಶತಕವನ್ನು ಸಿಡಿಸಿದ್ದ ಅಖಿಲ್ ಹೆರ್ವಾಡ್ಕರ್ 26 ರನ್‌ಗೆ 3 ವಿಕೆಟ್ ಕಬಳಿಸಿ ಆಲ್‌ರೌಂಡ್ ಪ್ರದರ್ಶನ ನೀಡಿದರು. ಸ್ಪಿನ್ನರ್ ಅಬ್ದುಲ್ಲಾ ಅವರು ಇಶಾಂಕ್ ಜಗ್ಗಿ(14), ಕುಮಾರ ದೇವವೃತ(15) ಹಾಗೂ ರಾಹುಲ್ ಶುಕ್ಲಾ(8) ವಿಕೆಟ್ ಉರುಳಿಸಿದರು.
ಇದಕ್ಕೆ ಮೊದಲು ಬ್ಯಾಟಿಂಗ್ ಮುಂದುವರಿಸಿದ್ದ ಮುಂಬೈ ತಂಡದ ಪರ ಆಲ್‌ರೌಂಡ್ ಅಭಿಷೇಕ್ ನಾಯರ್ ಅರ್ಧಶತಕ(74 ರನ್, 70 ಎಸೆತ, 9 ಬೌಂಡರಿ, 2 ಸಿಕ್ಸರ್) ಸಿಡಿಸಿದರು. ಕೆಳ ಕ್ರಮಾಂಕದಲ್ಲಿ ಸ್ಪಿನ್ನರ್ ಇಕ್ಬಾಲ್ ಅಬ್ದುಲ್ಲಾ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್‌ಗಳಿದ್ದ 33 ರನ್ ಗಳಿಸಿ ಮುಂಬೈ ಮೊತ್ತವನ್ನು 400ರ ಗಡಿ ದಾಟಿಸಿದರು. ವಿಕೆಟ್‌ಕೀಪರ್ ಸುಫಿಯನ್ ಶೇಖ್ 23 ರನ್ ಕೊಡುಗೆ ನೀಡಿದರು.
ಸಂಕ್ಷಿಪ್ತ ಸ್ಕೋರ್
ಮುಂಬೈ ಪ್ರಥಮ ಇನಿಂಗ್ಸ್: 416 ರನ್‌ಗೆ ಆಲೌಟ್
(ಅಖಿಲ್ ಹೆರ್ವಾಡ್ಕರ್ 107, ಸೂರ್ಯಯಾದವ್ 75, ಅಭಿಷೇಕ್ ನಾಯರ್ 74, ಶ್ರೇಯಸ್ ಐಯ್ಯರ್ 45, ಇಕ್ಬಾಲ್ 33, ನದೀಮ್ 5-140)
ಜಾರ್ಖಂಡ್ ಪ್ರಥಮ ಇನಿಂಗ್ಸ್: 63 ಓವರ್‌ಗಳಲ್ಲಿ 150/8
(ಆನಂದ್ ಸಿಂಗ್ 39, ಕೌಶಲ್ ಸಿಂಗ್ ಔಟಾಗದೆ 22, ಹೆರ್ವಾಡ್ಕರ್ 3-26, ಅಬ್ದುಲ್ಲಾ 3-39)
ಇತರ ಪಂದ್ಯಗಳ ಫಲಿತಾಂಶ
ವಲ್ಸಾಡ್:
ಅಸ್ಸಾಂ 323 ಹಾಗೂ 23/4
ಪಂಜಾಬ್ 137 ರನ್‌ಗೆ ಆಲೌಟ್
ವಿಶಾಖಪಟ್ಟಣಂ:
ವಿದರ್ಭ 151 ಹಾಗೂ 17/0
ಸೌರಾಷ್ಟ್ರ 375
ಮುಂಬೈ: ಮಧ್ಯಪ್ರದೇಶ 348 ಹಾಗೂ 14/0
ಬಂಗಾಳ 121ರನ್‌ಗೆ ಆಲೌಟ್ ಮೈಸೂರು: ಮುಂಬೈ 416
ಜಾರ್ಖಂಡ್ 150/8
ಸೌರಾಷ್ಟ್ರ ಹಾಗೂ ಮ.ಪ್ರಕ್ಕೆ ಭಾರೀ ಮುನ್ನಡೆ
ಮುಂಬೈ, ಫೆ.4: ಶೆಲ್ಡನ್ ಜಾಕ್ಸನ್(122) ಹಾಗೂ ಸಾಗರ್ ಜೋಗಿಯಾನಿ(130) ಶತಕದ ಬೆಂಬಲದಿಂದ ಸೌರಾಷ್ಟ್ರ ತಂಡ ವಿದರ್ಭ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ 224 ರನ್ ಮುನ್ನಡೆ ಸಾಧಿಸಿದೆ.
