×
Ad

ಸಿಂಗಾಪುರದ ವಿರುದ್ಧ ಭಾರತಕ್ಕೆ ಸುಲಭ ಜಯ

Update: 2016-02-17 23:47 IST

ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್

ಹೈದರಾಬಾದ್, ಫೆ.17: ಸಿಂಗಾಪುರದ ವಿರುದ್ಧ 5-0 ಅಂತರದಿಂದ ಸುಲಭವಾಗಿ ಗೆಲುವು ಸಾಧಿಸಿರುವ ಭಾರತ ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ.

ಸೋಮವಾರ ನಡೆದ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಚೀನಾದ ವಿರುದ್ಧ ಸೋತಿರುವ ಭಾರತ ಇದೀಗ ಗೆಲುವಿನ ಹಳಿಗೆ ಮರಳಿದೆ. ಭಾರತ ಪ್ರತಿ ತಂಡದ ವಿರುದ್ಧ ಮೂರು ಸಿಂಗಲ್ಸ್ ಹಾಗೂ ಎರಡು ಡಬಲ್ಸ್ ಪಂದ್ಯಗಳನ್ನು ಆಡುತ್ತವೆ. ಇಲ್ಲಿನ ಗಾಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಕೆ. ಶ್ರೀಕಾಂತ್ ಅವರು ಸಿಂಗಾಪುರದ ಝಿ ಲಿಯಾಂಗ್ ಡೆರೆಕ್ ವಾಂಗ್‌ರನ್ನು 21-16, 12-21, 21-13 ಸೆಟ್‌ಗಳ ಅಂತರದಿಂದ ಮಣಿಸಿದರು.

ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ಅಜಯ್ ಜಯರಾಮ್ ಕೀಯನ್ ಯೀವ್ ಲೊರನ್ನು 21-11, 21-18 ಅಂತರದಿಂದ ಸುಲಭವಾಗಿ ಮಣಿಸಿದರು. 27ನೆ ರ್ಯಾಂಕಿನ ಎಚ್.ಎಸ್. ಪ್ರಣಯ್ ಮೂರನೆ ಸಿಂಗಲ್ಸ್ ಪಂದ್ಯದಲ್ಲಿ ಝಿನ್ ರೀ ರಿಯಾನ್‌ರನ್ನು 21-10, 21-12 ಗೇಮ್‌ಗಳ ಅಂತರದಿಂದ ಮಣಿಸಿ ಭಾರತಕ್ಕೆ 3-0 ಮುನ್ನಡೆ ಒದಗಿಸಿಕೊಟ್ಟರು.

ಭಾರತದ ಡಬಲ್ಸ್ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಎರಡೂ ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡಿದ್ದಾರೆ. ಮೊದಲ ಡಬಲ್ಸ್ ಪಂದ್ಯದಲ್ಲಿ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ಅವರು ಯಾಂಗ್ ಕೈಯ್ ಟೆರ್ರಿ ಹೀ-ಕೀಯನ್ ಲಾರನ್ನು 21-15, 21-14 ಗೇಮ್‌ಗಳ ಅಂತರದಿಂದ ಮಣಿಸಿದರು.

ಪ್ರಣಯ್ ಜೆರ್ರಿ ಚೋಪ್ರಾ ಹಾಗೂ ಅಕ್ಷಯ್ ದೇವಾಲ್ಕರ್ ಜೋಡಿ ಡ್ಯಾನಿ ಬಾವಾ ಕ್ರಿಸ್ನಂಟ ಹಾಗೂ ಹೆಂಡ್ರಾ ವಿಜಯರನ್ನು 21-14, 21-13 ಗೇಮ್‌ಗಳ ಅಂತರದಿಂದ ಸೋಲಿಸಿದೆ.

ಭಾರತದ ಮುಖ್ಯ ಕೋಚ್ ಪಿ. ಗೋಪಿಚಂದ್ ಭಾರತದ ಪ್ರಚಂಡ ಪ್ರದರ್ಶನವನ್ನೂ ಶ್ಲಾಘಿಸಿದ್ದಾರೆ. ‘‘ಇದೊಂದು ಉತ್ತಮ ಜಯ, 5-0 ಅಂತರದ ಗೆಲುವು ಅದ್ಭುತ. ಮುಂದಿನ ಪಂದ್ಯಗಳಲ್ಲೂ ಇದೇ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸವಿದೆ’’ ಎಂದು ಗೋಪಿಚಂದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News