ಏಷ್ಯಾ ಕಪ್: ಭಾರತಕ್ಕೆ ಧೋನಿ ಫಿಟ್‌ನೆಸ್ ಚಿಂತೆ ,ಮೊದಲ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾ ಸವಾಲು

Update: 2016-02-23 18:02 GMT

ಢಾಕಾ, ಫೆ.23: ಟ್ವೆಂಟಿ-20 ಬದಲಾಗಿರುವ ಏಷ್ಯಾ ಕಪ್‌ನ ಮೊದಲ ಪಂದ್ಯ ಬಾಂಗ್ಲಾದ ಮೀರ್ಪುರದಲ್ಲಿ ಬುಧವಾರ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಬಾಂಗ್ಲಾ ತಂಡವನ್ನು ಎದುರಿಸಲಿದೆ. ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗೆ ಭಾರತಕ್ಕೆ ಇದು ಅಂತಿಮ ತಯಾರಿಯ ಟೂರ್ನಿಯಾಗಿದೆ. ಆದರೆ ಭಾರತಕ್ಕೆ ಪಂದ್ಯ ಆರಂಭಕ್ಕೂ ಮುನ್ನ ಸಮಸ್ಯೆ ಎದುರಿಸುವಂತಾಗಿದೆ. ನಾಯಕ ಮಹೇಂದ್ರ ಸಿಂಗ್ ಧೋನಿ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಅವರು ಏಷ್ಯಾಕಪ್‌ಗೆ ಫಿಟ್ ಆಗುತ್ತಾರೋ ಎನ್ನುವ ಬಗ್ಗೆ ಸ್ಪಷ್ಟಗೊಂಡಿಲ್ಲ. ಒಂದು ವೇಳೆ ಧೋನಿ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಲು ಅಸಮರ್ಥರಾದರೆ ಅವರ ಬದಲಿಗೆ ಪಾರ್ಥಿವ್ ಪಟೇಲ್ ಈ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ. ಆಯ್ಕೆ ಸಮಿತಿಯು ಪಟೇಲ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ.

 ಧೋನಿಗೆ ಸೋಮವಾರ ಅಭ್ಯಾಸದ ವೇಳೆ ಗಾಯವಾಗಿತ್ತು. ಧೋನಿ ನಾಯಕತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯ ಮತ್ತು ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಸರಣಿಗಳನ್ನು ಜಯಿಸಿ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದೆ. ಭಾರತ ಈ ವರ್ಷ ಒಟ್ಟು ಆರು ಟ್ವೆಂಟಿ-20 ಪಂದ್ಯಗಳನ್ನು ಆಡಿದೆ. ಅದರಲ್ಲಿ ಐದರಲ್ಲಿ ಜಯಿಸಿತ್ತು. ಶ್ರೀಲಂಕಾ ವಿರುದ್ಧ ಒಂದು ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಭಾರತ ಏಷ್ಯಾ ಕಪ್‌ನಲ್ಲಿ ಒಂದು ವೇಳೆ ಫೈನಲ್ ತಲುಪಿದರೆ ವಿಶ್ವಕಪ್‌ನ ಮೊದಲು ಅದು ಒಟ್ಟು ಹನ್ನೊಂದು ಪಂದ್ಯಗಳನ್ನು ಆಡಿದಂತಾಗುತ್ತದೆ.


ಬ್ಯಾಟಿಂಗ್, ಸ್ಪಿನ್ ಬೌಲಿಂಗ್‌ನಲ್ಲಿ ಬಲಿಷ್ಠ ಭಾರತ: ಭಾರತದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಶಿಖರ್ ಧವನ್ ರೋಹಿತ್ ಶರ್ಮ ಅಗ್ರ ಸರದಿಯಲ್ಲಿ ಅಪೂರ್ವ ಫಾರ್ಮ್‌ನಲ್ಲಿದ್ದಾರೆ. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೂರು ವಾರಗಳ ವಿರಾಮದ ಬಳಿಕ ತಂಡಕ್ಕೆ ವಾಪಸಾಗಿದ್ದಾರೆ. ಆಸ್ಟ್ರೇಲಿಯ ಸರಣಿಯ ಬಳಿಕ ಅವರು ಆಡಿರಲಿಲ್ಲ. ಲಂಕಾ ಪ್ರವಾಸಕ್ಕೆ ವಿಶ್ರಾಂತಿ ಬಯಸಿದ್ದರು.
ಕೊಹ್ಲಿ ನಂ.3 ಮತ್ತು ಚುಟುಕು ಕ್ರಿಕೆಟ್ ತಜ್ಞ ಸುರೇಶ್ ರೈನಾ ನಂ.4 ಕ್ರಮಾಂಕದಲ್ಲಿ ಆಡಲಿದ್ದಾರೆ. ಆಲ್‌ರೌಂಡರ್ ಯುವರಾಜ್ ಸಿಂಗ್ ತಂಡದಲ್ಲಿದ್ದಾರೆ.