1ವಿಕೆಟ್‌ಗೆ 70 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ್ದ ಸೌರಾಷ್ಟ್ರ 3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡಿತು. ಆಗ 3ನೆ ವಿಕೆಟ್‌ಗೆ 206 ರನ್ ಜೊತೆಯಾಟ ನಡೆಸಿದ ಜಾಕ್ಸನ್(122 ರನ್, 175 ಎಸೆತ, 13 ಬೌಂಡರಿ, 6 ಸಿಕ್ಸರ್) ಹಾಗೂ ಜೋಗಿಯಾನಿ(130 ರನ್, 17 ಬೌಂಡರಿ, 2 ಸಿಕ್ಸರ್) ತಂಡ ಮೊದಲ ಇನಿಂಗ್ಸ್‌ನಲ್ಲಿ 375 ರನ್ ಗಳಿಸಲು ನೆರವಾದರು. ಮುಂಬೈನಲ್ಲಿ ನಡೆದ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಮಧ್ಯಪ್ರದೇಶ ತಂಡ ಬಂಗಾಳದ ವಿರುದ್ಧ 241 ರನ್ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶ ತಂಡ ಶ್ರೀವಾಸ್ತವ(65), ನಮನ್ ಓಜಾ(64), ಬುಂಡೇಲಾ(58) ಹಾಗೂ ಹರ್‌ಪ್ರೀತ್ ಸಿಂಗ್(51) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 348 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬಂಗಾಳ ತಂಡ ಈಶ್ವರ ಪಾಂಡೆ(4-45), ಸಕಾರೆ(3-38)ಹಾಗೂ ದಾಟೆ(3-30) ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 121 ರನ್‌ಗೆ ಆಲೌಟಾಯಿತು.
ಮುಹಮ್ಮದ್ ಶತಕ: ಅಸ್ಸಾಂ ಬಿಗಿ ಹಿಡಿತ
ಮಧ್ಯಮ ಕ್ರಮಾಂಕದ ದಾಂಡಿಗ ಜಮಾಲುದ್ದೀನ್ ಸೈಯದ್ ಮುಹಮ್ಮದ್(121 ರನ್, 223 ಎಸೆತ, 16 ಬೌಂಡರಿ, 2 ಸಿಕ್ಸರ್) ಬಾರಿಸಿದ ಭರ್ಜರಿ ಶತಕದ ನೆರವಿನಿಂದ ಅಸ್ಸಾಂ ತಂಡ ಪಂಜಾಬ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ 209 ರನ್ ಮುನ್ನಡೆ ಸಾಧಿಸಿದೆ.
ಗುರುವಾರ 8ಕ್ಕೆ 223 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಅಸ್ಸಾಂ 323 ರನ್‌ಗೆ ಆಲೌಟಾಯಿತು. ಮೊದಲ ಇನಿಂಗ್ಸ್ ಆರಂಭಿಸಿದ ಪಂಜಾಬ್ ತಂಡ ಅಸ್ಸಾಂ ವೇಗಿಗಳಾದ ಕೃಷ್ಣ ದಾಸ್(3-54) ಹಾಗೂ ಅನೂಪ್ ದಾಸ್(3-41) ದಾಳಿಗೆ ತತ್ತರಿಸಿ 137 ರನ್‌ಗೆ ಆಲೌಟಾಯಿತು.