×
Ad

ಐಪಿಎಲ್‌ಗೆ ಆಯ್ಕೆ: ಮುಸ್ತಫಿಝುರ್ರಹ್ಮಾನ್‌ಗೆ ಫುಲ್‌ಖುಷ್

Update: 2016-02-08 23:31 IST

ಢಾಕಾ, ಫೆ.8: ‘‘ಕಳೆದ ವರ್ಷ ಭಾರತ ತಂಡ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿದ್ದಾಗ ತಾನು ಉತ್ತಮ ಪ್ರದರ್ಶನ ನೀಡಿದ್ದೆ. ತಾನು ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯುವೆ ಎಂದು ಎಲ್ಲರೂ ಹೇಳುತ್ತಿದ್ದರು. ಇದೀಗ ವಿಶ್ವದ ಅತ್ಯಂತ ದೊಡ್ಡ ಟ್ವೆಂಟಿ-20 ಟೂರ್ನಿ ಐಪಿಎಲ್‌ಗೆ ಆಯ್ಕೆಯಾಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ.ಐಪಿಎಲ್‌ನಲ್ಲಿ ಆಡಲು ಉತ್ಸುಕನಾಗಿದ್ದೇನೆ’’ ಎಂದು ಬಾಂಗ್ಲಾದೇಶದ ಯುವ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಬಾಂಗ್ಲಾದೇಶದ ಹಿಂದುಳಿದ ಹಳ್ಳಿಯ ಹುಡುಗ ಮುಸ್ತಫಿಝುರ್ರಹ್ಮಾನ್ ತಾನಾಡಿದ್ದ ಮೊದಲ 2 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಉರುಳಿಸಿ ವಿಶ್ವ ದಾಖಲೆ ಬರೆದಿದ್ದರು. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡ ವಿಶ್ವದ ಏಕೈಕ ಕ್ರಿಕೆಟಿಗನೆಂಬ ಕೀರ್ತಿಗೂ ಭಾಜನರಾಗಿದ್ದಾರೆ. ಮುಸ್ತಫಿಝುರ್ರಹ್ಮಾನ್ ಬಲಿಷ್ಠ ತಂಡಗಳಾದ ಭಾರತ ಹಾಗೂ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಬಾಂಗ್ಲಾಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. 2015ರಲ್ಲಿ ಆಡಿದ್ದ 9 ಏಕದಿನಗಳಲ್ಲಿ 26 ವಿಕೆಟ್‌ಗಳನ್ನು ಪಡೆದಿದ್ದರು.

ಮುಸ್ತಫಿಝುರ್ರಹ್ಮಾನ್ ಸಾಧನೆಯನ್ನು ಗಮನಿಸಿದ ಐಸಿಸಿ ವರ್ಷದ ಏಕದಿನ ತಂಡಕ್ಕೆ ಆಯ್ಕೆ ಮಾಡಿತ್ತು. 20ರ ಹರೆಯದ ವೇಗದ ಬೌಲರ್ ಅತ್ಯಲ್ಪ ಅವಧಿಯಲ್ಲೇ ಬಾಂಗ್ಲಾದೇಶದ ಮನೆಮಾತಾದರು. ಮುಸ್ತಫಿಝುರ್ರಹ್ಮಾನ್ ಶನಿವಾರ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 1.4 ಕೋಟಿ ರೂ.ಗೆ ಹರಾಜಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News