×
Ad

ಗೊಂದಲದ ಗೂಡಾದ ಟ್ವೆಂಟಿ-20 ವಿಶ್ವಕಪ್

Update: 2016-02-11 18:57 IST

ಹೊಸದಿಲ್ಲಿ, ಫೆ.11: ಇದೇ ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್‌ನ್ನು ಆಯೋಜಿಸುತ್ತಿರುವ ಭಾರತ ಗೊಂದಲಮಯ ಪರಿಸ್ಥಿತಿ ಎದುರಿಸುತ್ತಿದೆ.

  ಟೂರ್ನಿ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದರೂ ಆಯೋಜಕರು ಇನ್ನೂ ಟಿಕೆಟ್‌ಗಳ ಮಾರಾಟಕ್ಕೆ ಚಾಲನೆ ನೀಡಿಲ್ಲ್ಲ. ಹೊಸದಿಲ್ಲಿಯ ಫಿರೋಝ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ಟ್ವೆಂಟಿ-20 ಪಂದ್ಯ ನಡೆಯುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ವೆಸ್ಟ್‌ಇಂಡೀಸ್ ಹಾಗೂ ಪಾಕಿಸ್ತಾನ ತಂಡಗಳು ಬೇರೆ ಬೇರೆ ಕಾರಣಗಳಿಂದ ಟೂರ್ನಿಯಿಂದ ಹೊರಗುಳಿಯುವ ಬಗ್ಗೆ ಯೋಚಿಸುತ್ತಿರುವುದು ಟೂರ್ನಿಗೆ ಹಿನ್ನಡೆಯಾಗಿ ಪರಿಣಮಿಸಿದೆ.

ಮಾ.8 ರಿಂದ ಆರಂಭವಾಗಲಿರುವ ಕ್ರಿಕೆಟ್‌ನ ನೂತನ ಆವಿಷ್ಕಾರ ಹಾಗೂ ಅತ್ಯಂತ ಜನಪ್ರಿಯ ಟ್ವೆಂಟಿ-20 ವಿಶ್ವಕಪ್‌ನಲ್ಲಿ 16 ತಂಡಗಳ ಆಟವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ವೆಸ್ಟ್‌ಇಂಡೀಸ್ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಹೊಸದಿಲ್ಲಿಯ ಕೋಟ್ಲಾ ಸ್ಟೇಡಿಯಂ ವಿಶ್ವಕಪ್‌ನ ನಾಲ್ಕು ಪಂದ್ಯದ ಆಯೋಜನೆಗೆ ಇನ್ನಷ್ಟೇ ಅನುಮತಿ ಪಡೆಯಬೇಕಾಗಿದೆ. ವಿಶ್ವಕಪ್‌ನ ಅವ್ಯವಸ್ಥೆಯ ಪರಿಣಾಮ ವಿದೇಶದ ಅಭಿಮಾನಿಗಳಿಗೆ ಪ್ರಯಾಣದ ಯೋಜನೆ ರೂಪಿಸಲು ಸಾಧ್ಯವಾಗುತ್ತಿಲ್ಲ. ‘‘ಎಲ್ಲ ಸಮಸ್ಯೆಗಳು ಶೀಘ್ರವೇ ಪರಿಹಾರವಾಗಲಿದೆ’’ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಭರವಸೆ ನೀಡಿದ್ದಾರೆ.

‘‘ಈ ಬಾರಿ ನ್ಯೂಝಿಲೆಂಡ್ ತಂಡ ಪ್ರಶಸ್ತಿ ಜಯಿಸುವ ಫೇವರಿಟ್ ತಂಡವಾಗಿರುವ ಕಾರಣ ಭಾರತಕ್ಕೆ ಪ್ರಯಾಣಿಸಲು ಬಯಸಿದ್ದೆವು. ಆದರೆ, ಟಿಕೆಟ್‌ಗಳ ಮಾರಾಟದಲ್ಲಿನ ವಿಳಂಬ ಹಾಗೂ ವಿಶ್ವಕಪ್ ಪಂದ್ಯ ನಡೆಯುವ ಸ್ಥಳ ಇನ್ನೂ ಖಚಿತವಾಗದೇ ಇರುವುದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಪ್ರಯಾಣದ ಯೋಜನೆ ರೂಪಿಸಲು ಕಷ್ಟವಾಗುತ್ತಿದೆ’’ ಎಂದು ನ್ಯೂಝಿಲೆಂಡ್ ಅಭಿಮಾನಿಗಳ ಕ್ಲಬ್ ಸ್ಥಾಪಕ ಸದಸ್ಯ ಪಾಲ್ ಫೋರ್ಡ್ ಹೇಳಿದ್ದಾರೆ.

