ಕೊಲೆ ಅಪರಾಧ: ನಾಲ್ಕರ ಪೋರನಿಗೆ ಜೀವಾವಧಿ ಶಿಕ್ಷೆ!
ಕೈರೋ, ಫೆ.20: ಈಜಿಪ್ಟಿನ ಮಿಲಿಟರಿ ನ್ಯಾಯಾಲಯ ವೊಂದು 4 ವರ್ಷದ ಬಾಲಕನೊಬ್ಬನನ್ನು ಆತ ಎರಡು ವರ್ಷದವನಿರುವಾಗ ನಡೆದ ಕೊಲೆ ಪ್ರಕರಣವೊಂದರಲ್ಲಿ ದೋಷಿಯೆಂದು ಪರಿಗಣಿಸಿದ್ದು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಹಮದ್ ಮನ್ಸೌರ್ ಕರ್ನಿ ಎಂಬ ಹೆಸರಿನ ಬಾಲಕನನ್ನು ಈ ವಾರ ಸಾಮೂಹಿಕ ವಿಚಾರಣೆ ನಡೆದ ಸಂದರ್ಭದಲ್ಲಿ ಆತನ ಅನುಪಸ್ಥಿತಿಯಲ್ಲಿ ಪಶ್ಚಿಮ ಕೈರೋದ ಮಿಲಿಟರಿ ನ್ಯಾಯಾಲಯವು ಆತನನ್ನು ಕೊಲೆ, ಶಾಂತಿ ಕದಡುವಿಕೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಿದೆ.
ಜನವರಿ 2014ರಲ್ಲಿ ಕೈರೋದ ದಕ್ಷಿಣಕ್ಕೆ 70 ಕಿ.ಮೀ. ದೂರವಿರುವ ಫಾಯೋಮ್ ಪ್ರಾಂತ್ಯದಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯವು ಶಿಕ್ಷೆಗೆ ಗುರಿಪಡಿಸಿದ ಒಟ್ಟು 116 ಮಂದಿಯಲ್ಲಿ ಕರ್ನಿ ಒಬ್ಬನಾಗಿದ್ದಾನೆ. ಬಾಲಕನ ಜನನ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದರೂ ಅದನ್ನು ನ್ಯಾಯಾಧೀಶರು ಓದಿಲ್ಲವೆಂದು ಪ್ರತಿವಾದಿ ವಕೀಲ ಫೈಸಲ್-ಎ- ಸೈಯದ್ ಜೆರುಸಲೆಂ ಪೋಸ್ಟ್‌ಗೆ ಹೇಳಿದ್ದಾರೆಂದು ವರದಿಯಾಗಿದೆ.
‘‘ಬಾಲಕನ ಹೆಸರನ್ನು ಆರೋಪಿಗಳ ಪಟ್ಟಿಗೆ ಸುರಕ್ಷಾ ಅಧಿಕಾರಿಗಳು ಸೇರಿಸಿದ ನಂತರ ಜನನ ಪ್ರಮಾಣ ಪತ್ರವನ್ನು ಸಲ್ಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಪ್ರಕರಣವನ್ನು ಮಿಲಿಟರಿ ಕೋರ್ಟ್‌ಗೆ ವರ್ಗಾಯಿಸಲಾಗಿತ್ತು ಹಾಗೂ ಮಗುವಿನ ಅನುಪಸ್ಥಿತಿಯಲ್ಲಿ ಶಿಕ್ಷೆಯನ್ನು ಘೋಷಿಸಲಾಯಿತು,’’ಎಂದು ಫೈಸಲ್ ಹೇಳಿದ್ದಾರೆನ್ನಲಾಗಿದೆ.
ಆರೋಪ ಪಟ್ಟಿಯಲ್ಲಿ 4 ಕೊಲೆಗಳು, ಎಂಟು ಕೊಲೆ ಯತ್ನಗಳು, ಈಜಿಪ್ಟ್ ಆರೋಗ್ಯ ಇಲಾಖೆಯ ಆಸ್ತಿ ಪಾಸ್ತಿ ಹಾನಿಗೊಳಿಸಿರುವುದು, ಸೈನಿಕರನ್ನು ಹಾಗೂ ಪೊಲೀಸರನ್ನು ಬೆದರಿಸಿರುವುದು ಹಾಗೂ ಸುರಕ್ಷಾ ಪಡೆಗಳ ವಾಹನಗಳನ್ನು ಹಾನಿಗೊಳಿಸಿರುವುದು ಸೇರಿವೆ.
ಶುಕ್ರವಾರ ಕರ್ನಿಯದ್ದೆಂದು ಹೇಳಲಾದ ಭಾವಚಿತ್ರವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿತ್ತಾದರೂ ನಂತರ ಆ ಭಾವಚಿತ್ರ ಆತನದ್ದಲ್ಲ ಬದಲಾಗಿ ಇಸ್ರೇಲಿ ಸೇನೆ 2013ರಲ್ಲಿ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ದಾಳಿ ಮಾಡಿದ ಮನೆಯೊಂದರ ಬಾಲಕನ ಚಿತ್ರವೆಂದು ತಿಳಿದು ಬಂದಿತ್ತು.
ಈಜಿಪ್ಟಿನಲ್ಲಿ ನ್ಯಾಯ ಇಲ್ಲವಾಗಿದ. ವಿಚಾರವಂತಿಕೆ ಇಲ್ಲಿ ಸ್ವಲ್ಪ ಹೊತ್ತಿಗೆ ಮುಂಚೆ ಆತ್ಮಹತ್ಯೆ ಮಾಡಿಕೊಂಡಿದೆ. ಈಜಿಪ್ಟನ್ನು ಹುಚ್ಚರ ಒಂದು ಗುಂಪು ಆಳುತ್ತಿದೆ.
ಮುಹಮ್ಮದ್ ಅಬೂ ಹುರೈರ, ಕರ್ನಿಯ ವಕೀಲ