ಸ್ಟೀವ್ ವಾ ಅತ್ಯಂತ ಸ್ವಾರ್ಥಿ ಆಟಗಾರ : ಶೇನ್ ವಾರ್ನ್ ವಾಗ್ದಾಳಿ

Update: 2016-02-09 09:05 GMT

ಮೆಲ್ಬರ್ನ್ , ಫೆ . 9 : ಸ್ಟೀವ್ ವಾ ಹಾಗು ಶೇನ್ ವಾರ್ನ್ .. ಇಬ್ಬರೂ ಆಸಿಸ್ ಕ್ರಿಕೆಟ್ ನ ದಂತಕತೆಗಳು. ಇಬ್ಬರಿಗೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಈ ಹಳೆ ಜಗಳ ಈಗ ಮತ್ತೆ ಬೀದಿಗೆ ಬಂದಿದೆ. ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ " ನಾನು ಈವರಗೆ ಆಡಿದವರ ಪೈಕಿ ಅತ್ಯಂತ ಸ್ವಾರ್ಥಿ ಆಟಗಾರ ಸ್ಟೀವ್ ವಾ " ಎಂದು ಶೇನ್ ವಾನ್ ವಾಗ್ದಾಳಿ ನಡೆಸಿದ್ದಾರೆ. " ಸ್ಟೀವ್ ನನ್ನು ನಾನು ಇಷ್ಟ ಪಡದೆ ಇರಲು ಬಹಳಷ್ಟು ಕಾರಣಗಳಿವೆ.. ಬಹಳಷ್ಟು.. ಏಕೆಂದರೆ ಅವರಷ್ಟು ಸ್ವಾರ್ಥಿ ಆಟಗಾರನನ್ನು ನಾನು ನೋಡಿಲ್ಲ " ಎಂದು ಚಾನೆಲ್ ಟೆನ್ ನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ವಾರ್ನ್ ಹೇಳಿದ್ದಾರೆ. 

ಈ ಸಿಟ್ಟಿಗೆ ಕಾರಣವನ್ನೂ ವಾನ್ ಹೇಳಿದ್ದಾರೆ. 1999ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಿಂದ ವಾರ್ನ್ ರನ್ನು ಸ್ಟೀವ್ ಕೈ ಬಿಟ್ಟಿದ್ದರು. ಆ ಸರಣಿಯಲ್ಲಿ ಆಸೀಸ್ ಆಗಲೇ1-2 ರಿಂದ ಹಿಂದಿತ್ತು. " ಟ್ರೋಫಿ ಪಡೆಯಲು  ನಾವು ಆ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಆಗ ನಾಯಕ ( ಸ್ಟೀವ್ ), ಉಪನಾಯಕ ( ನಾನು ) ಹಾಗು ಕೋಚ್ ( ಜೆಫ್ ಮಾರ್ಷ್ ) ತಂಡ ಆಯ್ಕೆ ಮಾಡಬೇಕಿತ್ತು. 

" ನಾನು ಚೆನ್ನಾಗಿ ಬೌಲಿಂಗ್ ಮಾಡಿರಲಿಲ್ಲ. ಬ್ರಿಯಾನ್ ಲಾರಾ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಆದರೆ ನನ್ನೊಬ್ಬನನ್ನೇ ಬಲಿಪಶು ಮಾಡಲು ಸ್ಟೀವ್ ಬಯಸಿದ್ದರು. ತಂಡದ ಆಯ್ಕೆಗೆ ಕೂತಾಗ ನಾನು ಎಲ್ಲರ ಅಭಿಪ್ರಾಯ ಕೇಳಿದೆ. ಅದಕ್ಕೆ ಸ್ಟೀವ್ " ನೀನು ಸರಿಯಾಗಿ ಆಡುತ್ತಿಲ್ಲ " ಎಂದು ಬಿಟ್ಟರು. ಇದರ ಬಗ್ಗೆ ನಾನು ಚರ್ಚಿಸಿದೆ. ಆದರೆ ಸ್ಟೀವ್ " ನಾನು ಈ ತಂಡದ ನಾಯಕ. ನೀನು ಸರಿಯಾಗಿ ಆಡುತ್ತಿಲ್ಲ " ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟರು. 

" ನಾನು ಹತ್ತು ವರ್ಷ ಆಡಿದ ಬಳಿಕ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೆ. ಕೊನೆಯ ಪಂದ್ಯ ನಿರ್ಣಾಯಕವಾದ್ದರಿಂದ ನನ್ನ ಅತ್ಯುತ್ತಮ ಆಟ ಆಡುತ್ತಿದ್ದೆ. ಆದರೆ ಅವಕಾಶ ಸಿಗದೇ ಬಹಳ ನಿರಾಶನಾದೆ " ಎಂದರು ವಾರ್ನ್. 

" ಇನ್ನೂ ಹಲವು ಕಾರಣಗಳಿಗಾಗಿ ನಾನು ಸ್ಟೀವ್ ರನ್ನು ಇಷ್ಟಪಡುವುದಿಲ್ಲ " ಎಂದು ವಾರ್ನ್ ಹೇಳಿದ್ದಾರೆ. 

ಆ ಪಂದ್ಯದಲ್ಲಿ ವಾರ್ನ್ ಬದಲಿಗೆ ಕಾಲಿನ್ ಮಿಲ್ಲರ್ ಆಡಿದ್ದರು ಹಾಗು ಆಸೀಸ್ 176 ರನ್ನುಗಳಿಂದ ಗೆದ್ದಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News