ಎರಡನೆ ಏಕದಿನ: ಆಸ್ಟ್ರೇಲಿಯಕ್ಕೆ ಜಯ, ಸರಣಿ ಸಮಬಲ
ವೆಲ್ಲಿಂಗ್ಟನ್, ಫೆ.6: ಮಿಚೆಲ್ ಮಾರ್ಷ್‌ರ ತಾಳ್ಮೆಯ ಅರ್ಧಶತಕದ ಸಹಾಯದಿಂದ ಆಸ್ಟ್ರೇಲಿಯ ತಂಡ ನ್ಯೂಝಿಲೆಂಡ್ ವಿರುದ್ಧದ ಎರಡನೆ ಏಕದಿನ ಪಂದ್ಯವನ್ನು 4 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಶನಿವಾರ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಆಸ್ಟ್ರೇಲಿಯ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಸೋಮವಾರ ಹ್ಯಾಮಿಲ್ಟನ್‌ನಲ್ಲಿ 3ನೆ ಹಾಗೂ ಕೊನೆಯ ಪಂದ್ಯ ನಡೆಯಲಿದೆ. ಗೆಲ್ಲಲು 282 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯ 33ನೆ ಓವರ್‌ನಲ್ಲಿ 197 ರನ್‌ಗೆ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು.
ಆಗ 7ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 86 ರನ್ ಸೇರಿಸಿದ ಮಾರ್ಷ್(ಔಟಾಗದೆ 69) ಹಾಗೂ ಜಾನ್ ಹೇಸ್ಟಿಂಗ್ಸ್(ಔಟಾಗದೆ 48) ಇನ್ನೂ 3.3 ಓವರ್‌ಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರಂಭಿಕ ದಾಂಡಿಗರಾದ ಡೇವಿಡ್ ವಾರ್ನರ್(98) ಹಾಗೂ ಉಸ್ಮಾನ್ ಖ್ವಾಜಾ(50) ಮೊದಲ ವಿಕೆಟ್‌ಗೆ 122 ರನ್ ಜೊತೆಯಾಟ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ವಾರ್ನರ್ ವಿಕೆಟ್ ಉರುಳಿಸಿದ ಮಿಚೆಲ್ ಸ್ಯಾಂಟ್ನರ್ ಈ ಜೋಡಿಯನ್ನು ಬೇರ್ಪಡಿಸಿದರು.
ವಾರ್ನರ್ ಕೇವಲ 2 ರನ್‌ನಿಂದ ಆರನೆ ಏಕದಿನ ಶತಕದಿಂದ ವಂಚಿತರಾದರು. ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲೆಂಡ್ ತಂಡದ ಪರ ಕೇನ್ ವಿಲಿಯಮ್ಸನ್ ಅಗ್ರ ಸ್ಕೋರರ್(60) ಎನಿಸಿಕೊಂಡರು. ಒಂದು ಹಂತದಲ್ಲಿ 193 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದ ಕಿವೀಸ್‌ಗೆ 8ನೆ ವಿಕೆಟ್‌ಗೆ 61 ರನ್ ಜೊತೆಯಾಟ ನಡೆಸಿದ ಸ್ಯಾಂಟ್ನರ್(ಔಟಾಗದೆ 45) ಹಾಗೂ ಮಿಲ್ನೆ(36) ಆಸರೆಯಾದರು. ಇವರ ನೆರವಿನಿಂದ ನ್ಯೂಝಿಲೆಂಡ್ 9 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತು.
ಆಸ್ಟ್ರೇಲಿಯದ ಪರ ಜೋಶ್ ಹೇಝಲ್‌ವುಡ್(3-61) ಯಶಸ್ವಿ ಬೌಲರ್ ಎನಿಸಿಕೊಂಡರು.