ಲಂಕಾ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯ; ಚುಟುಕು ವಿಶ್ವಕಪ್‌ಗೆ ಭಾರತ ತಯಾರಿ
ಪುಣೆ, ಫೆ.8: ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನ ಹೊಸ ತಂಡ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಸೇರ್ಪಡೆಗೊಂಡ ಬಳಿಕ ಮೊದಲ ಬಾರಿ ಪುಣೆ ತಂಡದ ತವರಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.
ಭಾರತ ತಂಡ ಮಂಗಳವಾರ ನಡೆಯಲಿರುವ ಮೂರು ಪಂದ್ಯಗಳ ಸರಣಿಯ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಟ್ವೆಂಟಿ-20 ವಿಶ್ವ ಚಾಂಪಿಯನ್ ಶ್ರೀಲಂಕಾವನ್ನು ಎದುರಿಸಲಿದೆ.
ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯಾ ಕಪ್ ಮೊದಲು ಭಾರತ ಮತ್ತು ಶ್ರೀಲಂಕಾ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ರವಿವಾರ ಸಂಜೆ ಪುಣೆಗೆ ತಲುಪಿರುವ ಧೋನಿ ಬಳಗ ಮೊದಲ ಪಂದ್ಯಕ್ಕೆ ಹೆಚ್ಚಿನ ಅಭ್ಯಾಸ ನಡೆಸಿಲ್ಲ. ಆಸ್ಟ್ರೇಲಿಯವನ್ನು ಅದರದ್ದೇ ನೆಲದಲ್ಲಿ 3-0 ಅಂತರದಲ್ಲಿ ಬಗ್ಗು ಬಡಿದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿರುವ ಭಾರತಕ್ಕೆ ತವರಲ್ಲಿ ಲಂಕಾದ ಸವಾಲು ಎದುರಾಗಿದೆ. ಆದರೆ ತಂಡಕ್ಕೆ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಉಳಿಸುವುದು ಬಿಟ್ಟರೆ ಈ ಸರಣಿಯಲ್ಲಿ ಒತ್ತಡವಿಲ್ಲ. ತಂಡದ ಆಟಗಾರರು ಆಸ್ಟ್ರೇಲಿಯ ವಿರುದ್ಧ ಕ್ಲೀನ್ ಸ್ವೀಪ್ ಖುಶಿಯಲ್ಲಿ ತಯಾರಿ ನಡೆಸುತ್ತಿದ್ದಾರೆ.
ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಈ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ತಂಡದಲ್ಲಿರುವ ಯುವ ಆಟಗಾರರಿಗೆ ವಿಶ್ವಕಪ್ ತಂಡದ ಅಂತಿಮ ಹನ್ನೊಂದರಲ್ಲಿ ಸ್ಥಾನ ದೃಢಪಡಿಸಲು ಇದೊಂದು ಒಳ್ಳೆಯ ಅವಕಾಶ.
ಕೈಗೆ ಆಗಿರುವ ಗಾಯದಿಂದಾಗಿ ಅನುಭವಿ ಆಲ್‌ರೌಂಡರ್ ತಿಲಕರತ್ನೆ ದಿಲ್ಶನ್ ಶ್ರೀಲಂಕಾ ತಂಡದಿಂದ ಹೊರಗುಳಿದಿದ್ದಾರೆ.ಆಸ್ಟ್ರೇಲಿಯ ನೆಲದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಭಾರತದ ಬೌಲರ್‌ಗಳು ತವರಲ್ಲಿ ಚೆನ್ನಾಗಿ ಪ್ರದರ್ಶನ ನೀಡುವುದನ್ನು ನಿರೀಕ್ಷಿಸಲಾಗಿದೆ.
ನಾಯಕ ಮಹೇಂದ್ರ ಸಿಂಗ್ ಧೋನಿ ಈ ತನಕ 55 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಒಂದು ಅರ್ಧಶತಕವನ್ನು ದಾಖಲಿಸಲು ಅವರಿಗೆ ಸಾಧ್ಯವಾಗಿಲ್ಲ. ನಂ.5 ಕ್ರಮಾಂಕದಲ್ಲಿ ಮತ್ತು ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿರುವ ಹಿನ್ನೆಲೆಯಲ್ಲಿ ಅವರಿಗೆ ಅರ್ಧಶತಕ ದಾಖಲಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ 129 ಐಪಿಎಲ್ ಟ್ವೆಂಟಿ-20ಪಂದ್ಯಗಳಲ್ಲಿ 11 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ನಂ.4ನೆ ಕ್ರಮಾಂಕದಲ್ಲಿ ಅವರಿಂದ 4 ಅರ್ಧಶತಕಗಳು ದಾಖಲಾಗಿವೆ.
ಅಜಿಂಕ್ಯ ರಹಾನೆ ಮತ್ತು ಮನೀಷ್ ಪಾಂಡೆ ನಡುವೆ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಸ್ಪರ್ಧೆ ಏರ್ಪಟ್ಟಿದೆ. ರಹಾನೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಪಾಂಡೆಗೆ ಅವಕಾಶ ಸಿಕ್ಕಿಲ್ಲ. ಪಾಂಡೆ ಆಸ್ಟ್ರೇಲಿಯ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ರಹಾನೆ ಬದಲಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದರು. ಚೊಚ್ಚಲ ಶತಕ ದಾಖಲಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಸ್ಟ್ರೇಲಿಯಕ್ಕೆ ಕ್ಲೀನ್ ಸ್ವೀಪ್ ನಿರಾಕರಿಸಿದ್ದರು.
ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ಮನೀಷ್ ಪಾಂಡೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡೆ, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬುಮ್ರಾ, ಆಶೀಶ್ ನೆಹ್ರಾ, ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಪವನ್ ನೇಗಿ.
ಶ್ರೀಲಂಕಾ: ದಿನೇಶ್ ಚಾಂಡಿಮಾಲ್(ನಾಯಕ), ಸೀಕುಗೆ ಪ್ರಸನ್ನ, ಮಿಲಿಂದ ಸಿರಿವಧರ್ನ, ಧನುಷ್ಕ ಗುಣತಿಲಕ, ತಿಸ್ಸರಾ ಪೆರೆರಾ, ದಾಸನ್ ಶಾನಕ, ಅಸೆಲಾ ಗುಣರತ್ನೆ, ಚಾಮರಾ ಕಪುಗೆಡರ, ದುಶ್ಮಂತ ಚಾಮೀರಾ ದಿಲ್ಹಾರ ಫೆರ್ನಾಂಡೊ, ಕಾಸುನ್ ರಜಿಥ, ಬಿನುರಾ ಫೆರ್ನಾಂಡೊ, ಸಚಿತ್ರ ಸೇನನಾಯಕೆ, ಜೆಫ್ರಿ ವ್ಯಾಂಡೆಸೇ, ನಿರೊಶಾನ್ ಡಿಕ್ವೆಲ್ಲಾ.
ಪಂದ್ಯದ ಸಮಯ: ರಾತ್ರಿ 7:30ಕ್ಕೆ ಆರಂಭ
,,,,,,,,,,,,,,,