×
Ad

ಏಷ್ಯಾಕಪ್: ಯುಎಇ ಪ್ರಧಾನ ಸುತ್ತಿಗೆ ತೇರ್ಗಡೆ

Update: 2016-02-22 23:46 IST

ಮೀರ್ಪುರ, ಫೆ.22: ಒಮನ್ ವಿರುದ್ಧ 71 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದ ಯುಎಇ ತಂಡ ಹ್ಯಾಟ್ರಿಕ್ ಗೆಲುವಿನೊಂದಿಗೆ ಏಷ್ಯಾಕಪ್‌ನ ಪ್ರಧಾನ ಸುತ್ತಿಗೆ ತಲುಪಿದೆ. ಸೋಮವಾರ ನಡೆದ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಯುಎಇ ತಂಡ ಮುಹಮ್ಮದ್ ಕಲೀಮ್(50) ಹಾಗೂ ಮುಹಮ್ಮದ್ ಉಸ್ಮಾನ್(46) ನೆರವಿನಿಂದ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಒಮನ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 101 ರನ್ ಗಳಿಸಿತು. ಝೀಶಾನ್ ಮಕ್ಸೂದ್(46) ಅಗ್ರ ಸ್ಕೋರರ್ ಎನಿಸಿಕೊಂಡರು. ಯುಎಇ ಪರ ಮುಹಮ್ಮದ್ ನವೀದ್(2-14) ಹಾಗೂ ಖಾದರ್ ಅಹ್ಮದ್(2-25) ತಲಾ 2 ವಿಕೆಟ್ ಪಡೆದರು.

ಅಫ್ಘಾನ್‌ಗೆ ಜಯ: ನಜೀಬುಲ್ಲಾ ಝದ್ರನ್ (ಔಟಾಗದೆ 60) ಮತ್ತು ಬೌಲರ್ ಮುಹಮ್ಮದ್ ನಬಿ (4-17) ಪ್ರಹಾರದ ನೆರವಿನಲ್ಲಿ ಅಫ್ಘಾನಿಸ್ತಾನ ತಂಡ ಏಷ್ಯಾಕಪ್‌ನ ಅರ್ಹತಾ ಸುತ್ತಿನ 5ನೆ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ 66 ರನ್‌ಗಳ ಜಯ ಗಳಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 179 ರನ್‌ಗಳ ಸವಾಲನ್ನು ಪಡೆದ ಹಾಂಕಾಂಗ್ ತಂಡ 17.1 ಓವರ್‌ಗಳಲ್ಲಿ 112 ರನ್‌ಗಳಿಗೆ ಆಲೌಟಾಯಿತು.   

ಆರಂಭಿಕ ಜೋಡಿ ಅಂಶುಮಾನ್ ರಾತ್ ಮತ್ತು ಕಿಂಚಿಟ್ ದೇವಾಂಗ್ ಶಾಹ ಮೊದಲ ವಿಕೆಟ್‌ಗೆ 6.3 ಓವರ್‌ಗಳಲ್ಲಿ 56 ರನ್ ದಾಖಲಿಸಿ ಉತ್ತಮ ಆರಂಭ ಒದಗಿಸಿದ್ದರು. ಶಾಹ 27 ನಿಮಿಷಗಳ ಬ್ಯಾಟಿಂಗ್‌ನಲ್ಲಿ 19 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 29 ರನ್ ಗಳಿಸಿದ್ದಾಗ ಅವರನ್ನು ಮುಹಮ್ಮದ್ ನಬಿ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಬಾಬರ್ ಹಯಾತ್ ಕ್ರೀಸ್‌ಗೆಆಗಮಿಸಿ ತಂಡದ ಸ್ಕೋರ್‌ನ್ನು 10 ಓವರ್‌ಗಳಲ್ಲಿ 79ಕ್ಕೆ ಏರಿಸಲು ನೆರವಾದರು. ಅವರು 18 ರನ್(16ಎ, 2ಬೌ,1ಸಿ) ಗಳಿಸಿದರು. ಬಳಿಕ ತಂಡದ ಬ್ಯಾಟಿಂಗ್ ಸೊರಗಿತು. ಮುಹಮ್ಮದ್ ನಬಿ(4-17), ರಶೀದ್ ಖಾನ್ (2-10), ದವಲತ್ ಝಾದ್ರಾನ್(2-18) ದಾಳಿಯನ್ನು ಎದುರಿಸಲಾರದೆ ಹಾಂಕಾಂಗ್ ಬೇಗನೆ ಇನಿಂಗ್ಸ್ ಮುಗಿಸಿತು. 10 ಓವರ್‌ಗಳಲ್ಲಿ 79ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಹಾಂಕಾಂಗ್ ಬಳಿಕ ಈ ಮೊತ್ತಕ್ಕೆ 33 ರನ್ ಸೇರಿಸುವಷ್ಟರಲ್ಲಿ ಅಂತಿಮ ಏಳು ವಿಕೆಟ್‌ಗಳನ್ನು ಕಳೆದುಕೊಂಡು ಆಲೌಟಾಯಿತು. ಅಂಶುಮಾನ್ ರಾತ್ 41 ರನ್(66ನಿ, 38 ಎ,5 ಬೌ) ಗಳಿಸಿ ಔಟಾದರು.

