ಇಂದು ಅಂಡರ್-19 ವಿಶ್ವಕಪ್ ಫೈನಲ್;ಭಾರತಕ್ಕೆ ನಾಲ್ಕನೆ ಬಾರಿ ವಿಶ್ವಕಪ್ ಎತ್ತುವ ಕನಸು

Update: 2016-02-13 19:03 GMT

ಮೀರ್ಪುರ, ಫೆ.13: ಅಂಡರ್ -19 ಕ್ರಿಕೆಟ್ ವಿಶ್ವಕಪ್‌ನ್ನು ನಾಲ್ಕನೆ ಬಾರಿ ಎತ್ತುವ ಕನಸು ಕಾಣುತ್ತಿರುವ ಭಾರತ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್‌ನ್ನು ಎದುರಿಸಲಿದೆ.
 ಕೋಚ್ ರಾಹುಲ್ ದ್ರಾವಿಡ್‌ಅವರ ಸಮರ್ಥ ಮಾರ್ಗದರ್ಶನದಲ್ಲಿ ತಂಡ ಚೆನ್ನಾಗಿ ಪ್ರದರ್ಶನ ನೀಡಿ. ಪ್ರಶಸ್ತಿಯ ಸುತ್ತು ತಲುಪಿದೆ. ಭಾರತ ತಂಡ ಶ್ರೀಲಂಕಾವನ್ನು ಮಣಿಸಿ ಫೈನಲ್ ತಲುಪಿದೆ. ಇದೇ ವೇಳೆ ವಿಂಡೀಸ್ ತಂಡ ಬಾಂಗ್ಲಾವನ್ನು ಮಣಿಸಿ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದೆ. 1988ರಲ್ಲಿ ಅಂಡರ್ -19 ವಿಶ್ವಕಪ್ ಆರಂಭಗೊಂಡ ಬಳಿಕ ಆಸ್ಟ್ರೇಲಿಯ ಅತ್ಯಂತ ಹೆಚ್ಚು ಬಾರಿ ಪ್ರಶಸ್ತಿ ಜಯಿಸಿದೆ. ಭಾರತ ಈ ಬಾರಿ ಜಯಿಸಿದರೆ ಆಸ್ಟ್ರೇಲಿಯದ ಸಾಧನೆ ಸರಿಗಟ್ಟಲಿದೆ. ಭಾರತ ಮುಹಮ್ಮದ್ ಕೈಫ್(2000), ವಿರಾಟ್ ಕೊಹ್ಲಿ(2008), ಮತ್ತು ಉನ್ಮುಕ್ತ್ ಚಂದ್(2012) ನಾಯಕತ್ವದ ತಂಡ ವಿಶ್ವಕಪ್ ಜಯಿಸಿತ್ತು. ಇಶಾನ್ ಕಿಶಾನ್ ನಾಯಕತ್ವದ ತಂಡ 2016ರ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುವ ಕಡೆಗೆ ನೋಡುತ್ತಿದೆ.

