ಹಾಕಿಯಲ್ಲಿ ಕೋಚ್‌ನ್ನು ಆಟಗಾರನಾಗಿ ಕಣಕ್ಕಿಳಿಸಿ ಜಯಿಸಿದ ಪಾಕ್ !

Update: 2016-02-09 08:28 GMT

ಕರಾಚಿ, ಫೆ.9:  ಭಾರತದಲ್ಲಿ ನಡೆಯುತ್ತಿರುವ 12ನೆ ದಕ್ಷಿಣ ಏಷ್ಯನ್ ಗೇಮ್ಸ್‌ನ ಹಾಕಿ ಪಂದ್ಯದಲ್ಲಿ ಪಾಕಿಸ್ತಾನ ತನ್ನ ಕೋಚ್‌ನ್ನು ಆಟಗಾರನಾಗಿ ಕಣಕ್ಕಿಳಿಸಿ ಭಾರತದ ವಿರುದ್ಧ 2-1 ಅಂತರದಲ್ಲಿ ಜಯ ಸಾಧಿಸಿದೆ.

 ನಿವೃತ್ತ ಆಟಗಾರ ರೆಹಾನ್ ಬಟ್ ಅವರು ಪಾಕಿಸ್ತಾನದ ರಾಷ್ಟ್ರೀಯ ಹಾಕಿ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಆದರೆ ಅವರು ಆರಂಭದ ಎರಡು ಪಂದ್ಯಗಳಲ್ಲಿ ತಂಡದ ಆಟಗಾರನಾಗಿ ಆಡಿದ್ದಾರೆ.
‘‘ಪಾಕ್ ತಂಡದ ಆಟಗಾರ ಸಮಿಯುಲ್ಲಾಗೆ ಭಾರತಕ್ಕೆ ತೆರಳಲು ವೀಸಾ ದೊರಕಿರಲಿಲ್ಲ. ಈ ಕಾರಣದಿಂದಾಗಿ ಆಟಗಾರರ ಪಟ್ಟಿಯಲ್ಲಿ ನನ್ನ ಹೆಸರನ್ನು ಬರೆಯಲು ಪಾಕಿಸ್ತಾನ ಹಾಕಿ ಫೆಡರೇಶನ್ ಸೂಚಿತ್ತು ’’ ಎಂದು ಬಟ್ ತಿಳಿಸಿದ್ದಾರೆ.
 ‘‘ ನಾನು ಅನಿವಾರ್ಯವಾಗಿ ಆಟಗಾರನಾಗಿ ಕ್ರೀಡಾಂಗಣಕ್ಕೆ ಇಳಿಯಬೇಕಾಯಿತು. ಆದರೆ ನನಗೆ ಇರುವ ಅನುಭವದ ಆಧಾರದಲ್ಲಿ ಆಟವನ್ನು ಆನಂದಿಸಿದೆ’’’ ಎಂದು ಗುವಾಹಟಿಯಲ್ಲಿ ಭಾರತ ವಿರುದ್ಧ ಪಾಕ್ ತಂಡ 2-1 ಅಂತರದಲ್ಲಿ ಜಯ ಗಳಿಸಿದ ಬಳಿಕ ಬಟ್ ಅವರು ಪ್ರತಿಕ್ರಿಯೆ ನೀಡಿದರು.
ಪಿಎಚ್‌ಪಿ ವಕ್ತಾರ ಹೇಳುವಂತೆ ಪಾಕಿಸ್ತಾನ ತಂಡದಲ್ಲಿ 15 ಆಟಗಾರರಿದ್ದಾರೆ.ಪ್ರಧಾನ ಕೋಚ್ ಮುಹಮ್ಮದ್ ಸಕ್ಲೈನ್ ತಂಡದಲ್ಲಿ ಖಾಲಿ ಇರುವ 16ನೆ ಆಟಗಾರನ ಸ್ಥಾನಕ್ಕೆ ಬಟ್ ಅವರನ್ನು ಆಟಗಾರನಾಗಿ ಪರಿಗಣಿಸುವ ನಿರ್ಧಾರ ಕೈಗೊಂಡಿದ್ದರು.
ಪಾಕಿಸ್ತಾನಕ್ಕೆ ತನ್ನನ್ನು ಆಟಗಾರನಾಗಿ ಕಣಕ್ಕಿಳಿಸದೆ ಬೇರೆ ದಾರಿ ಇರಲಿಲ್ಲ ಎಂದು ಬಟ್ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಬಟ್ ಆಡಿದ್ದರು.   ಲಂಕಾ ವಿರುದ್ಧದ  ಪಂದ್ಯದಲ್ಲಿ ಪಾಕಿಸ್ತಾನ 3-0 ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತ್ತು.
ಕೋಚ್ ಹಾಗೂ ಆಟಗಾರನ ಪಾತ್ರ ನಿರ್ವಹಿಸುವುದು ಅದೊಂದು ವಿಶೇಷ ಅನುಭವವಾಗಿದೆ ಎಂದು ಬಟ್ ಹೇಳಿದ್ಧಾರೆ.
ಸಮಿಯುಲ್ಲಾಗೆ ವೀಸಾ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಪಿಎಚ್‌ಎಫ್ ಕಾರ್ಯದರ್ಶಿ ಶಹಬಾಝ್ ಅಹ್ಮದ್ ಸರಕಾರದ ಅನುಮತಿ ಸಿಕ್ಕಿದ ಬಳಿಕ ಪಾಕಿಸ್ತಾನ ಎಸ್‌ಎಜಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿತ್ತು. ಆದರೆ ಇದೀಗ ಕೆಲವು ಆಟಗಾರರಿಗೆ ವೀಸಾ ಸಮಸ್ಯೆ ಕಾಣಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News