2016ರ ಆಗಸ್ಟ್ ಹಾಗೂ ಜೂನ್‌ನಲ್ಲಿ ಕ್ರಮವಾಗಿ ಬ್ರೆಝಿಲ್ ಹಾಗೂ ಫ್ರಾನ್ಸ್‌ನಲ್ಲಿ ನಡೆಯಲಿರುವ ಪ್ರಮುಖ ಕ್ರೀಡಾಕೂಟಗಳಾದ ರಿಯೋ ಒಲಿಂಪಿಕ್ಸ್ ಹಾಗೂ ಯುರೋಪಿಯನ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನ ಟಿಕೆಟ್‌ಗಳ ಮಾರಾಟ ಪ್ರಕ್ರಿಯೆ ತಿಂಗಳ ಹಿಂದೆಯೇ ಆರಂಭವಾಗಿದೆ. ವಿಶ್ವಕಪ್‌ನ ಟಿಕೆಟ್‌ಗಳ ಮಾರಾಟ ಪ್ರಕ್ರಿಯೆಯನ್ನು ಶೀಘ್ರವೇ ಆರಂಭಿಸಲಾಗುತ್ತದೆ ಎಂದು ಕಳೆದ ಶುಕ್ರವಾರ ಠಾಕೂರ್ ಸುದ್ದಿಗಾರರಿಗೆ ತಿಳಿಸಿದ್ದರು. ಆದರೆ, ಗಡುವು ಈಗಾಗಲೇ ಮುಗಿದಿದೆ. ಆಯೋಜಕರು ಮುಂದಿನ ಸೋಮವಾರ ಟಿಕೆಟ್ ಮಾರಾಟ ಆರಂಭಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ.

ಫಿರೋಝ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ಟೂರ್ನಿಯ ಮೊದಲ ಸೆಮಿಫೈನಲ್ ಸಹಿತ ಒಟ್ಟು ನಾಲ್ಕು ಪಂದ್ಯಗಳ ಆಯೋಜನೆಯ ಬಗೆಗಿನ ಅನಿಶ್ಚಿತತೆಯು ಈ ಎಲ್ಲ ಸಮಸ್ಯೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ.

‘‘ಟಿಕೆಟ್ ಮಾರಾಟ ಆರಂಭಿಸುವಂತೆ ನಾವು ಈಗಾಗಲೇ ಬಿಸಿಸಿಐಗೆ ತಿಳಿಸಿದ್ದೇವೆ. ನಾವು ಟ್ವೆಂಟಿ-20 ವಿಶ್ವಕಪ್ ಪಂದ್ಯಗಳ ಆತಿಥ್ಯವಹಿಸುವುದು ಖಚಿತ’’ಎಂದು ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ಚೇತನ್ ಚೌಹಾಣ್ ಹೇಳಿದ್ದಾರೆ.

‘‘ಒಂದು ವೇಳೆ ಹೊಸದಿಲ್ಲಿಯು ವಿಶ್ವಕಪ್ ಪಂದ್ಯಗಳ ಆಯೋಜನೆಯಿಂದ ವಂಚಿತವಾದರೆ ಅದು ಬಿಸಿಸಿಐಗೆ ಆಗುವ ದೊಡ್ಡ ಹಿನ್ನಡೆ. ಟಿಕೆಟ್ ಮಾರಾಟದ ವಿಳಂಬಕ್ಕೆ ಬಿಸಿಸಿಐನ್ನು ದೂಷಿಸಿ ಫಲವಿಲ್ಲ. ಇದಕ್ಕೆಲ್ಲ ಐಸಿಸಿ ಕಾರಣ’’ ಎಂದು ಹಿರಿಯ ಕ್ರೀಡಾ ಅಂಕಣಗಾರ ಅಯಾಝ್ ಮೆಮನ್ ಹೇಳಿದ್ದಾರೆ.

