ಜೀವನ ನಿರ್ವಹಣೆಗೆ ಕಾರು ತೊಳೆಯುವ ಪ್ಯಾರಾಥ್ಲೀಟ್..!
ಹೊಸದಿಲ್ಲಿ, ಫೆ.16: ಜೂನಿಯರ್ ನ್ಯಾಶನಲ್ ಲೆವೆಲ್ ಅಥ್ಲೆಟಿಕ್ಸ್ 2005 ಮತ್ತು 2009ರಲ್ಲಿ ವರ್ಲ್ಡ್ ಗೇಮ್ಸ್‌ನಲ್ಲಿ ಹಲವು ಚಿನ್ನದ ಪದಕವನ್ನು ಭಾರತದ ಖಾತೆಗೆ ಜಮೆ ಮಾಡಿದ್ದ ಈಜುಪಟು ಭರತ್ ಕುಮಾರ್ ಐರ್ಲೆಂಡ್‌ನಲ್ಲಿ 2006ರಲ್ಲಿ ನಡೆದ ಜೂನಿಯರ್ ವರ್ಲ್ಡ್ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಭರತ್ ಕುಮಾರ್ ಇಷ್ಟೆಲ್ಲಾ ಸಾಧನೆ ಮಾಡಿದ್ದರೂ, ಅವರಿಗೆ ಸಂತೃಪ್ತ ಬದುಕು ಸಾಧ್ಯವಾಗಲಿಲ್ಲ. ಹರ್ಯಾಣದ ಪ್ಯಾರಾಲಿಂಪಿಕ್ಸ್ ಈಜುಗಾರ ಭರತ್ ಕುಮಾರ್ ಗೆಹುಟ್ಟಿನಿಂದ ಎಡಗೈ ಇಲ್ಲ. ಹೀಗಿದ್ದರೂ ಅವರು ಸತತ ಪರಿಶ್ರಮದ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಬಾಚಿಕೊಂಡಿದ್ದರು. ಚೀನಾದಲ್ಲಿ 2010ರಲ್ಲಿ ನಡೆದ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾಗಿದ್ದರು. ಅಥ್ಲೀಟ್ ಭರತ್ ಕುಮಾರ್ ಜೀವನ ಸಾಗಿಸಲು ಬೇರಿ ದಾರಿಯಿಲ್ಲದೆ ಕಾರು ತೊಳೆಯುವ ವೃತ್ತಿಯನ್ನವಲಂಭಿಸಿದರು. ತಂದೆ ಕೂಲಿ ಕಾರ್ಮಿಕ. ಎಂಟರ ಹರೆಯಕ್ಕೆ ಕಾಲಿಟ್ಟಾಗ ಭರತ್ ಕುಮಾರ್‌ನನ್ನು ತಂದೆ ತನ್ನ ಚಿಕ್ಕಮ್ಮನ ಬಳಿ ಇರುವ ಕೋಣಗಳ ಮೈ ತೊಳೆಯುವ ಕಾರ್ಯಕ್ಕೆ ನಿಯೋಜಿಸಿದ್ದರು. ನಾಲ್ಕು ಕೋಣಗಳನ್ನು ನದಿಗೆ ಕೊಂಡೊಯ್ದು ಅವುಗಳಿಗೆ ಸ್ನಾನ ಮಾಡಿಸುತ್ತಾ ಈಜು ಕಲಿತ ಭರತ್ ಬಳಿಕ ಶಾಲಾ ಮಟ್ಟದ ,ವಲಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಬಾಚಿಕೊಂಡಿದ್ದರು.
2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಾಲು ನೋವಿನಿಂದಾಗಿ ಭಾಗವಹಿಸಲಿಲ್ಲ. ಬಳಿಕ ಅವರು ಈಜುಗಾರನಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡರು. 2011ರಲ್ಲಿ ರಾಷ್ಟ್ರಮಟ್ಟದ ಈಜುಗಾರನಾಗಿ ರೂಪುಗೊಂಡ ಭರತ್ ಕುಮಾರ್ ಈ ತನಕ 50ಕ್ಕೂ ಅಧಿಕ ಪದಕಗಳನ್ನು ಬಾಚಿಕೊಂಡಿದ್ದಾರೆ. ನೆಹರೂ ಸ್ಟೇಡಿಯಂನಲ್ಲಿ ತರಬೇತಿ ಪಡೆಯುವಾಗ ಪಥ್ಯಾನ್ನದ ಬಗ್ಗೆ ಚಿಂತೆ ಮಾಡಲಿಲ್ಲ. ಆದರೆ ಆಹಾರಕ್ಕಾಗಿ ಹಣವಿಲ್ಲದಾಗ ಸಾಯಿ ದೇವಸ್ಥಾನದ ಹೊರಗಡೆ ಭಿಕ್ಷುಕರ ಜತೆ ಭಿಕ್ಷೆ ಬೇಡಿದ್ದರು. ಭರತ್ ಕುಮಾರ್ ಅನೇಕ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿದ್ದರೂ, ಅವರಿಗೆ ಸರಕಾರಿ ಕೆಲಸ ಸಿಕ್ಕಿಲ್ಲ. ಈ ಕಾರಣದಿಂದಾಗಿ ಅವರು ಕಾರು ತೊಳೆಯುವ ವೃತ್ತಿಯನ್ನು ಆಯ್ದುಕೊಂಡಿದ್ದಾರೆ.
‘‘ ನನಗೆ ಒಂದು ಕೈ ಇಲ್ಲ. ಈ ಕಾರಣಕ್ಕಾಗಿ ನಾನು ಯಾರಿಗೂ ಬೇಕಾಗಿಲ್ಲ. ನನಗೆ ಪ್ರೋತ್ಸಾಹದ ಕೊರತೆ ಇದೆ. 2017ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ನನಗೆ ಪ್ರೋತ್ಸಾಹ ಅಗತ್ಯ. ನಾನು ನೆರವು ಯಾಚಿಸಿ ಹಲವು ಸೆಲೆಬ್ರಿಟಿಗಳ ಮೊರೆ ಹೋದೆ. ಆದರೆ ಯಾರಿಂದಲೂ ಈ ತನಕ ನನಗೆ ನೆರವು ಸಿಕ್ಕಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೆ. ಅವರ ಸಹಾಯದ ನಿರೀಕ್ಷೆಯಲ್ಲಿರುವೆ’’ ಎಂದು ಭರತ್ ಕುಮಾರ್ ಹೇಳಿದ್ದಾರೆ.