×
Ad

2014: ಭಾರತ -ಇಂಗ್ಲೆಂಡ್ ಮ್ಯಾಂಚೆಸ್ಟರ್ ಟೆಸ್ಟ್ ಫಿಕ್ಸ್; ಡಿಸಿಡಿಎ ಕಾರ್ಯದರ್ಶಿ ಸುನೀಲ್ ದೇವ್ ಆರೋಪ

Update: 2016-02-07 22:42 IST

ಹೊಸದಿಲ್ಲಿ, ಫೆ.7: ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಹೊಸದಲ್ಲ. ಆದರೆ ಈ ಬಾರಿ ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಮಹೆಂದ್ರ ಸಿಂಗ್ ಧೋನಿ ಫಿಕ್ಸಿಂಗ್ ಆರೋಪದದಲ್ಲಿ ಕೇಂದ್ರ ಬಿಂದುವಾಗಿದ್ದಾರೆ.
 2014ರಲ್ಲಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ನಾಲ್ಕನೆ ಟೆಸ್ಟ್ ಫಿಕ್ಸ್ ಆಗಿತ್ತು ಎಂದು ಡಿಸಿಡಿಎ ಕಾರ್ಯದರ್ಶಿ ಮತ್ತು ಆಗಿನ ಟೀಮ್ ಇಂಡಿಯಾ ಮ್ಯಾನೇಜರ್ ಸುನೀಲ್ ದೇವ್ ಹೊಸ ಬಾಂಬ್ ಸಿಡಿಸಿದ್ದಾರೆ.
   ‘‘ ಮಳೆಯಿಂದಾಗಿ ಪಿಚ್ ಒದ್ದೆಯಾಗಿದ್ದ ಹಿನ್ನೆಲೆಯಲ್ಲಿ ಟಾಸ್ ಗೆದ್ದರೆ ಫಿಲ್ಡಿಂಗ್ ಆಯ್ದುಕೊಳ್ಳುವ ನಾವು ನಿರ್ಧಾರ ಮಾಡಿದ್ದೆವು. ಆದರೆ ಧೋನಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡರು. ಅವರ ನಿರ್ಧಾರ ಅಚ್ಚರಿಯನ್ನುಂಟು ಮಾಡಿತ್ತು. ಇಂಗ್ಲೆಂಡ್‌ನ ಮಾಜಿ ನಾಯಕ ಜೆಫ್ರಿ ಬಾಯ್ಕಿಟ್ ಅವರಿಗೆ ಧೋನಿ ನಿರ್ಧಾರ ಆಘಾತ ನೀಡಿತ್ತು ’’ ಎಂದು ಸುನೀಲ್ ದೇವ್ ದಿಲ್ಲಿಯ ಹಿಂದಿ ದಿನಪತ್ರಿಕೆ ನಡೆಸಿದ ಕುಟುಕು ಕಾರ್ಯಾಚರಣೆಯ ಹೇಳಿದ್ದಾರೆ.
ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಅವರು ಪಂದ್ಯ ಫಿಕ್ಸ್ ಮಾಡಿರುವುದು ಶೇ 100ರಷ್ಟು ಖಚಿತ ಎಂದು ಸುನೀಲ್ ದೇವ್ ನೀಡಿರುವ ಹೇಳಿಕೆಯ ವೀಡಿಯೊ ದಾಖಲೆಯನ್ನು ದಿಲ್ಲಿಯ ಹಿಂದಿ ದಿನಪತ್ರಿಕೆ ‘ಸನ್ ಸ್ಟಾರ್’ ದಿಲ್ಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ರವಿವಾರ ಬಿಡುಗಡೆ ಮಾಡಿದೆ.
ಈ ವಿಚಾರವನ್ನು ಬಿಸಿಸಿಐ ಗಮನಕ್ಕೆ ತಂದಿದ್ದೆ. ಬಿಸಿಸಿಐನ ಮಾಜಿ ಅಧ್ಯಕ್ಷ ಎನ್ .ಶ್ರೀನಿವಾಸನ್ ಮುಂದೆಯೇ ಟೈಪ್ ಮಾಡಿ ಈ ಬಗ್ಗೆ ಬಿಸಿಸಿಐಗೆ ದೂರು ನೀಡಿದ್ದೆ. ಎನ್.ಶ್ರೀನಿವಾಸನ್ ಈ ವರದಿಯನ್ನು ಬಹಿರಂಗಪಡಿಸಲು ಬಯಸಲಿಲ್ಲ. ಬಿಸಿಸಿಐ ಈ ಪತ್ರದ ವಿಚಾರದಲ್ಲಿ ಯಾವುದೇ ಕ್ರಮಕೈಗೊಳ್ಳಲಿಲ್ಲ’’ ಎಂದು ದೇವ್ ಆರೋಪಿಸಿದ್ದರು.
