ಮೊದಲ ಟೆಸ್ಟ್: ವೋಗ್ಸ್ ದ್ವಿಶತಕ; ಆಸ್ಟ್ರೇಲಿಯ ಮೇಲುಗೈ

Update: 2016-02-14 09:36 GMT

ವೆಲ್ಲಿಂಗ್ಟನ್, ಫೆ.14: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಆಸ್ಟ್ರೇಲಿಯ ಮೇಲುಗೈ ಸಾಧಿಸಿದೆ.
 ಆ್ಯಡಮ್ ವೋಗ್ಸ್ ದಾಖಲಿಸಿದ ಎರಡನೆ ದ್ವಿಶತಕ ನೆರವಿನಲ್ಲಿ ಆಸ್ಟ್ರೇಲಿಯ ತಂಡ ಮೊದಲ ಇನಿಂಗ್ಸ್‌ನಲ್ಲಿ 562 ರನ್‌ಗಳಿಗೆ ಆಲೌಟಾಗಿದೆ. ಬಳಿಕ ಎರಡನೆ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.
ಎರಡನೆ ಇನಿಂಗ್ಸ್‌ನಲ್ಲಿ 62.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 178 ರನ್ ಗಳಿಸಿದೆ. ಇನಿಂಗ್ಸ್ ಸೋಲು ತಪ್ಪಿಸಲು ಇನ್ನೂ 201 ರನ್ ಗಳಿಸಬೇಕಾಗಿದೆ. 31 ರನ್ ಗಳಿಸಿರುವ ನಿಕೊಲಾಸ್ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
 ಲ್ಯಾಥಮ್ (63), ಗಪ್ಟಿಲ್(45), ವಿಲಿಯಮ್ಸನ್(22), ನಾಯಕ ಬ್ರೆಂಡನ್ ಮೆಕಲಮ್(10) ಔಟಾಗಿದ್ದಾರೆ. ವಿದಾಯದ ಸರಣಿ ಆಡುತ್ತಿರುವ ಮೆಕಲಮ್ ಇದೇ ಕ್ರೀಡಾಂಗಣದಲ್ಲಿ ಎರಡು ವರ್ಷಗಳ ಹಿಂದೆ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು 13 ಗಂಟೆಗಳ ಕಾಲ ಬ್ಯಾಟಿಂಗ್ ನಡೆಸಿದ್ದರು. ಆದರೆ ಅವರು ಬೇಗನೆ ವಿಕೆಟ್ ಕೈ ಚೆಲ್ಲಿದರು. ಎರಡು ಬಾರಿ ಜೀವದಾನ ಪಡೆದಿದ್ದರೂ, ಅದರ ಪ್ರಯೋಜನ ಪಡೆಯಲು ಮೆಕಲಮ್‌ಗೆ ಸಾಧ್ಯವಾಗಲಿಲ್ಲ. ಲಿನ್(2-35),ಹೇಝಲ್‌ವುಡ್(1-42), ಮತ್ತು ಮಿಚೆಲ್ ಮಾರ್ಷ್(1-40) ನ್ಯೂಝಿಲೆಂಡ್‌ನ ಅಗ್ರ ಸರದಿಯ ವಿಕೆಟ್‌ಗಳನ್ನು ಕಿತ್ತು ಸಂಕಷ್ಟಕ್ಕೆ ಸಿಲುಕಿಸಿದರು.
ಎರಡನೆ ದಿನದಾಟದಂತ್ಯಕ್ಕೆ 130 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 463 ರನ್ ಮಾಡಿದ್ದ ಆಸ್ಟ್ರೇಲಿಯ ಈ ಮೊತ್ತಕ್ಕೆ 99 ರನ್ ಸೇರಿಸಿತು. 176 ರನ್ ಗಳಿಸಿ ಔಟಾಗದೆ ಉಳಿದಿದ್ದ ವೋಗ್ಸ್ ಮತ್ತು ಪೀಟರ್ ಸಿಡ್ಲ್ ಬ್ಯಾಟಿಂಗ್ ಮುಂದುವರಿಸಿ ತಮ್ಮ ಜೊತೆಯಾಟದಲ್ಲಿ ಸ್ಕೋರ್‌ನ್ನು 494ಕ್ಕೆ ಏರಿಸಿದರು. ಸಿಡ್ಲ್ (49) ಅರ್ಧಶತಕ ವಂಚಿತಗೊಂಡರು.
 ಊಟದ ವಿರಾಮಕ್ಕೂ ಮೊದಲು ಆಸ್ಟ್ರೇಲಿಯದ ಬ್ಯಾಟಿಂಗ್ ಮುಗಿಯಿತು. ವೋಗ್ಸ್ 329 ಎಸೆತಗಳಲ್ಲಿ 28 ಬೌಂಡರಿಗಳ ಸಹಾಯದಿಂದ ಎರಡನೆ ದ್ವಿಶತಕ ದಾಖಲಿಸಿದರು. ಅಂತಿಮವಾಗಿ ವೋಗ್ಸ್ ಅವರು ಕ್ರೇಗ್‌ಗೆ ರಿಟರ್ನ್ ಕ್ಯಾಚ್ ನೀಡುವುದರೊಂದಿಗೆ ತನ್ನ 504 ನಿಮಿಷಗಳ ಬ್ಯಾಟಿಂಗ್‌ನ್ನು ಮುಗಿಸಿದರು. ವೋಗ್ಸ್ ಔಟಾಗುವುದರೊಂದಿಗೆ ಆಸ್ಟ್ರೇಲಿಯದ ಮೊದಲ ಇನಿಂಗ್ಸ್ ಮುಕ್ತಾಯಗೊಂಡಿತು.
 364 ಎಸೆತಗಳನ್ನು ಎದುರಿಸಿದ ವೋಗ್ಸ್ 30 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 239 ರನ್ ಗಳಿಸಿದರು.
ನ್ಯೂಝಿಲೆಂಡ್‌ನ ಸೌಥಿ, ಬೌಲ್ಟ್, ಬ್ರಾಸ್‌ವೆಲ್ ,ಆ್ಯಂಡರ್ಸನ್ ಹಾಗೂ ಕ್ರೇಗ್ ತಲಾ 2 ವಿಕೆಟ್ ಹಂಚಿಕೊಂಡರು.
,,,,,,,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News