ಮುಶರ್ರಫ್‌ಗೆ ಜಾಮೀನು ರಹಿತ ವಾರಂಟ್
ಇಸ್ಲಾಮಾಬಾದ್,ಫೆ.20: ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಶರ್ರಫ್ ಅವರಿಗೆ ಸ್ಥಳೀಯ ನ್ಯಾಯಾಲಯವೊಂದು ಶನಿವಾರ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.
2007ರಲ್ಲಿ ಇಸ್ಲಾಮಾಬಾದ್‌ನ ಲಾಲ್ ಮಸೀದಿಯಲ್ಲಿ ಭದ್ರತಾಪಡೆಗಳು ಮುತ್ತಿಗೆ ಹಾಕಿದ ಸಂದರ್ಭದಲ್ಲಿ ನಡೆದ ಧಾರ್ಮಿಕ ಮುಖಂಡ ಗಾಝಿ ಅಬ್ದುಲ್ ರಶೀದ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾರ್ಚ್ 16ರಂದು ತನ್ನ ಮುಂದೆ ಹಾಜರಾಗಬೇಕೆಂದು ಸೆಶನ್ಸ್ ನ್ಯಾಯಾಲಯವು ಮುಶರ್ರಫ್ ಅವರಿಗೆ ವಾರಂಟ್ ಜಾರಿಗೊಳಿಸಿದೆ.
ಪ್ರಕರಣದ ನ್ಯಾಯಾಂಗ ವಿಚಾರಣೆಗೆ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಬೇಕೆಂಬ ಮುಶರ್ರಫ್ ಅವರ ಮನವಿಯನ್ನೂ ನ್ಯಾಯಾಲಯ ತಳ್ಳಿಹಾಕಿದೆ. ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ನಡೆಸಿದ 55 ಆಲಿಕೆಗಳಿಗೂ ಮುಶರ್ರಫ್ ಹಾಜರಾಗಿರಲಿಲ್ಲ.
2007ರ ಜುಲೈನಲ್ಲಿ ಲಾಲ್ ಮಸೀದಿಯಲ್ಲಿ ಭದ್ರತಾಪಡೆಗಳು ಹಾಗೂ ಉಗ್ರಗಾಮಿಗಳ ನಡುವಿನ ಘರ್ಷಣೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಮೃತಪಟ್ಟಿದ್ದರು.
ಮಸೀದಿಯ ಮುಖ್ಯಧರ್ಮಗುರು ಅವರ ಸಹೋದರ ಗಾಝಿ ಅಬ್ದುಲ್ ರಶೀದ್, ಕೂಡಾ ದಾಳಿ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದರು.