×
Ad

ದಕ್ಷಿಣ ಏಷ್ಯನ್ ಗೇಮ್ಸ್:ನಾಲ್ಕನೆ ದಿನವೂ ಭಾರತದಿಂದ ಚಿನ್ನದ ಸುರಿಮಳೆ

Update: 2016-02-09 23:57 IST

ಕನ್ನಡತಿ ಮಾಳವಿಕಾ, ದಾಮಿನಿಗೆ ಚಿನ್ನ

ಗುವಾಹಟಿ, ಫೆ.9: ಈಜುಗಾರರು, ಬಿಲ್ಗಾರರು ಹಾಗೂ ಟ್ರಾಕ್ ಹಾಗೂ ಫೀಲ್ಡ್ ಅಥ್ಲೀಟ್‌ಗಳ ಅಮೋಘ ಪ್ರದರ್ಶನದ ನೆರವಿನಿಂದ ಭಾರತ ತಂಡ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಸತತ ನಾಲ್ಕನೆ ದಿನವೂ ಚಿನ್ನದ ಮಳೆಗರೆದಿದೆ.

ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿದ ಭಾರತ 74 ಚಿನ್ನ, 35 ಬೆಳ್ಳಿ ಹಾಗೂ 10 ಕಂಚಿನ ಪದಕ ಪದಕಗಳ ಸಹಿತ ಒಟ್ಟು 119 ಪದಕಗಳನ್ನು ಬಾಚಿಕೊಂಡು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಒಟ್ಟು 84 ಪದಕಗಳನ್ನು ಗಳಿಸಿರುವ ಶ್ರೀಲಂಕಾ ಎರಡನೆ ಸ್ಥಾನದಲ್ಲಿದೆ.

ಸ್ವಿಮ್ಮರ್‌ಗಳು ಏಳು ಚಿನ್ನದ ಪದಕಗಳನ್ನು ಜಯಿಸಿದರೆ, ಅಥ್ಲೀಟ್‌ಗಳು ಹಾಗೂ ಆರ್ಚರಿಗಳು ತಲಾ 5 ಸ್ವರ್ಣದ ಪದಕ ಗೆದ್ದುಕೊಂಡರು. ಪುರುಷರ 400 ಮೀ.ಫ್ರೀಸ್ಟೈಲ್‌ನಲ್ಲಿ 3:58.84 ನಿಮಿಷದಲ್ಲಿ ಗುರಿ ತಲುಪಿ ಗೇಮ್ಸ್ ದಾಖಲೆ ನಿರ್ಮಿಸಿದ ಸೌರಭ್ ಸಾಂಗ್ವೇಕರ್ ಭಾರತಕ್ಕೆ ದಿನದಲ್ಲಿ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು. ಸಾಜನ್ ಪ್ರಕಾಶ್ 200ಮೀ. ಬಟರ್‌ಫ್ಲೈ ವಿಭಾಗದಲ್ಲಿ ಹೊಸ ಗೇಮ್ಸ್ ದಾಖಲೆ(2:03.02)ಯೊಂದಿಗೆ ಚಿನ್ನ ಜಯಿಸಿದರು. ಪ್ರಕಾಶ್ ಗೇಮ್ಸ್‌ನಲ್ಲಿ ಜಯಿಸಿದ ನಾಲ್ಕನೆ ಚಿನ್ನದ ಪದಕ ಇದಾಗಿದೆ.

ಕನ್ನಡತಿ ಮಾಳವಿಕಾ, ದಾಮಿನಿಗೆ ಚಿನ್ನ: ಕರ್ನಾಟಕದ ಈಜುಗಾರ್ತಿ ವಿ. ಮಾಳವಿಕಾ 400 ಮೀ. ಫ್ರೀಸ್ಟೈಲ್‌ನಲ್ಲಿ 4:30.08 ನಿಮಿಷದಲ್ಲಿ ಗುರಿ ತಲುಪಿ ಹೊಸ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಜಯಿಸಿದರು.

200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ 2:21.12 ನಿಮಿಷದಲ್ಲಿ ಗುರಿ ತಲುಪಿ ಮತ್ತೊಂದು ಗೇಮ್ಸ್ ದಾಖಲೆ ನಿರ್ಮಿಸಿದ ಕನ್ನಡತಿ ದಾಮಿನಿ ಗೌಡ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಪಿಎಸ್ ಮಧು ನೂತನ ದಾಖಲೆ(26:86 ಸೆ.) ನಿರ್ಮಿಸಿ ಸ್ವರ್ಣ ಸಂಪಾದಿಸಿದರು.

ಭಾರತ ಪುರುಷರ ಹಾಗೂ ಮಹಿಳೆಯರ ವಿಭಾಗದ 4/200ಮೀ.ಫ್ರೀಸ್ಟೈಲ್‌ನಲ್ಲೂ ಚಿನ್ನದ ಪದಕವನ್ನು ಜಯಿಸಿತು.

 ಟ್ರಾಕ್ ಆ್ಯಂಡ್ ಫೀಲ್ಡ್‌ನ ಮೊದಲ ದಿನವಾದ ಮಂಗಳವಾರ ಭಾರತದ ಅಥ್ಲೀಟ್‌ಗಳು ಐದು ಚಿನ್ನದ ಪದಕ ಜಯಿಸಿದರು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಶಾಟ್‌ಪುಟ್ ಪಟು ಮನ್‌ಪ್ರೀತ್ ಕೌರ್ ಎಲ್ಲರ ಗಮನ ಸೆಳೆದರು.

 ಗೇಮ್ಸ್‌ನ ಮೊದಲ ದಿನ ಭಾರತದ ಅಥ್ಲೀಟ್‌ಗಳು 5 ಚಿನ್ನ, ಆರು ಬೆಳ್ಳಿ ಹಾಗೂ 3 ಕಂಚಿನ ಪದಕ ಜಯಿಸಿದ್ದಾರೆ. ಮಹಿಳೆಯರ ಶಾಟ್‌ಪುಟ್ ಸ್ಪರ್ಧೆಯಲ್ಲಿ 17.94 ಮೀ. ದೂರ ಎಸೆದ ಕೌರ್ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟರು.

ಪುರುಷರ ಹ್ಯಾಮರ್ ಎಸೆತದಲ್ಲಿ ನೀರಜ್‌ಕುಮಾರ್(66.14 ಮೀ.) ಚಿನ್ನ ಜಯಿಸಿದರು. ಪಾಕ್‌ನ ಶಕೀಲ್ ಅಹ್ಮದ್(63.67ಮೀ.) ಬೆಳ್ಳಿ ಪದಕ, ಶ್ರೀಲಂಕಾದ ಅಲ್ ಅಲನ್‌ಸನ್(46.38ಮೀ.) ಕಂಚಿನ ಪದಕ ಜಯಿಸಿದರು.

ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಮಯೂಕಾ ಜಾನಿ (6.43 ಮೀ.)ಚಿನ್ನ ಜಯಿಸಿದರು. ಮಾನ್ ಸಿಂಗ್ ಪುರುಷರ 5000 ಮೀ. ಓಟವನ್ನು ಗೇಮ್ಸ್ ದಾಖಲೆಯೊಂದಿಗೆ(14 ನಿ.2.04 ಸೆ.) ಜಯಿಸಿದರು. ವನಿತೆಯರ 5000 ಮೀ. ಓಟದಲ್ಲಿ ಎಲ್.ಸೂರ್ಯಾ(15 ನಿ. 45.75 ಸೆ.) ಚಾಂಪಿಯನ್ ಆದರು.

