×
Ad

ಭಾರತ ಬ್ಯಾಡ್ಮಿಂಟನ್ ಟೀಮ್ ಸೆಮಿ ಫೈನಲ್‌ಗೆ ಲಗ್ಗೆ

Update: 2016-02-19 23:37 IST

ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್

ಹೈದರಾಬಾದ್, ಫೆ.19: ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗೆಲುವಿನ ಓಟ ಮುಂದುವರಿದಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಮಲೇಷ್ಯಾವನ್ನು 3-2 ಅಂತರದಿಂದ ಮಣಿಸಿರುವ ಭಾರತ ಸೆಮಿ ಫೈನಲ್‌ಗೆ ಪ್ರವೇಶಿಸಿದೆ.

ಇಲ್ಲಿ ಗಾಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಐದು ಪಂದ್ಯಗಳನ್ನು (3 ಸಿಂಗಲ್ಸ್, 2 ಡಬಲ್ಸ್) ಒಳಗೊಂಡ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಹಾಗೂ ಮಲೇಷ್ಯಾ ತಂಡಗಳು ಒಂದು ಹಂತದಲ್ಲಿ 2-2 ರಿಂದ ಸಮಬಲ ಸಾಧಿಸಿದ್ದವು.

ಆಗ ನಿರ್ಣಾಯಕ ಸಿಂಗಲ್ಸ್ ಪಂದ್ಯವನ್ನು ಜಯಿಸಿದ ಎಚ್.ಎಸ್. ಪ್ರಣಯ್ ಭಾರತಕ್ಕೆ 3-2 ಅಂತರದ ರೋಚಕ ಗೆಲುವು ತಂದುಕೊಟ್ಟರು.

ಮಲೇಷ್ಯಾದ ಟೆಕ್ ಝೀ ಸೂರನ್ನು 21-12, 22-20 ಗೇಮ್‌ಗಳ ಅಂತರದಿಂದ ಮಣಿಸಿದ ಪ್ರಣಯ್ ಭಾರತವನ್ನು ಸೆಮಿ ಫೈನಲ್‌ಗೆ ತಲುಪಿಸಿದರು. ಭಾರತ ರವಿವಾರ ಸೆಮಿ ಫೈನಲ್ ಪಂದ್ಯವನ್ನು ಆಡಲಿದೆ.

27ನೆ ರ್ಯಾಂಕಿನ ಪ್ರಣಯ್ ಮೊದಲ ಗೇಮ್‌ನ್ನು 21-12 ರಿಂದ ಸುಲಭವಾಗಿ ಗೆದ್ದುಕೊಂಡರು. ಮಲೇಷ್ಯಾದ ಆಟಗಾರ ಎರಡನೆ ಗೇಮ್‌ನಲ್ಲಿ ತಿರುಗೇಟು ನೀಡಿದರು. ಅಂತಿಮವಾಗಿ ಪ್ರಣಯ್ 2ನೆ ಗೇಮ್‌ನ್ನು 22-20 ಅಂತರದಿಂದ ಗೆದ್ದುಕೊಂಡರು.

  ಇದಕ್ಕೆ ಮೊದಲು ಭಾರತದ ನಾಯಕ ಕೆ. ಶ್ರೀಕಾಂತ್ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಮಲೇಷ್ಯಾದ ಝುಲ್ಫದಿಲ್ ಝುಲ್ಕಿಫ್ಲಿ ಅವರನ್ನು 21-14, 21-15 ಗೇಮ್‌ಗಳ ಅಂತರದಿಂದ ಸೋಲಿಸಿ ಭಾರತಕ್ಕೆ ಶುಭಾರಂಭ ನೀಡಿದರು. ಗ್ರೂಪ್ ಪಂದ್ಯಗಳಲ್ಲಿ ಅಜೇಯರಾಗಿ ಉಳಿದರು.

ದಿನದ ಮೊದಲ ಡಬಲ್ಸ್ ಪಂದ್ಯದಲ್ಲಿ ಭಾರತದ ಡಬಲ್ಸ್ ಜೋಡಿಗಳಾದ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ಜೋಡಿ ಜುಯಾನ್ ಶೆನ್ ಲೋ-ಕಿಯಾಂಗ್ ಮೆಂಗ್ ಟಾನ್‌ರನ್ನು 10-21, 22-20,21-16 ಗೇಮ್‌ಗಳ ಅಂತರದಿಂದ ಮಣಿಸಿ 2-0 ಮುನ್ನಡೆ ಸಾಧಿಸಿತು.

25ನೆ ರ್ಯಾಂಕ್‌ನ ಅಜಯ್ ಜಯರಾಮ್ ಎರಡನೆ ಸಿಂಗಲ್ಸ್ ಪಂದ್ಯದಲ್ಲಿ 39ನೆ ರ್ಯಾಂಕ್‌ನ ಇಸ್ಕಂದರ್ ಝುಲ್ಕರ್‌ನೈನ್ ಝೈನುದ್ದೀನ್ ವಿರುದ್ಧ 21-17, 12-21, 16-21 ಸೆಟ್‌ಗಳಿಂದ ಶರಣಾಗುವ ಮೂಲಕ ಭಾರತಕ್ಕೆ ಭಾರೀ ನಿರಾಸೆ ತಂದರು.

ಎರಡನೆ ಡಬಲ್ಸ್ ಪಂದ್ಯದಲ್ಲಿ ಭಾರತದ ಪ್ರಣವ್ ಜೆ.ಚೋಪ್ರಾ ಹಾಗೂ ಅಕ್ಷಯ್ ದೇವಾಲ್ಕರ್ ಜೋಡಿ ಮಲೇಷ್ಯಾದ ಯೀವ್ ಸಿನ್ ಒಂಗ್ ಹಾಗೂ ಇ ಯೀ ಟಿಯೊ ವಿರುದ್ಧ 14-21, 21-14, 12-21 ಗೇಮ್‌ಗಳ ಅಂತರದಿಂದ ಶರಣಾದರು.

ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಜಯ ಸಾಧಿಸಿದ ಮಲೇಷ್ಯಾ 2-2 ರಿಂದ ಸಮಬಲ ಸಾಧಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News