ಇಂದು ಅಂತಿಮ ಟ್ವೆಂಟಿ-20 ಪಂದ್ಯ;ಸರಣಿ ಗೆಲುವಿಗೆ ಭಾರತ-ಲಂಕಾ ಪೈಪೋಟಿ

Update: 2016-02-13 19:02 GMT

   ವಿಶಾಖಪಟ್ಟಣ, ಫೆ.13: ರಾಂಚಿಯಲ್ಲಿ ನಡೆದ ಎರಡನೆ ಟ್ವೆಂಟಿ-20ಪಂದ್ಯದಲ್ಲಿ ಲಂಕಾ ವಿರುದ್ಧ 69 ರನ್‌ಗಳ ಗೆಲುವಿನೊಂದಿಗೆ 1-1 ಸಮಬಲ ಸಾಧಿಸಿದ ಧೋನಿ ಪಡೆ ರವಿವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಗೆಲ್ಲುವುದರೊಂದಿಗೆ ಸರಣಿ ಜಯದ ಕನಸು ಕಾಣುತ್ತಿದೆ.

ಮೊದಲ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಎರಡನೆ ಪಂದ್ಯದಲ್ಲಿ ಲಂಕಾ ಸೋಲು ಅನುಭವಿಸಿತ್ತು. ಈ ಕಾರಣದಂದಾಗಿ ಉಭಯ ತಂಡಗಳು ಸರಣಿ ಗೆಲುವಿಗೆ ಈ ಪಂದ್ಯದಲ್ಲಿ ಗೆಲ್ಲಬೇಕಾಗಿದೆ. ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ಭಾರತಕ್ಕೆ ಗೆಲುವು ಅನಿವಾರ್ಯ. ಪುಣೆಯಲ್ಲಿ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ರೋಚಕ ಜಯ ದಾಖಲಿಸಿದ ಲಂಕೆೆ ಎರಡನೆ ಪಂದ್ಯದಲ್ಲಿ ಮುಗ್ಗರಿಸಿತ್ತು.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡ ಹೊಸ ಪ್ರತಿಭೆಗಳಿಗಾಗಿ ಶೋಧ ಮುಂದುವರಿಸಿದೆ. ಮುಂಬರುವ ವಿಶ್ವಕಪ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿ ನಡೆಸುತ್ತಿದೆ. ಭಾರತದ ಆರಂಭಿಕ ದಾಂಡಿಗರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಸ್ಫೋಟಕ ಆರಂಭ ನೀಡಿದರೆ ತಂಡದ ಬ್ಯಾಟಿಂಗ್ ಚೆನ್ನಾಗಿರುತ್ತದೆ. ಒಂದು ವೇಳೆ ಇವರು ವೈಫಲ್ಯ ಅನುಭವಿಸಿದರೆ , ತಂಡದ ಮಧ್ಯಮ ಸರದಿ ಒತ್ತಡಕ್ಕೆ ಸಿಲುಕುತ್ತದೆ. ಭಾರತ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಧವನ್ ಎರಡನೆ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಚೆನ್ನಾಗಿ ಆಡುತ್ತಿದ್ಧಾರೆ. ಆಸ್ಟ್ರೇಲಿಯದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.ಯುವರಾಜ್ ಸಿಂಗ್‌ಗೆ ನಂ.7ನಲ್ಲಿ ಆಡುತ್ತಿದ್ದಾರೆ. ಈ ಕಾರಣದಿಂದಾಗಿ ಅವರ ಬ್ಯಾಟ್‌ನಿಂದ ಹೆಚ್ಚು ರನ್ ಹರಿದು ಬಂದಿಲ್ಲ. ಮುಂದಿನ ವಿಶ್ವಕಪ್ ತಂಡದಲ್ಲಿ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕಾದರೆ ಅವರು ಉತ್ತಮ ಪ್ರದರ್ಶನ ನೀಡಬೇಕಾಗಿದೆ.
ಅಗ್ರ ನಾಲ್ಕರಲ್ಲಿ ಸಮಸ್ಯೆ ಇಲ್ಲ. ಈ ಕಾರಣದಿಂದಾಗಿ ಯುವರಾಜ್ ಸಿಂಗ್‌ಗೆ ಮಧ್ಯಮ ಸರದಿಯಲ್ಲಿ ಅವಕಾಶ ಸಿಗುವುದು ಕಷ್ಟ. ಅಜಿಂಕ್ಯ ರಹಾನೆ ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಅಂತಿಮ ಪಂದ್ಯಕ್ಕೆ ಮನೀಷ್ ಪಾಂಡೆಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಸ್ಪಿನ್ನರ್ ಆರ್.ಅಶ್ವಿನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆಶೀಷ್ ನೆಹ್ರಾ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಲಂಕಾ ತಂಡದಲ್ಲಿ ಅಗ್ರ ಸರದಿಯಲ್ಲಿ ಸಮಸ್ಯೆ ಇದೆ. ಕುಸಲ್ ಪೆರೇರಾ, ಧನುಷ್ಕ ಗುಣತಿಲಕ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಿಸಿಕೊಂಡಿಲ್ಲ. ನಿರೊಶನ್ ದಿಕ್ವೆಲ್ಲಾ ಒಂದು ಟ್ವೆಂಟಿ-20 ಪಂದ್ಯ ಆಡಿದ್ದಾರೆ. ಆದರೆ ಅವರು ಬೇಗನೆ ಔಟಾಗಿದ್ದರು.
 ಪಿಚ್ ಮತ್ತು ವಾತಾವರಣ: ವಿಶಾಖಪಟ್ಟಣದ ಪಿಚ್‌ನಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ. ವಾತಾವರಣದ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆ ಇದೆ.
ಅಂಕಿ-ಅಂಶ
*ಯುವರಾಜ್ ಸಿಂಗ್‌ಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 1,000 ರನ್ ಪೂರೈಸಲು ಇನ್ನೂ 7 ರನ್ ಗಳಿಸಬೇಕಾದ ಅಗತ್ಯತೆ ಇದೆ.
*ವಿಶಾಖಪಟ್ಟಣ ಭಾರತದ ಪಾಲಿಗೆ ಅದೃಷ್ಟದ ತಾಣ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಗಳಿಸಿದೆ.
*ತಿಸ್ಸರಾ ಪೆರೆರಾ ರಾಂಚಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.33ಕ್ಕೆ 3 ವಿಕೆಟ್ ಪಡೆದು ಟ್ವೆಂಟಿ-20ಯಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದರು.

ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ಮನೀಷ್ ಪಾಂಡೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡೆ, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬುಮ್ರಾ, ಆಶೀಶ್ ನೆಹ್ರಾ, ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಪವನ್ ನೇಗಿ.
 ಶ್ರೀಲಂಕಾ: ದಿನೇಶ್ ಚಾಂಡಿಮಾಲ್(ನಾಯಕ), ಸೀಕುಗೆ ಪ್ರಸನ್ನ, ಮಿಲಿಂದ ಸಿರಿವಧರ್ನ, ಧನುಷ್ಕ ಗುಣತಿಲಕ, ತಿಸ್ಸಾರ ಪೆರೆರಾ, ದಾಸನ್ ಶಾನಕ, ಅಸೆಲಾ ಗುಣರತ್ನೆ, ಚಾಮರಾ ಕಪುಗೆಡರ, ದುಶ್ಮಂತ ಚಾಮೀರಾ ದಿಲ್ಹಾರ ಫೆರ್ನಾಂಡೊ, ಕಾಸುನ್‌ರಜೀತಾ, ಬಿನುರಾ ಫೆರ್ನಾಂಡೊ, ಸಚಿತ್ರ ಸೇನನಾಯಕೆ, ಜೆಫ್ರಿ ವ್ಯಾಂಡೆಸೇ, ನಿರೊಶಾನ್ ಡಿಕ್ವೆಲ್ಲಾ.

ಪಂದ್ಯದ ಸಮಯ: ರಾತ್ರಿ 7:30ಕ್ಕೆ ಆರಂಭ ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News