ಐಪಿಎಲ್‌ನ ಪಂಜಾಬ್ ತಂಡಕ್ಕೆ ಮಿಲ್ಲರ್ ನಾಯಕ

Update: 2016-02-09 14:42 GMT

ಹೊಸದಿಲ್ಲಿ, ಫೆ.9: ಒಂಬತ್ತನೆ ಆವೃತ್ತಿಯ ಐಪಿಎಲ್‌ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ದಕ್ಷಿಣ ಆಫ್ರಿಕದ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್‌ರನ್ನು ನಾಯಕನನ್ನಾಗಿ ನೇಮಕ ಮಾಡಿದೆ. ಕಳೆದ ಎರಡು ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಆಸ್ಟ್ರೇಲಿಯದ ಜಾರ್ಜ್ ಬೈಲಿ ಅವರನ್ನು ತಂಡದಿಂದ ಬಿಡುಗಡೆಗೊಳಿಸಿರುವ ಮೊಹಾಲಿ ಮೂಲದ ಫ್ರಾಂಚೈಸಿ ಕಳೆದ ನಾಲ್ಕು ವರ್ಷಗಳಿಂದ ತಂಡದಲ್ಲಿರುವ ಮಿಲ್ಲರ್‌ಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲು ನಿರ್ಧರಿಸಿದೆ.


26ರ ಹರೆಯದ ಮಿಲ್ಲರ್ ಪಂಜಾಬ್ ಈ ವರ್ಷ ಉಳಿಸಿಕೊಂಡಿರುವ 14 ಆಟಗಾರರ ಪೈಕಿ ಓರ್ವರಾಗಿದ್ದಾರೆ. ವಿದೇಶದ ನಾಲ್ಕನೆ ಆಟಗಾರನಾಗಿದ್ದಾರೆ. ಆಸೀಸ್‌ನ ತ್ರಿವಳಿ ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಜಾನ್ಸನ್ ಹಾಗೂ ಶಾನ್ ಮಾರ್ಷ್ ಪಂಜಾಬ್ ತಂಡದಲ್ಲಿದ್ದಾರೆ.


ಪಂಜಾಬ್‌ನ ಪರ ಐಪಿಎಲ್‌ನಲ್ಲಿ 52 ಪಂದ್ಯಗಳನ್ನು ಆಡಿರುವ ಮಿಲ್ಲರ್ ಒಟ್ಟು 1,443 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 8 ಅರ್ಧಶತಕಗಳಿವೆ. ಈ ವರ್ಷದ ಐಪಿಎಲ್ ಎ.9 ರಿಂದ ಮೇ 23ರ ತನಕ ನಡೆಯಲಿದೆ.


‘‘ಈ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸುವ ಗೌರವ ನನಗೆ ಲಭಿಸಿದೆ. ಫ್ರಾಂಚೈಸಿ, ಪ್ರೊಮೊಟರ್‌ಗಳು, ಮ್ಯಾನೇಜ್‌ಮೆಂಟ್ ಹಾಗೂ ತನ್ನ ಮೇಲೆ ವಿಶ್ವಾಸವಿರಿಸಿರುವ ತಂಡದ ಎಲ್ಲ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವೆನು’’ ಎಂದು ಮಿಲ್ಲರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News