ವೆಸ್ಟ್‌ಇಂಡೀಸ್‌ನಲ್ಲಿ ಆಟಗಾರರು ವೇತನ ವಿವಾದವನ್ನು ಬಗೆಹರಿಸಲು ಫೆ.14 ರ ತನಕ ಗಡುವು ನೀಡಿದ್ದಾರೆ. 2009ರ ವಿಶ್ವ ಚಾಂಪಿಯನ್ ಪಾಕಿಸ್ತಾನ ಭಾರತದಲ್ಲಿ ಭದ್ರತೆಯ ಭೀತಿಯ ಕಾರಣ ಟೂರ್ನಿಯಿಂದ ಹಿಂದೆ ಸರಿಯುವ ಕುರಿತು ಚಿಂತಿಸುತ್ತಿದೆ. ಭಾರತಕ್ಕೆ ಆಗಮಿಸುವುದು ಬಿಡುವುದು ಪಿಸಿಬಿಗೆ ಬಿಟ್ಟ ವಿಚಾರ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ದಿಲ್ಲಿ ಹೆಸರು ತೆಗೆದುಹಾಕಿದ ಐಸಿಸಿ

 ಹೊಸದಿಲ್ಲಿ, ಫೆ.11: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) 2016ರ ಟ್ವೆಂಟಿ-20 ವಿಶ್ವಕಪ್‌ನ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ದಿಲ್ಲಿಯ ಫಿರೋಝ್‌ಷಾ ಕೋಟ್ಲಾ ಸ್ಟೇಡಿಯಂನ ಹೆಸರನ್ನು ಪಂದ್ಯದ ಸ್ಥಳ ಪಟ್ಟಿಯಿಂದ ತೆಗೆದುಹಾಕಿದೆ.

ಕೋಟ್ಲಾ ಸ್ಟೇಡಿಯಂ ಟ್ವೆಂಟಿ-20 ವಿಶ್ವಕಪ್‌ನ ನಾಲ್ಕು ಪಂದ್ಯಗಳ ಆತಿಥ್ಯವಹಿಸಿಕೊಳ್ಳಬೇಕಾಗಿತ್ತು. ಸ್ಟೇಡಿಯಂ ಕೆಲವು ಸಮಯದಿಂದ ವಿವಾದಗಳಿಂದ ಸುದ್ದಿಯಾಗುತ್ತಿದೆ. ಐಸಿಸಿ ತನ್ನ ಅಂತಿಮ ವೇಳಾಪಟ್ಟಿಯಿಂದ ದಿಲ್ಲಿಯನ್ನು ಕೈಬಿಟ್ಟಿದ್ದಲ್ಲದೆ, ದಿಲ್ಲಿ ಬದಲಿಗೆ ನಾಗ್ಪುರ ಹಾಗೂ ಬೆಂಗಳೂರು ಕೇಂದ್ರವನ್ನು ಹೆಸರಿಸಿದೆ.

ಈ ಬೆಳವಣಿಗೆಯ ಬಗ್ಗೆ ಬಿಸಿಸಿಐಯಲ್ಲಿ ಯಾವುದೇ ಮಾಹಿತಿಯಿಲ್ಲ. ‘‘ ಟ್ವೆಂಟಿ-20 ಪಂದ್ಯಗಳ ಸ್ಥಳದ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿಲ್ಲ. ಕೋಟ್ಲಾ ಪಂದ್ಯಗಳ ಆತಿಥ್ಯವಹಿಸಲಿದೆ. ವೇಳಾಪಟ್ಟಿಯ ಕುರಿತು ಐಸಿಸಿಯೊಂದಿಗೆ ಮಾತನಾಡುವೆ’’ಎಂದು ಬಿಸಿಸಿಐ ಅಧಿಕಾರಿ ರತ್ನಾಕರ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News