ಮ್ಯಾಚ್ ಫಿಕ್ಸಿಂಗ್ ಆರೋಪ: ಹಿಂದಿ ದೈನಿಕಕ್ಕೆ ಧೋನಿ ಕಾನೂನು ನೋಟಿಸ್
ಹೊಸದಿಲ್ಲಿ, ಫೆ.11: ಇತ್ತೀಚೆಗೆ ಭಾರತದ ನಾಯಕ ಎಂಎಸ್ ಧೋನಿಯ ವಿರುದ್ಧ ಮ್ಯಾಚ್‌ಫಿಕ್ಸಿಂಗ್ ಆರೋಪ ಹೊರಿಸಿದ್ದ ಹಿಂದಿ ದಿನಪತ್ರಿಕೆ ಸನ್ ಸ್ಟಾರ್‌ಗೆ ಕಾನೂನು ನೋಟಿಸ್ ನೀಡಿರುವ ಧೋನಿಯ ವಕೀಲರು, 100 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುವುದಾಗಿ ಹೇಳಿದ್ದಾರೆ.
ಧೋನಿಯ ದಿಲ್ಲಿ ಮೂಲದ ವಕೀಲರು ಹಿಂದಿ ದಿನಪತ್ರಿಕೆಗೆ 9 ಪುಟಗಳ ಕಾನೂನು ನೋಟಿಸ್‌ನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.
ದೇವ್ ಆರೋಪದಲ್ಲಿ ಸತ್ಯಾಂಶವಿಲ್ಲ. ಇದು ದಿನಪತ್ರಿಕೆಯ ಕಟ್ಟು ಕತೆಯಾಗಿದೆ. ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡುವ ಮೂಲಕ ಧೋನಿ ಗೌರವಕ್ಕೆ ಧಕ್ಕೆ ತರಲು ಯತ್ನಿಸಲಾಗಿದೆ. ಧೋನಿಯ ವರ್ಚಸ್ಸಿಗೆ ಧಕ್ಕೆ ತಂದಿರುವ ಹಿಂದಿ ದಿನಪತ್ರಿಕೆಯ ವಿರುದ್ದ 100 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ ಎಂದು ಕಾನೂನು ನೋಟಿಸ್‌ನ್ನು ಉಲ್ಲೇಖಿಸಿ ‘ಡೆಕ್ಕನ್ ಕ್ರಾನಿಕಲ್’ವರದಿಯಲ್ಲಿ ತಿಳಿಸಿದೆ.
2014ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಎಂಎಸ್ ಧೋನಿ ನಾಲ್ಕನೆ ಟೆಸ್ಟ್ ಪಂದ್ಯವನ್ನು ಫಿಕ್ಸ್ ಮಾಡಿದ್ದರು ಎಂದು ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸುನೀಲ್ ದೇವ್ ಆರೋಪ ಮಾಡಿದ್ದಾರೆ ಎಂದು ಸನ್ ಸ್ಟಾರ್ ಹಿಂದಿ ದೈನಿಕ ಇತ್ತೀಚೆಗೆ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿತ್ತು.
‘‘ದಿನಪತ್ರಿಕೆಯ ಆರೋಪ ಮೂರ್ಖತನದಿಂದ ಕೂಡಿದೆ. ತಾನು ಹಿಂದಿ ದೈನಿಕದ ವಿರುದ್ಧ ಕೇಸ್ ದಾಖಲಿಸಲು ಯೋಚಿಸುತ್ತಿರುವೆ’’ ಎಂದು ಧೋನಿ ವಿರುದ್ಧ ತಾನು ಮಾಡಿದ್ದ ಫಿಕ್ಸಿಂಗ್ ಆರೋಪವನ್ನು ಸ್ವತಹಾ ಸುನೀಲ್ ದೇವ್ ನಿರಾಕರಿಸಿದ್ದರು.