×
Ad

ದಕ್ಷಿಣ ಏಷ್ಯಾ ಗೇಮ್ಸ್: ಮೊದಲ ದಿನ ಭಾರತಕ್ಕೆ ಪದಕಗಳ ಸುರಿಮಳೆ

Update: 2016-02-06 23:37 IST

ಗುವಾಹಟಿ, ಫೆ.6: ದಕ್ಷಿಣ ಏಷ್ಯಾ ಗೇಮ್ಸ್‌ನ ಆರಂಭಿಕ ದಿನವಾದ ಶನಿವಾರ ಭಾರತ 14 ಚಿನ್ನ, ಐದು ಬೆಳ್ಳಿ ಸಹಿತ ಒಟ್ಟು 19 ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದೆ. ಭಾರತದ ಕುಸ್ತಿಪಟುಗಳು, ಈಜುಗಾರರು ಹಾಗೂ ವೇಟ್‌ಲಿಫ್ಟರ್‌ಗಳು ಮೊದಲ ದಿನದ ಗೇಮ್ಸ್‌ನಲ್ಲಿ ಚಿನ್ನದ ಹೊಳೆ ಹರಿಸಿದರು.

ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ಭಾರತ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ 2 ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಸೈಖಾಮ್ ಮೀರಾಬಾಯಿ ಚಾನು 48 ಕೆಜಿ ವಿಭಾಗದಲ್ಲಿ ಒಟ್ಟು 169 ಕೆಜಿ ತೂಕ ಎತ್ತಿ ಹಿಡಿದು ಚಿನ್ನದ ಪದಕ ಜಯಿಸಿದರು. ಪುರುಷರ 56 ಕೆಜಿ ವಿಭಾಗದಲ್ಲಿ ಗುರುರಾಜ್ ಒಟ್ಟು 241 ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಗೆದ್ದುಕೊಟ್ಟರು.

ಭಾರತ ಸೈಕ್ಲಿಂಗ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸುವುದರೊಂದಿಗೆ ಕ್ಲೀನ್‌ಸ್ವೀಪ್ ಸಾಧಿಸಿದೆ. ಮಹಿಳೆಯರ 30 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ ಫೈನಲ್‌ನಲ್ಲಿ ಸೈಕ್ಲಿಸ್ಟ್ ಟಿ. ವಿಜಯಲಕ್ಷ್ಮೀ ಮೊದಲ ಚಿನ್ನ ತನ್ನದಾಗಿಸಿಕೊಂಡರು. ಬಿದ್ಯಾ ಲಕ್ಷ್ಮೀ ಬೆಳ್ಳಿ ಪದಕ ಗೆದ್ದುಕೊಂಡರು. ಪುರುಷರ ವೈಯಕ್ತಿಕ ಟೈಂಟ್ರಯಲ್ ಫೈನಲ್‌ನಲ್ಲಿ ಅರವಿಂದ್ ಪವಾರ್ ಚಿನ್ನ ಹಾಗೂ ಮಂಜೀತ್ ಸಿಂಗ್ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.

ಸೌತ್ ಏಷ್ಯನ್ ಗೇಮ್ಸ್: ಸ್ವಿಮ್ಮಿಂಗ್‌ನಲ್ಲಿ ಏಳು ಪದಕ

 ಸೌತ್ ಏಷ್ಯನ್ ಗೇಮ್ಸ್‌ನ ಮೊದಲ ದಿನವಾದ ಶನಿವಾರ ಭಾರತದ ಈಜುಪಟುಗಳು ನಾಲ್ಕು ಚಿನ್ನ ಹಾಗೂ ಮೂರು ಬೆಳ್ಳಿ ಸೇರಿದಂತೆ ಒಟ್ಟು ಏಳು ಪದಕಗಳನ್ನು ಗೆದ್ದುಕೊಂಡಿದ್ದಾರೆ.

 ಸಂದೀಪ್ ಸೆಜ್ವಾಲ್(ಪುರುಷರ 200 ಮೀ. ಬ್ರೀಸ್ಟ್‌ಸ್ಟ್ರೋಕ್), ಶಿವಾನಿ ಕಟಾರಿಯಾ(ಮಹಿಳೆಯರ 200ಮೀ.ಫ್ರೀಸ್ಟೈಲ್) ಹಾಗೂ ಮಹಿಳೆಯರ 100 ಮೀ. ಫ್ರೀಸ್ಟೈಲ್‌ನಲ್ಲಿ ಹೊಸ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಕರ್ನಾಟಕದ ದಾಮಿನಿ ಗೌಡ(1ನಿ. 4.92 ಸೆ.) ಮಹಿಳೆಯರ 100 ಮೀ. ಬಟರ್‌ಫ್ಲೈನಲ್ಲಿ ಮತ್ತೊಂದು ಚಿನ್ನದ ಪದಕ ಜಯಿಸಿದರು.

ಭಾರತದ ಮಹಿಳೆಯರ ತಂಡ 4/100 ಮೀ. ಫ್ರೀಸ್ಟೈಲ್‌ನಲ್ಲಿ 4:01.95 ಸೆ.ನಲ್ಲಿ ಗುರಿ ತಲುಪಿ ಪ್ರಾಬಲ್ಯ ಸಾಧಿಸಿತು.

8 ಪದಕ ಖಚಿತಪಡಿಸಿದ ಬಿಲ್ಗಾರರು: ಭಾರತದ ಬಿಲ್ಗಾರರು ಗೇಮ್ಸ್‌ನ ವೈಯಕ್ತಿಕ ಹಾಗೂ ಕಂಪೌಂಡ್ ವಿಭಾಗಗಳಲ್ಲಿ 4 ಚಿನ್ನ ಹಾಗೂ 4 ಬೆಳ್ಳಿ ಪದಕ ದೃಢಪಡಿಸಿದರು.

ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಹಾಲಿ ಚಾಂಪಿಯನ್ ತರುಣ್‌ದೀಪ್ ರಾಯ್ ಹಾಗೂ ಗುರುಚರಣ್ ಬೆಸ್ರಾ, ದೀಪಿಕಾ ಕುಮಾರಿ ಹಾಗೂ ಬೊಂಬೆಲಾದೇವಿ ಲೈಶ್ರಾಂ ಫೈನಲ್‌ಗೆ ತಲುಪಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News