ರಣಜಿ ಟ್ರೋಫಿ: ಅಸ್ಸಾಂ, ಮುಂಬೈ ಸೆಮಿಫೈನಲ್‌ಗೆ
ವಲ್ಸಾಡ್/ಮೈಸೂರು, ಫೆ.6: ಪಂಜಾಬ್‌ಗೆ ಆಘಾತ ನೀಡಿದ ಅಸ್ಸಾಂ ಹಾಗೂ ನಿರೀಕ್ಷೆಯಂತೆಯೇ ಜಾರ್ಖಂಡ್ ತಂಡವನ್ನು ಹೀನಾಯವಾಗಿ ಸೋಲಿಸಿದ ಮುಂಬೈ ತಂಡ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತೇರ್ಗಡೆಯಾಗಿವೆ.
ಮಧ್ಯಮ ವೇಗದ ಬೌಲರ್ ಅನೂಪ್ ದಾಸ್(8-83) ಅಮೋಘ ಬೌಲಿಂಗ್‌ನ ಮೂಲಕ ಅಸ್ಸಾಂ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 288 ರನ್ ಗುರಿ ಪಡೆದಿದ್ದ ಪಂಜಾಬ್‌ಗೆ ನಾಲ್ಕನೆ ದಿನವಾದ ಶನಿವಾರ ಗೆಲುವಿಗೆ 2 ವಿಕೆಟ್‌ಗಳ ನೆರವಿನಿಂದ 64 ರನ್ ಗಳಿಸಬೇಕಾಗಿತ್ತು. ಆದರೆ, 20 ನಿಮಿಷಗಳ ಬ್ಯಾಟಿಂಗ್‌ನಲ್ಲಿ 3.2 ಓವರ್‌ಗಳನ್ನು ಎದುರಿಸಿದ್ದ ಪಂಜಾಬ್ ನಿನ್ನೆಯ ಮೊತ್ತಕ್ಕೆ ಕೇವಲ 12 ರನ್ ಸೇರಿಸಿ 236 ರನ್‌ಗೆ ಆಲೌಟಾಯಿತು.
ದಿನದ 2ನೆ ಓವರ್‌ನಲ್ಲಿ ಗೀತಾಂಶ್ ಖೇರಾ(35) ಹಾಗೂ ಮುಂದಿನ ಓವರ್‌ನಲ್ಲಿ ದೀಪಕ್ ಬನ್ಸಾಲ್ ವಿಕೆಟ್ ಉರುಳಿಸಿದ ಅನೂಪ್ ದಾಸ್ ಅಸ್ಸಾಂಗೆ ಅನಿರೀಕ್ಷಿತ ಗೆಲುವು ತಂದುಕೊಟ್ಟರು.
ಟೂರ್ನಿಯಲ್ಲಿ ದೈತ್ಯ ಸಂಹಾರಿ ಎನಿಸಿಕೊಂಡಿರುವ ಅಸ್ಸಾಂ ಸೆಮಿಫೈನಲ್‌ನಲ್ಲಿ ಸೌರಾಷ್ಟ್ರವನ್ನು ಎದುರಿಸಲಿದೆ.
ಮೈಸೂರಿನಲ್ಲಿ ಮುಂಬೈಗೆ ಜಯ: ಇಕ್ಬಾಲ್ ಅಬ್ದುಲ್ಲಾ(5-35) ಹಾಗೂ ಜೈ ಬಿಶ್ತ್(6-16) ಸ್ಪಿನ್ ದಾಳಿಯ ನೆರವಿನಿಂದ ಮುಂಬೈ ತಂಡ ಜಾರ್ಖಂಡ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯವನ್ನು 395 ರನ್‌ಗಳ ಅಂತರದಿಂದ ಗೆದ್ದುಕೊಂಡು ಸೆಮಿಫೈನಲ್‌ಗೆ ತಲುಪಿದೆ.
ಗೆಲ್ಲಲು 490 ರನ್ ಗುರಿ ಪಡೆದಿದ್ದ ಜಾರ್ಖಂಡ್ 2ನೆ ಇನಿಂಗ್ಸ್‌ನಲ್ಲಿ ಕೇವಲ 94 ರನ್‌ಗೆ ಆಲೌಟಾಯಿತು. ಬಿಶ್ತ್ 6.4 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಉರುಳಿಸಿದರು. ಇಕ್ಬಾಲ್ 16 ಓವರ್‌ಗಳಲ್ಲಿ 5 ವಿಕೆಟ್ ಸಂಪಾದಿಸಿದರು.
ಮುಂಬೈನಲ್ಲಿ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಮಧ್ಯಪ್ರದೇಶ ತಂಡ ಸೆಮಿಫೈನಲ್‌ನತ್ತ ಹೆಜ್ಜೆ ಇಟ್ಟಿದೆ. ಗೆಲ್ಲಲು 788 ರನ್ ಗುರಿ ಪಡೆದಿರುವ ಬಂಗಾಳ 4ನೆ ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 113 ರನ್ ಗಳಿಸಿದೆ.