ಅಫ್ಘಾನಿಸ್ತಾನ 178/7:   ಹಾಂಕಾಂಗ್ ಟಾಸ್ ಜಯಿಸಿ ಅಫ್ಘಾನಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಅಫ್ಘಾನಿಸ್ತಾನ 3.5 ಓವರ್‌ಗಳಲ್ಲಿ 27 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತ್ತು. ನೂರ್ ಅಲಿ ಝದ್ರನ್ 9 ರನ್ ಗಳಿಸಿ ಔಟಾದರು. 7 ಓವರ್‌ಗಳಲ್ಲಿ 52 ರನ್ ಗಳಿಸುವಾಗ ಇನ್ನೊಂದು ವಿಕೆಟ್ ಉರುಳಿತು. 24 ರನ್ ಗಳಿಸಿದ್ದ ಶಹಝಾದ್ ಪೆವಿಲಿಯನ್ ಸೇರಿದರು. ಕರೀಮ್ ಸಾದಿಕ್ 10 ರನ್ ಗಳಿಸಿ ಔಟಾದರು. 4ನೆ ವಿಕೆಟ್‌ಗೆ ಅಸ್ಘರ್ ಸ್ಟೈನಿಕ್‌ಝೈ ಮತ್ತು ನಜೀಬುಲ್ಲಾ ಝದ್ರನ್ 49 ರನ್‌ಗಳ ಜೊತೆಯಾಟ ನೀಡಿದರು. ಇವರ ಬ್ಯಾಟಿಂಗ್ ನೆರವಿನಲ್ಲಿ ತಂಡದ ಸ್ಕೋರ್ 15.2 ಓವರ್‌ಗಳಲ್ಲಿ 132ಕ್ಕೆ ತಲುಪಿತು. ಅಸ್ಘರ್ 1 ರನ್‌ನಿಂದ ಅರ್ಧ ಶತಕ ವಂಚಿತಗೊಂಡರು. 51 ನಿಮಿಷಗಳ ಬ್ಯಾಟಿಂಗ್‌ನಲ್ಲಿ 49 ರನ್(35ಎ, 4ಬೌ, 3ಸಿ) ಗಳಿಸಿದರು. ಬಳಿಕ 3 ವಿಕೆಟ್ ಪಟಪಟನೆ ಉರುಳಿ ಅಫ್ಘಾನಿಸ್ತಾನ ಒತ್ತಡಕ್ಕೆ ಸಿಲುಕಿತು. ಏಳನೆ ವಿಕೆಟ್‌ಗೆ ನಜೀಬುಲ್ಲಾ ಝದ್ರನ್ ಮತ್ತು ದವಲತ್ ಝದ್ರನ್ 41 ರನ್ ಸೇರಿಸಿದರು. ನಜೀಬುಲ್ಲಾ ಝದ್ರನ್ ಔಟಾಗದೆ 60 ರನ್(48ನಿ, 35ಎ, 3 ಬೌ, 4ಸಿ) ಗಳಿಸಿದರು. ಅವರು 39 ನಿಮಿಷಗಳ ಬ್ಯಾಟಿಂಗ್‌ನಲ್ಲಿ 30 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ ಅರ್ಧಶತಕ ಬಾರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News