 ರವಿಚಂದ್ರನ್ ಅಶ್ವಿನ್, ಆಶೀಶ್ ನೆಹ್ರಾ, ಜಸ್‌ಪ್ರೀತ್ ಬುಮ್ರಾ ತಂಡದಲ್ಲಿದ್ದಾರೆ. ಬುಮ್ರಾ ಸೋಮವಾರ ಅಭ್ಯಾಸ ನಡೆಸಲಿಲ್ಲ. ಅವರಿಗೆ ಪರಿಸರಕ್ಕೆ ಹೊಂದಿಕೊಳ್ಳದ ಹಿನ್ನೆಲೆಯಲ್ಲಿ ವಿಶ್ರಾಂತಿಗೆ ಸಲಹೆ ನೀಡಲಾಗಿತ್ತು. ರವಿಚಂದ್ರನ್ ಅಶ್ವಿನ್ ಉಪಖಂಡದ ಪಿಚ್‌ನಲ್ಲಿ ಅಪೂರ್ವ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಆರು ಪಂದ್ಯಗಳಲ್ಲಿ ಅವರು 13 ವಿಕೆಟ್ ಸಂಪಾದಿಸಿದ್ದಾರೆ. ನೆಹ್ರಾ ಮತ್ತು ಬುಮ್ರಾ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವುದನ್ನು ನಿರೀಕ್ಷಿಸಲಾಗಿದೆ.


ಮುಸ್ತಾಫಿಝರ್ರಹ್ಮಾನ್ ಭೀತಿ: ಜೂನ್ 2015ರಲ್ಲಿ ನಡೆದ ಏಕದಿನ ಸರಣಿಯಲ್ಲಿ ಮುಸ್ತಾಫಿಝರ್ರಹ್ಮಾನ್‌ಟೀಮ್ ಇಂಡಿಯಾವನ್ನು ಕಾಡಿದ್ದರು. ಮುಸ್ತಾಫಿಝರ್ರಹ್ಮಾನ್, ತಸ್ಕೀನ್ ಅಹ್ಮದ್ ಮತ್ತು ಅಲ್ ಅಮೀನ್ ಹುಸೈನ್ ಭಾರತದ ದಾಂಡಿಗರಿಗೆ ಸವಾಲಾಗಲಿದ್ದಾರೆ.


ಅನುಭವಿ ನಾಯಕ ಮಶ್ರಾಫೆ ಮೊರ್ತಾಝೆ,ಆಲ್‌ರೌಂಡರ್ ಶಾಕಿಬ್ ಅಲ್ ಹಸನ್, ಮಾಜಿ ನಾಯಕ ಮುಶ್ಫೀಕುರ್ರಹೀಮ್ ವರನ್ನೊಳಗೊಂಡ ಬಾಂಗ್ಲಾ ತಂಡ ಬಲಿಷ್ಠವಾಗಿದೆ.ಅನುಭವಿ ಎಡಗೈ ಬ್ಯಾಟ್ಸ್‌ಮನ್ ಸೌಮ್ಯ ಸರ್ಕಾರ್, ವರ್ಲ್ಡ್ ಕಪ್ ಹೀರೊ ಮಹಮ್ಮದುಲ್ಲಾ ಬಾಂಗ್ಲಾದ ಬ್ಯಾಟಿಂಗ್ ವಿಭಾಗದಲ್ಲಿ ಇದ್ದಾರೆ.


ತಂಡ
ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ರವೀಂದ್ರ ಜಡೇಜ, ಹಾರ್ದಿಕ್ ಪಾಂಡ್ಯ, ಆಶೀಶ್ ನೆಹ್ರಾ, ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬುಮ್ರಾ, ಅಜಿಂಕ್ಯ ರಹಾನೆ, ಹರ್ಭಜನ್ ಸಿಂಗ್, ಭುವೇಶ್ವರ ಕುಮಾರ್, ಪವನ್ ನೇಗಿ, ಪಾರ್ಥಿವ್ ಪಟೇಲ್.
 ಬಾಂಗ್ಲಾದೇಶ: ಮಶ್ರಾಫೆ ಮೊರ್ತಾಝಾ(ನಾಯಕ), ಇಮ್ರುಲ್ ಖೈಸ್, ನೂರುಲ್ ಹಸನ್, ಸೌಮ್ಯ ಸರ್ಕಾರ್, ನಾಸೀರ್ ಹುಸೈನ್, ಶಬೀರ್ ರಹ್ಮಾನ್, ಮಹಮ್ಮದುಲ್ಲಾ ರಿಯಾಝ್, ಮುಶ್ಫೀಕುರ್ರಹೀಮ್(ವಿಕೆಟ್ ಕೀಪರ್), ಶಾಕೀಬ್ ಅಲ್ ಹಸನ್, ಅಲ್ ಅಮೀನ್ ಹುಸೈನ್, ತಸ್ಕೀನ್ ಅಹ್ಮದ್, ಮುಸ್ತಾಫಿಝರ್ರಹ್ಮಾನ್, ಅಬೂ ಹೈದರ್ ಮುಹಮ್ಮದ್ ಮಿಥುನ್, ಅರಾಫತ್ ಸುನ್ನಿ.


