×
Ad

200 ಸಿಕ್ಸರ್ ಕ್ಲಬ್‌ಗೆ ಮೆಕಲಮ್ ಸೇರ್ಪಡೆ

Update: 2016-02-08 22:48 IST

ಹ್ಯಾಮಿಲ್ಟನ್, ಫೆ.8: ಆಸ್ಟ್ರೇಲಿಯ ವಿರುದ್ಧ ಸೋಮವಾರ ವಿದಾಯದ ಏಕದಿನ ಪಂದ್ಯವನ್ನು ಆಡಿದ ಮೆಕಲಮ್ 27 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 47 ರನ್ ಗಳಿಸಿ ಕಿವೀಸ್‌ಗೆ ಎಂದಿನಂತೆ ಭರ್ಜರಿ ಆರಂಭ ನೀಡಿದರು.

ಆಸೀಸ್ ವಿರುದ್ಧ ಸೋಮವಾರ ಮೂರು ಸಿಕ್ಸರ್‌ಗಳನ್ನು ಸಿಡಿಸಿದ ಮೆಕಲಮ್ ತನ್ನ 260ನೆ ಏಕದಿನ ಪಂದ್ಯದಲ್ಲಿ ಒಟ್ಟು 200 ಸಿಕ್ಸರ್ ಪೂರೈಸಿದರು. ಸಾರ್ವಕಾಲಿಕ ಸಿಕ್ಸರ್ ವೀರರ ಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆದರು. ಪಾಕಿಸ್ತಾನ ಶಾಹಿದ್ ಅಫ್ರಿದಿ(351), ಶ್ರೀಲಂಕಾದ ಸನತ್ ಜಯಸೂರ್ಯ(270) ಹಾಗೂ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್(238) ಮೊದಲ ಮೂರು ಸ್ಥಾನದಲ್ಲಿದ್ದಾರೆ.

34ರ ಹರೆಯದ ಮೆಕಲಮ್ ಅಂತಿಮ ಏಕದಿನ ಪಂದ್ಯ ಆಡಲು ಕ್ರೀಸ್‌ಗೆ ಇಳಿದಾಗ ಆಸ್ಟ್ರೇಲಿಯದ ತಂಡ ಅವಿಗೆ ಗೌರವ ನೀಡಿತು. ಸ್ಟೇಡಿಯಂನಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಎದ್ದು ನಿಂತು ಗೌರವ ಸೂಚಿಸಿದರು.

ಮೆಕಲಮ್ ಆಸ್ಟ್ರೇಲಿಯದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ. ಕ್ರಿಕೆಟ್ ಕಂಡ ಸ್ಫೋಟಕ ದಾಂಡಿಗರ ಪೈಕಿ ಓರ್ವರಾಗಿರುವ ಮೆಕಲಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ಈಗಾಗಲೇ 100 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ.

‘‘ಕಳೆದ 14 ವರ್ಷಗಳ ಕಾಲ ನ್ಯೂಝಿಲೆಂಡ್ ತಂಡವನ್ನು ಪ್ರತಿನಿಧಿಸುವ ಭಾಗ್ಯ ನನಗೆ ಲಭಿಸಿತ್ತು. ಆಸ್ಟ್ರೇಲಿಯ ವಿರುದ್ಧ ಆಡುವಾಗ ಉತ್ತಮ ಕ್ರಿಕೆಟ್‌ನ್ನು ಆಡಬೇಕಾಗುತ್ತದೆ. ಕಿವೀಸ್ ತಂಡದಲ್ಲಿ ಶ್ರೇಷ್ಠ ಆಟಗಾರರೊಂದಿಗೆ ಆಡುವ ಅದೃಷ್ಟ ನನಗೆ ಸಿಕ್ಕಿತ್ತು’’ ಎಂದು ಮೆಕಲಮ್ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News