2015ರಲ್ಲಿ 3,545 ಅಫ್ಘಾನ್ ನಾಗರಿಕರ ಹತ್ಯೆ

Update: 2016-02-14 18:19 GMT

ಕಾಬುಲ್,ಫೆ.14: ಅಫ್ಘಾನ್ ಸಮರದಲ್ಲಿ ನಾಗರಿಕ ಸಾವುನೋವಿನ ಸಂಖ್ಯೆಯು 2015ರಲ್ಲಿ ಸತತ ಏಳನೆ ವರ್ಷವೂ ದಾಖಲೆ ಏರಿಕೆಯನ್ನು ಕಂಡಿದೆ. ಅಂತಾರಾಷ್ಟ್ರೀಯ ಪಡೆಗಳ ನಿರ್ಗಮನದ ಹಿನ್ನೆಲೆಯಲ್ಲಿ ಹಿಂಸಾಚಾರವು ಅಫ್ಘಾನಿಸ್ತಾನಾದ್ಯಂತ ವ್ಯಾಪಕವಾಗಿ ಹರಡಿದೆಯೆಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
   
ಕಳೆದ ವರ್ಷ ಕನಿಷ್ಠ 3,545 ಮಂದಿ ನಾಗರಿಕರು ಮೃತಪಟ್ಟಿದ್ದರು ಹಾಗೂ ಇತರ 7,457 ಮಂದಿ ಗಾಯಗೊಂಡಿದ್ದು ಇದು 2014ನೆ ವರ್ಷಕ್ಕಿಂತ ಶೇ.4ರಷ್ಟು ಏರಿಕೆಯಾಗಿದೆಯೆಂದು ವಿಶ್ವಸಂಸ್ಥೆಯು ಪ್ರಕಟಿಸಿರುವ ನಾಗರಿಕ ಸಾವುನೋವಿನ ಕುರಿತ ವಾರ್ಷಿಕ ವರದಿ ತಿಳಿಸಿದೆ.
  ಅಫ್ಘಾನ್ ಸಂಘರ್ಷದಲ್ಲಿ ನಾಗರಿಕರಿಗಾಗಿರುವ ಹಾನಿಯು ಆತಂಕಕಾರಿಯಾಗಿದೆಯೆಂದು ಅಫ್ಘಾನ್‌ನಲ್ಲಿನ ವಿಶ್ವಸಂಸ್ಥೆಯ ನೆರವು ಮಿಶನ್‌ನ ಮುಖ್ಯಸ್ಥರಾದ ನಿಕೊಲಾಸ್ ಹೆಸಮ್ ತಿಳಿಸಿದ್ದಾರೆ.
 ಅಫ್ಘಾನ್‌ನಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲವಿರುವ ಸರಕಾರಿ ಪಡೆಗಳು ಹಾಗೂ ಬಂಡುಕೋರ ಗುಂಪುಗಳ ನಡುವಣ ಘರ್ಷಣೆಯಲ್ಲಿ ಭಾರೀ ಸಂಖ್ಯೆಯ ನಾಗರಿಕರು ಸಿಕ್ಕಿಹಾಕಿಕೊಳ್ಳುತ್ತಿದ್ದಾರೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
 ನಾಗರಿಕ ಸಾವುನೋವುಗಳ ಸಂಖ್ಯೆಯು ಭೂಸಮರದಲ್ಲಿ ಅಧಿಕವಾಗಿದ್ದು, ಶೇ.37ರಷ್ಟಿದೆ. ರಸ್ತೆಬದಿಯ ಬಾಂಬ್ ಸ್ಫೋಟದಲ್ಲಿ ಶೇ.21 ಮಂದಿ ಹಾಗೂ ಆತ್ಮಹತ್ಯಾ ದಾಳಿಗಳಲ್ಲಿ ಶೇ.17ರಷ್ಟು ಸಾವುಗಳಾಗಿವೆ.
ಅಫ್ಘಾನ್ ಆಂತರಿಕ ಸಂಘರ್ಷದಲ್ಲಿ ಮಹಿಳೆಯರು ಹಾಗೂ ಮಕ್ಕಳು ಅತ್ಯಧಿಕ ಸಂಖ್ಯೆಯಲ್ಲಿ ಬಾಧಿತರಾಗಿದ್ದಾರೆ. ಈ ವರ್ಷ ಮಹಿಳೆಯರ ಸಾವುನೋವಿನ ಸಂಖ್ಯೆಯು ಶೇ. 37ರಷ್ಟು ಏರಿಕೆಯಾಗಿದ್ದರೆ, ಗಾಯಾಳು ಮಕ್ಕಳ ಸಂಖ್ಯೆಯಲ್ಲಿ ಶೇ.14ರಷ್ಟು ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News