ಪುಣೆ ತಂಡಕ್ಕೆ ಹೃಷಿಕೇಶ್ ಕಾನಿಟ್ಕರ್ ಸಹಾಯಕ ಕೋಚ್
ಪುಣೆ, ಫೆ.15: ಭಾರತದ ಮಾಜಿ ಕ್ರಿಕೆಟಿಗ ಹೃಷಿಕೇಶ್ ಕಾನಿಟ್ಕರ್ ಮುಂಬರುವ ಐಪಿಎಲ್‌ನಲ್ಲಿ ಹೊಸ ತಂಡ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.
1999-2000ರಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಿರುವ ಕಾನಿಟ್ಕರ್ 34 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 1998ರಲ್ಲಿ ಪಾಕಿಸ್ತಾನ ವಿರುದ್ಧದ ಇಂಡಿಪೆಂಡೆನ್ಸ್ ಕಪ್‌ನಲ್ಲಿ ಫೈನಲ್ ಪಂದ್ಯದಲ್ಲಿ ವಿರೋಚಿತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು.
ಢಾಕಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತಕ್ಕೆ 2 ಎಸೆತಗಳಲ್ಲಿ 3 ರನ್ ಅಗತ್ಯವಿತ್ತು. ಸ್ಪಿನ್ನರ್ ಸಕ್ಲೇನ್‌ಮುಶ್ತಾಕ್ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ್ದ ಕಾನಿಟ್ಕರ್ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು.
ರಣಜಿ ಟ್ರೋಫಿಯಲ್ಲಿ ಗರಿಷ್ಠ ಸ್ಕೋರರ್‌ಗಳ ಪಟ್ಟಿಯಲ್ಲಿ 5ನೆ ಸ್ಥಾನದಲ್ಲಿರುವ ಕಾನಿಟ್ಕರ್ 105 ಪಂದ್ಯಗಳಲ್ಲಿ 8,059 ರನ್ ಗಳಿಸಿದ್ದಾರೆ. 2015ರ ಜುಲೈನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.
ಈ ಬಾರಿಯ ಹೊಸ ಐಪಿಎಲ್ ತಂಡ ಪುಣೆಯನ್ನು ಭಾರತದ ನಾಯಕ ಎಂಎಸ್ ಧೋನಿ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಸ್ಟೀಫನ್ ಫ್ಲೆಮಿಂಗ್ ಪ್ರಧಾನ ಕೋಚ್ ಆಗಿದ್ದಾರೆ.