ಭಾರತದ ಲಿಫ್ಟರ್‌ಗಳು 1 ಚಿನ್ನ ಹಾಗೂ ಬೆಳ್ಳಿ ಜಯಿಸಿದರು. ಈ ಮೂಲಕ ಟೂರ್ನಿಯಲ್ಲಿ ಒಟ್ಟು 12 ಚಿನ್ನ ಹಾಗೂ 1 ಬೆಳ್ಳಿ ಗೆದ್ದರು.

ಸುಶೀಲಾ ಪಾನ್ವರ್ ಮಹಿಳೆಯರ +75 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದರು. ದಕ್ಷಿಣ ಏಷ್ಯಾ ಗೇಮ್ಸ್: ಆರ್ಚರಿ, ಸೈಕ್ಲಿಂಗ್‌ನಲ್ಲಿ ಭಾರತ ಪ್ರಾಬಲ್ಯ

ಶಿಲ್ಲಾಂಗ್, ಫೆ.9: ಹನ್ನೆರಡನೆ ಆವೃತ್ತಿಯ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ಭಾರತದ ಆರ್ಚರಿ ತಂಡ 10 ಚಿನ್ನ ಹಾಗೂ 4 ಬೆಳ್ಳಿಯ ಪದಕವನ್ನು ಜಯಿಸುವುದರೊಂದಿಗೆ ಕ್ಲೀನ್‌ಸ್ವೀಪ್ ಮಾಡಿದೆ.

ಬೆಳಗ್ಗೆ ನಡೆದ ಸ್ಪರ್ಧೆಯಲ್ಲಿ ಪುರುಷರ, ಮಹಿಳೆಯರ ಹಾಗೂ ಮಿಕ್ಸೆಡ್ ಜೋಡಿ ವಿಭಾಗದ ಸ್ಪರ್ಧೆಯಲ್ಲಿ ಪದಕವನ್ನು ಜಯಿಸಿದ್ದ ಭಾರತ ಮಧ್ಯಾಹ್ನ ನಡೆದ ಸ್ಪರ್ಧೆಯಲ್ಲಿ ರಿಕರ್ವ್ ಆರ್ಚರಿಗಳು ತಲಾ 2 ಚಿನ್ನ ಹಾಗೂ ಬೆಳ್ಳಿ ಪದಕವನ್ನು ಗೆದ್ದುಕೊಂಡರು.

2014ರ ಏಷ್ಯನ್ ಗೇಮ್ಸ್ ಬಳಿಕ ತಂಡಕ್ಕೆ ಮರಳಿರುವ ತರುಣ್‌ದೀಪ್ ರಾಯ್ ಹ್ಯಾಟ್ರಿಕ್ ಚಿನ್ನ ಜಯಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ದೀಪಿಕಾ ಕುಮಾರಿ ಎರಡು ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ.

ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ರಾಯ್ ಯಾವುದೇ ಒತ್ತಡಕ್ಕೆ ಸಿಲುಕದೇ ಆರ್ಮಿಯ ಸಹ ಆಟಗಾರ ಗುರುಚರಣ್ ಬೆಸ್ರಾರನ್ನು ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ 6-2 ಅಂತರದಿಂದ ಮಣಿಸಿದರು.

ಮಹಿಳೆಯರ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ದೀಪಿಕಾ ಅವರು ಬಾಂಬೆಲಾದೇವಿ ಲೈಶ್ರಾಂರನ್ನು 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

ದೀಪಿಕಾ ಇದಕ್ಕೆ ಮೊದಲು ನಡೆದ ಸ್ಪರ್ಧೆಯಲ್ಲಿ ಲಕ್ಷ್ಮೀರಾಣಿ ಮಜ್‌ಹಿ ಹಾಗೂ ಬಾಂಬೆಲಾ ಹಾಗೂ ತರುಣ್‌ದೀಪ್ ಜೊತೆಗೂಡಿ ಚಿನ್ನದ ಪದಕವನ್ನು ಜಯಿಸಿದರು. ಭಾರತದ ಮಿಶ್ರ ಜೋಡಿಗಳಾದ ರಾಯ್ ಹಾಗೂ ದೀಪಿಕಾ ಬಾಂಗ್ಲಾದೇಶದ ಸೊಜೆಬ್ ಶೇಖ್ ಹಾಗೂ ಬ್ಯೂಟಿ ರೇ ಅವರನ್ನು 6-0 ಅಂತರದಿಂದ ಮಣಿಸಿ ಮತ್ತೊಂದು ಚಿನ್ನದ ಪದಕವನ್ನು ಗೆದ್ದುಕೊಂಡರು. ಸೋಮವಾರ ನಡೆದ ಸ್ಪರ್ಧೆಯಲ್ಲಿ ಕಂಪೌಂಡ್ ಆರ್ಚರಿಗಳು ಸ್ಪರ್ಧೆಯಲ್ಲಿದ್ದ ಎಲ್ಲ ಐದೂ ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಗೇಮ್ಸ್‌ನಲ್ಲಿ ಸೈಕ್ಲಿಸ್ಟ್‌ಗಳ ಪಾರಮ್ಯ

ಗುವಾಹಟಿ, ಫೆ.9: ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಮಂಗಳವಾರ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಜಯಿಸಿರುವ ಭಾರತದ ಸೈಕ್ಲಿಸ್ಟ್‌ಗಳು ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

 ಭಾರತೀಯರು ಇತರ ಸ್ಪರ್ಧೆಗಳಂತೆಯೇ ಸೈಕ್ಲಿಂಗ್‌ನಲ್ಲಿ 8 ಚಿನ್ನದ ಪದಕಗಳ ಪೈಕಿ ಆರು ಪದಕವನ್ನು ಗೆದ್ದುಕೊಂಡಿದ್ದಾರೆ. ಮಾತ್ರವಲ್ಲ ಐದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಬಾಚಿಕೊಂಡಿದ್ದಾರೆ.

ಮಹಿಳೆಯರ 80 ಕಿ.ಮೀ. ವೈಯಕ್ತಿಕ ರೋಡ್ ರೇಸ್‌ನಲ್ಲಿ ಭಾರತ ಎಲ್ಲ ಪದಕಗಳನ್ನು ಜಯಿಸಿದೆ. ಟಿ. ಬಿದ್ಯಾಲಕ್ಷ್ಮೀ 2 ಗಂಟೆ, 30 ನಿಮಿಷ ಹಾಗೂ 55.350 ಸೆಕೆಂಡ್‌ನಲ್ಲಿಗುರಿ ತಲುಪಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಭಾರತದ ಲಿಡಿಯಾಮೊಲ್ ಸನ್ನಿ ಹಾಗೂ ಗೀತೂರಾಜ್ 2:30:55.69 ಹಾಗೂ 2:30:55.90 ಸೆಕೆಂಡ್‌ನಲ್ಲಿ ಗುರಿ ತಲುಪಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ಪುರುಷರ 100ಕಿ.ಮೀ. ವೈಯಕ್ತಿಕ ರೋಡ್‌ರೇಸ್‌ನಲ್ಲಿ ಭಾರತದ ಪಂಕಜ್ ಕುಮಾರ್ ಎರಡನೆ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾದ ಜೀವನ್ ಸಿಲ್ವಾ(2:25:38.65 ಸೆ.) ಚಿನ್ನದ ಪದಕ ಜಯಿಸಿದರು. ಪಾಕಿಸ್ತಾನದ ನಿಸಾರ್ ಅಹ್ಮದ್ ಕಂಚಿನ ಪದಕ ಪಡೆದರು.

ಕಳೆದ ಆವೃತ್ತಿಯ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ಭಾರತ 3 ಚಿನ್ನ, 3 ಬೆಳ್ಳಿ ಗೆದ್ದಿತ್ತು. ಶ್ರೀಲಂಕಾ 1 ಚಿನ್ನ, 1 ಬೆಳ್ಳಿ ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News