ಭಾರತ ಐದನೆ ಬಾರಿ ಫೈನಲ್ ಪ್ರವೇಶಿಸಿದೆ. ಆದರೆ ವಿಂಡೀಸ್ ಎರಡನೆ ಬಾರಿ ಫೈನಲ್ ತಲುಪಿದೆ. ‘‘ ನಾವು ಪ್ರಶಸ್ತಿ ಗೆಲ್ಲುವ ಪ್ರಯತ್ನ ನಡೆಸುವೆವು. ಇದೊಂದು ಅಂತಿಮ ಪರೀಕ್ಷೆ ಚೆನ್ನಾಗಿ ಆಡಿದರೆ ಗೆಲುವು ಖಚಿತ’’ ಎಂದು ಭಾರತ ತಂಡದ ನಾಯಕ ಇಶಾನ್ ಕಿಶನ್ ಹೇಳಿದ್ದಾರೆ.
ಭಾರತ ಬಲಿಷ್ಠವಾಗಿದ್ದರೂ, ವಿಂಡೀಸ್‌ನ್ನು ಲಘವಾಗಿ ಪರಿಗಣಿಸುವಂತಿಲ್ಲ. ಆದರೆ ಭಾರತದ ಆಟಗಾರರು ವಿಂಡೀಸ್‌ಗೆ ಸೋಲುಣಿಸುವ ಹುಮ್ಮಸ್ಸಿನಲ್ಲಿದ್ದಾರೆ. ಆರಂಭಿಕ ದಾಂಡಿಗರಾದ ರಿಶಬ್ ಪಂತ್ ಮತ್ತು ನಾಯಕ ಇಶಾನ್ ಕಿಶನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.
ಕಿಶನ್ ಏಕೈಕ ಅರ್ಧಶತಕ ಸಿಡಿಸಿದ್ದಾರೆ. ಆದರೆ ರಿಶಬ್ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಬೇಗನೆ ಔಟಾಗಿದ್ದಾರೆ. ಅನ್ಮೋಲ್‌ಪ್ರೀತ್ ಸಿಂಗ್ ಶ್ರೀಲಂಕಾ ವಿರುದ್ಧ 72 ರನ್ ಗಳಿಸಿದ್ದರು. ಪವರ್ ಹಿಟ್ಟರ್ ಸರ್ಫರಾಝ್ ಖಾನ್ ಟೂರ್ನಿಯಲ್ಲಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಅವರು 76 ಸರಾಸರಿಯಂತೆ 304 ರನ್ ಗಳಿಸಿದ್ದಾರೆ. ಐದು ಪಂದ್ಯಗಳಲ್ಲಿ ನಾಲ್ಕು ಅರ್ಧಶತಕ ಸಿಡಿಸಿದ್ದಾರೆ.
ವೇಗಿ ಆವೇಶ್ ಖಾನ್ ಭಾರತದ ಪರ ಗರಿಷ್ಠ ವಿಕೆಟ ಗಿಟ್ಟಿಸಿಕೊಂಡವರು. ಅವರು 11 ವಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಮಯಾಂಕ್ ದಗಾರ್ 8 ವಿಕೆಟ್ ಪಡೆದಿದ್ದಾರೆ.

ವೆಸ್ಟ್‌ಇಂಡಿಸ್ 2004ರಲ್ಲಿ ಎರಡನೆ ಸ್ಥಾನ ಪಡೆದಿತ್ತು. ಅದು ಚೊಚ್ಚಲ ಪ್ರಶಸ್ತಿ ಗೆಲ್ಲುವ ಕಡೆಗೆ ನೋಡುತ್ತಿದೆ. ಭಾರತ: ಇಶಾನ್ ಕಿಶನ್(ನಾಯಕ), ರಿಶಬ್ ಪಂತ್, ವಾಷಿಂಗ್ಟನ್ ಸುಂದರ್, ಸರ್ಫರಾಝ್ ಖಾನ್, ಅಮನ್‌ದೀಪ್ ಖಾರೆ, ಅನ್ಮೊಲ್‌ಪ್ರೀತ್ ಸಿಂಗ್, ರಿಕಿ ಭುಯಿ, ಮಾಯಾಂಕ್ ದಗಾರ್, ಝೀಶನ್ ಅನ್ಸಾರಿ, ಮಹಿಪಾಲ್ ಲೊಮ್ರಾರ್, ಅವೇಶ್ ಖಾನ್, ಶುಭಮ್ ಮಾವಿ, ಖಲೀಲ್ ಅಹ್ಮದ್, ರಾಹುಲ ಬತ್ಮಾನ್, ಅರ್ಮೈನ್ ಜಾಫರ್.
 ವೆಸ್ಟ್‌ಇಂಡೀಸ್: ಶಿಮ್ರ್‌ನ್ ಹೆಟ್ಮಾಯೆರ್, ಶಾಹಿದ್ ಕ್ರೊಕ್ಸ್, ಜೈದ್ ಗೋಲೈ, ರ್ಯಾನ್ ಜೋನ್, ಕರ್ಸ್ಟನ್ ಕಾಳಿಚರಣ್, ಕೇಮೊ ಪಾಲ್, ಒಡಿಯನ್ ಸ್ಮಿತ್, ಎಮ್ಮಾನುಯೆಲ್ ಸ್ಟೆವರ್ಟ್, ಕೀಸಿ ಕಾರ್ಟಿ, ಮೈಕಲ್ ಫ್ರೇವ್, ಟೆವಿನ್ ಇಮ್ಲಾಚ್, ಅಲ್ಝಾರಿ ಜೋಸೆಫ್, ಒಬೆದ್ ಮೆಕೊಯ್, ಗಿಡ್ರೋನ್ ಪೊಪೆ, ಶಾಮರ್ ಸ್ಪ್ರೀಂಗರ್., ಚೆಮಾರ್ ಹೊಲ್ಡೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News