ಪಠಾಣ್‌ಕೋಟ್ ದಾಳಿ ಪ್ರಕರಣ : ಮಾರ್ಚ್‌ನಲ್ಲಿ ಪಾಕ್ ತನಿಖಾಧಿಕಾರಿಗಳು ಭಾರತಕ್ಕೆ
Update: 2016-02-20 23:25 IST
ಇಸ್ಲಾಮಾಬಾದ್, ಫೆ.20: ಪಠಾಣ್‌ಕೋಟ್ ವಾಯುನೆಲೆಯ ಮೇಲೆ ದಾಳಿ ಪ್ರಕರಣದಲ್ಲಿ ಜೈಶೆ ಮುಹಮ್ಮದ್ ಉಗ್ರರು ಶಾಮೀಲಾಗಿದ್ದಾರೆಂಬ ಆರೋಪಗಳಿಗೆ ಸಂಬಂಧಪಟ್ಟ ಸಾಕ್ಷಾಧಾರಗಳನ್ನು ಸಂಗ್ರಹಿಸಲು ಪಾಕಿಸ್ತಾನಿ ತನಿಖಾಧಿಕಾರಿಗಳ ತಂಡವೊಂದು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆಯೆಂದು ಮಾಧ್ಯಮವರದಿಯೊಂದು ತಿಳಿಸಿದೆ.
ಜನವರಿ 2ರಂದು ನಡೆದ ಪಠಾಣ್‌ಕೋಟ್ ದಾಳಿ ಪ್ರಕರಣದಲ್ಲಿ ಜೈಶೆ ಮುಹಮ್ಮದ್ ಉಗ್ರರ ಪಾತ್ರವಿದೆಯೆಂದು ಪಂಜಾಬ್ ಪೊಲೀಸರು ಎಫ್‌ಐಆರ್‌ನಲ್ಲಿ ಆರೋಪಿಸಿದ್ದರು.ಇದಾದ ಕೆಲವು ವಾರಗಳ ನಂತರ ಪಾಕ್ ಪ್ರಧಾನಿ ನವಾಝ್ ಶರೀಫ್ ಆರು ಮಂದಿ ಸದಸ್ಯರ ತನಿಖಾ ತಂಡವನ್ನು ರಚಿಸಿದ್ದರು.
ಪಠಾಣ್‌ಕೋಟ್ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಏಜೆನ್ಸಿಯ ಅಧಿಕಾರಿಗಳನ್ನೂ ಪಾಕ್ ತನಿಖಾಧಿಕಾರಿಗಳು ಭೇಟಿಯಾಗಲಿದ್ದಾರೆ.