×
Ad

ದಕ್ಷಿಣ ಏಷ್ಯನ್ ಗೇಮ್ಸ್: ಕವಿತಾ ರಾವುತ್ ಒಲಿಂಪಿಕ್ಸ್‌ಗೆ ಅರ್ಹತೆ

Update: 2016-02-12 18:22 IST

ಗುವಾಹಟಿ, ಫೆ.12: ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಆತಿಥೇಯ ಭಾರತ ಚಿನ್ನದ ಸುರಿಮಳೆಯನ್ನು ಮುಂದುವರಿಸಿದ್ದು, ದೀರ್ಘ ಅಂತರದ ಓಟಗಾರ್ತಿ ಕವಿತಾ ರಾವುತ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವುದು ಗೇಮ್ಸ್‌ನ ಏಳನೆ ದಿನವಾದ ಶುಕ್ರವಾರದ ವಿಶೇಷವಾಗಿತ್ತು.

 ಒಟ್ಟು 248 ಪದಕಗಳನ್ನು(146 ಚಿನ್ನ, 79 ಬೆಳ್ಳಿ, 23 ಕಂಚು) ಸೂರೆಗೈದಿರುವ ಭಾರತ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಭದ್ರಪಡಿಸಿಕೊಂಡಿದೆ. ಶ್ರೀಲಂಕಾ(157) 2ನೆ ಸ್ಥಾನದಲ್ಲಿದೆ.

ಶೂಟಿಂಗ್: ಈಗಾಗಲೇ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತದ ಸ್ಟಾರ್ ಶೂಟರ್ ಚೈನ್ ಸಿಂಗ್ ಪುರುಷರ 10 ಮೀ. ಏರ್‌ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದಾರೆ. ಭಾರತದ ಇನ್ನೋರ್ವ ಹಿರಿಯ ಆಟಗಾರ ಗಗನ್ ನಾರಂಗ್ 204.6 ಅಂಕ ಗಳಿಸಿ ಬೆಳ್ಳಿಗೆ ತೃಪ್ತಿಪಟ್ಟರು. ಭಾರತ ಶೂಟಿಂಗ್‌ನಲ್ಲಿ ಶುಕ್ರವಾರ 4 ಚಿನ್ನ ಜಯಿಸಿತು.

 ಚೈನ್ ಸಿಂಗ್, ನಾರಂಗ್ ಹಾಗೂ ಇಮ್ರಾನ್ ಖಾನ್ ಅವರನ್ನೊಳಗೊಂಡ ಭಾರತದ ಶೂಟಿಂಗ್ ತಂಡ 1863.4 ಅಂಕ ಗಳಿಸಿ ಚಿನ್ನ ಜಯಿಸಿತು. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದವು.

ಪುರುಷರ ವೈಯಕ್ತಿಕ 20 ಮೀ. ಸ್ಟಾಂಡರ್ಡ್ ಪಿಸ್ತೂಲ್ ಸ್ಪರ್ಧೆಯಲ್ಲಿ ನೀರಜ್ ಕುಮಾರ್(569 ಅಂಕ) ಚಿನ್ನದ ಪದಕ ಜಯಿಸಿದ್ದಾರೆ. ಗುರುಪ್ರೀತ್ ಸಿಂಗ್(566) ಹಾಗೂ ಮಹೇಂದರ್ ಸಿಂಗ್(563) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.

 ದ್ಯುತಿಗೆ ಬೆಳ್ಳಿ: ಲಿಂಗ ಪರೀಕ್ಷೆಯಲ್ಲಿ ವಿವಾದಕ್ಕೆ ಸಿಲುಕಿ ದೋಷ ಮುಕ್ತಗೊಂಡಿರುವ ಒಡಿಶಾದ ಅಥ್ಲೀಟ್ ದುತಿ ಚಂದ್ ಮಹಿಳೆಯರ 200 ಮೀ. ಓಟದಲ್ಲಿ ಬೆಳ್ಳಿ ಜಯಿಸಿದರು. ಭಾರತದ ಸೃಬಾನಿ ನಂದಾ ಚಿನ್ನದ ಪದಕ ಜಯಿಸಿದ್ದಾರೆ. ಶ್ರೀಲಂಕದ ರತ್ನನಾಯಕ ಕಂಚಿನ ಪದಕ ಪಡೆದರು.

 ಭಾರತದ ದೀರ್ಘ ಅಂತರದ ಓಟಗಾರ್ತಿ ಕವಿತಾ ರಾವುತ್  12ನೆ ಆವೃತ್ತಿಯ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಮ್ಯಾರಥಾನ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದರು. ಈ ಮೂಲಕ ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

30ರ ಹರೆಯದ ರಾವುತ್ 2 ಗಂಟೆ, 38 ನಿಮಿಷ ಹಾಗೂ 38 ಸೆಕೆಂಡ್‌ನಲ್ಲಿ ಗುರಿ ತಲುಪಿ ಮ್ಯಾರಥಾನ್‌ನಲ್ಲಿ ಚಿನ್ನದ ನಗು ಬೀರಿದರು. ಈ ಸಾಧನೆಯ ಮೂಲಕ ರಿಯೋ ಗೇಮ್ಸ್‌ನ ಮಹಿಳೆಯರ ಮ್ಯಾರಥಾನ್‌ಗೆ ಅರ್ಹತೆ ಪಡೆದ ಭಾರತದ ನಾಲ್ಕನೆ ಮಹಿಳಾ ಅಥ್ಲೀಟ್ ಎನಿಸಿಕೊಂಡರು. ಒ.ಪಿ ಜೈಶಾ, ಲಲಿತಾ ಬಬ್ಬರ್ ಹಾಗೂ ಸುಧಾ ಸಿಂಗ್ ಈಗಾಗಲೇ ರಿಯೋ ಒಲಿಂಪಿಕ್ಸ್‌ನ ಮಹಿಳೆಯರ ಮ್ಯಾರಥಾನ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಮಹಿಳೆಯರ ಮ್ಯಾರಥಾನ್‌ನಲ್ಲಿ ಶ್ರೀಲಂಕಾದ ಎನ್‌ಜಿ ರಾಜಸೇಖರ(2:50:47.00) ಹಾಗೂ ಬಿ. ಅನುರುಧಿ(2:52:15:00) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.


ನಾಸಿಕ್‌ನ ಓಟಗಾರ್ತಿ ರಾವುತ್ ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಏಷ್ಯನ್ ಗೇಮ್ಸ್‌ನ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತದ ಏಕೈಕ ಅಥ್ಲೀಟ್ ಆಗಿದ್ದಾರೆ. ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ನಿತೇಂದರ್ ಸಿಂಗ್ ರಾವತ್ ಪುರುಷರ ಮ್ಯಾರಥಾನ್‌ನಲ್ಲಿ 2:15:18 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಶುಕ್ರವಾರ 2 ಚಿನ್ನ, ಒಂದು ಕಂಚಿನ ಪದಕವನ್ನು ಜಯಿಸಿರುವ ಭಾರತದ ಅಥ್ಲೀಟ್‌ಗಳು ಟೂರ್ನಿಯಲ್ಲಿ ಒಟ್ಟು 28 ಚಿನ್ನ, 22 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಜಯಿಸುವುದರೊಂದಿಗೆ ತಮ್ಮ ಅಭಿಯಾನ ಅಂತ್ಯಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News