 ‘‘ಜನರು ಸತ್ಯವನ್ನು ನಂಬುವುದಿಲ್ಲ’’ ಎಂದು ಹೇಳಿರುವ ದೇವ್ ಅವರಲ್ಲಿ ಶ್ರೀನಿವಾಸನ್ ಯಾಕೆ ಈ ವರದಿಯನ್ನು ಬಹಿರಂಗಪಡಿಸಲಿಲ್ಲ ? ಎಂಬ ಪ್ರಶ್ನೆಗೆ ಶ್ರೀನಿವಾಸನ್ ಧೋನಿ ಮಾಡುವ ಎಲ್ಲ ಕೆಲಸಗಳನ್ನು ಬೆಂಬಲಿಸುತ್ತಾರೆ. ಈ ಕಾರಣದಿಂದಾಗಿ ಅವರು ಧೋನಿ ವಿರುದ್ಧದ ದೂರನ್ನು ಬಹಿರಂಗಪಡಿಸಲಿಲ್ಲ ’’ ಎಂದು ದೇವ್ ಆರೋಪಿಸಿದ್ದಾರೆ.
  ಈ ವಿಚಾರವನ್ನು ಇಷ್ಟರ ತನಕ ಯಾಕೆ ಚಂದ್ರಚೂಡ ಆಯೋಗ ಅಥವಾ ಯಾವುದೇ ಸಂದರ್ಶನದಲ್ಲಿ ಯಾಕೆ ಬಹಿರಂಗಪಡಿಸಲಿಲ್ಲ ಎಂಬ ಪ್ರಶ್ನೆಗೆ ಒಂದು ವೇಳೆ ಈ ವಿಚಾರವನ್ನು ಬಹಿರಂಗಗೊಳಿಸಿದರೆ ನನ್ನ ಜೀವಕ್ಕೆ ಅಪಾಯ ಖಚಿತ ಎಂಬ ಭೀತಿಯಿಂದ ಇಷ್ಟರ ತನಕ ಸುಮ್ಮನಿದ್ದೆ ಎಂದು ದೇವ್ ಹೇಳಿಕೆ ನೀಡಿದ್ದರು.
 ಕುತೂಹಲ ಕೆರಳಿಸಿದ ವಿಚಾರವೆಂದರೆ ಈ ಕುಟುಕು ಕಾರ್ಯಾಚರಣೆಯ ವೇಳೆ ನೀವೇನಾದರೂ ಕುಟುಕು ಕಾರ್ಯಾಚರಣೆ ನಡೆಸಿ ನನ್ನನ್ನು ಸಿಲುಕಿಸಲು ಯತ್ನಿಸುತ್ತಿರಾ ? ಎಂದು ವರದಿಗಾರರನ್ನು ದೇವ್ ಪ್ರಶ್ನಿಸಿದ್ದರು. ಒಂದು ವೇಳೆ ಹಾಗೇನಾದರೂ ನೀವು ಮಾಡುವುದಿದ್ದರೆ ನಾನು ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ. ಕಳೆದ 40 ವರ್ಷಗಳಿಂದ ನಾನು ಬಿಸಿಸಿಐನಲ್ಲಿ ಇದ್ದೇನೆ. ಬಿಸಿಸಿಐ ಜಗತ್ತಿನಲ್ಲೇ ಉತ್ತಮ ಕ್ರಿಕೆಟ್ ಸಂಸ್ಥೆ ಎಂದು ದೇವ್ ಹೇಳಿದ್ದರು.
ಐಪಿಎಲ್‌ನ ಫಿಕ್ಸಿಂಗ್ ಹಗರಣದ ತನಿಖೆ ನಡೆಸಿದ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ದೇವ್ ಅವರ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಹಾಗೇನಾದರೂ ಇದ್ದರೆ ಬಿಸಿಸಿಐಗೆ ದೇವ್ ಮತ್ತೊಮ್ಮೆ ವರದಿಯನ್ನು ಇಮೇಲ್ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಈ ಟೆಸ್ಟ್‌ನಲ್ಲಿ ಫಿಕ್ಸಿಂಗ್ ನಡೆದಿದೆ ಎನ್ನುವುದಕ್ಕೆ ಬಲವಾದ ಸಾಕ್ಷಾಧರಗಳಿಲ್ಲ ಎಂದು ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News