ಪಂದ್ಯದ ಸಮಯ: ರಾತ್ರಿ 7 ಗಂಟೆಗೆ ಆರಂಭ


ಹೈಲೈಟ್ಸ್
  
 *ಈ ಆವೃತ್ತಿಯ ಏಷ್ಯಾಕಪ್‌ಎಲ್ಲವೂ 50 ಓವರ್‌ಗಳ ಬದಲಿಗೆ 20 ಓವರ್‌ಗಳ ಕ್ರಿಕೆಟ್ ಆಗಿ ಮಾರ್ಪಟ್ಟಿದೆ. *ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಯುಎಇ, ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ರಧಾನ ಸುತ್ತು ಪ್ರವೇಶಿಸಿದೆ.

*ಆ್ಯಂಜೆಲೊ ಮ್ಯಾಥ್ಯೂಸ್ ನಾಯಕತ್ವದ ಶ್ರೀಲಂಕಾ ತಂಡ 2014ರಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಐದು ಬಾರಿ ಪ್ರಶಸ್ತಿ ಜಯಿಸಿದ ಭಾರತದ ಸಾಧನೆಯನ್ನು ಸರಿಗಟ್ಟಿತ್ತು.

*1984ರಲ್ಲಿ ಮೊದಲ ಏಷ್ಯಾಕಪ್ ಯುಎಇಯಲ್ಲಿ ನಡೆದಿತ್ತು. ಭಾರತ ಚೊಚ್ಚಲ ಚಾಂಪಿಯನ್.

* ತಲಾ ಐದು ಬಾರಿ ಪ್ರಶಸ್ತಿ ಜಯಿಸಿರುವ ಭಾರತ ಮತ್ತು ಹಾಲಿ ಚಾಂಪಿಯನ್ ಶ್ರೀಲಂಕಾ ಯಶಸ್ವಿ ತಂಡಗಳಾಗಿವೆ. ಪಾಕಿಸ್ತಾನ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು. ಬಾಂಗ್ಲಾದೇಶ 2012ರಲ್ಲಿ ಫೈನಲ್ ಪ್ರವೇಶಿಸಿತ್ತು. ಇದು ಬಾಂಗ್ಲಾದ ಈ ವರೆಗಿನ ದೊಡ್ಡ ಸಾಧನೆಯಾಗಿದೆ.

 *ಈ ಆವೃತ್ತಿಯ ಎಲ್ಲ ಪಂದ್ಯಗಳು ಮೀರ್ಪುರದ ಶೇರ್-ಎ-ಬಾಂಗ್ಲಾ ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

* ಭಾರತ ಈ ತನಕ ಏಷ್ಯಾಕಪ್‌ನಲ್ಲಿ 43 ಪಂದ್ಯಗಳನ್ನು ಆಡಿದೆ. 26ರಲ್ಲಿ ಜಯ ಗಳಿಸಿದೆ. 16 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ.

*ಶ್ರೀಲಂಕಾದ ಸನತ್ ಜಯಸೂರ್ಯ(1,220) ಏಷ್ಯಕಪ್‌ನಲ್ಲಿ ಗರಿಷ್ಠ ರನ್ ದಾಖಲಿಸಿದವರು. ಕುಮಾರ ಸಂಗಕ್ಕರ (1,075) ಎರಡನೆ ಮತ್ತು ಸಚಿನ್ ತೆಂಡುಲ್ಕರ್(971) ಮೂರನೆ ಸ್ಥಾನ ಪಡೆದಿದ್ದಾರೆ.

*ಮಹೇಂದ್ರ ಸಿಂಗ್ ಧೋನಿ 13 ಪಂದ್ಯಗಳಲ್ಲಿ ಭಾರತದ ನಾಯಕತ್ವ ವಹಿಸಿಕೊಂಡಿದ್ದರು.

* ಶ್ರೀಲಂಕಾದ ಅರ್ಜುನ್ ರಣತುಂಗ ಮತ್ತು ಮಹೇಂದ್ರ ಸಿಂಗ್ ಧೋನಿ ಯಶಸ್ವಿ ನಾಯಕರು. ಅವರ ನಾಯಕತ್ವದಲ್ಲಿ ಆಡಲಾದ ಪಂದ್ಯಗಳಲ್ಲಿ ತಲಾ 9ರಲ್ಲಿ ಉಭಯ ತಂಡಗಳು ಜಯ ಗಳಿಸಿವೆ. ನಾಲ್ಕರಲ್ಲಿ ಸೋಲು ಅನುಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News